ವಿಶ್ವಕೋಶ ರಸಯಾತ್ರೆ – 7
* ಕಲ್ಗುಂಡಿ ನವೀನ್
response@134.209.153.225
ksn.bird@gmail.com
ವಿಶ್ವಕೋಶದ ಪರಿಷ್ಕರಣದ ಕಾರ್ಯ ಆರಂಭವಾಗುತ್ತಲೇ ತಿಳಿದಿದ್ದು ಹೊಸ ಲೇಖನಗಳ ಅಗತ್ಯ. ಆಯಾ ಕ್ಷೇತ್ರಗಳ ಸಂಪಾದಕರುಗಳು ಈ ಕಾರ್ಯವನ್ನು ಸೊಗಸಾಗಿ ನಿರ್ವಹಿಸಿದರು. ವಿಶ್ವಕೋಶದ ಮುದ್ರಿತ ಆವೃತ್ತಿಯಲ್ಲಿರದ ಅನೇಕ ಹೊಸ ಲೇಖನಗಳು ಇಲ್ಲಿ ಸೇರ್ಪಡೆಯಾದವು. ವಿಶ್ವಕೋಶ ಸಿಡಿ ಮತ್ತು ಡಿವಿಡಿ ರೂಪದಲ್ಲಿ ಬರುತ್ತಿದ್ದುದರಿಂದ ಸ್ಥಳಾವಕಾಶದ ಸಮಸ್ಯೆಯಿರಲಿಲ್ಲ. ಮಹತ್ವದ ಲೇಖನಗಳು ಸೇರಿದವು.
ಇಲ್ಲಿ ಎರಡು ಕ್ಷೇತ್ರಗಳ ಸೇರ್ಪಡೆಯನ್ನು ಮಾತ್ರ ನೆನಪಿಸಿಕೊಳ್ಳುತ್ತಿದ್ದೇನೆ. ಮೊದಲನೆಯದು ಪದಾರ್ಥ ವಿಜ್ಞಾನ (ಮೆಟೀರಿಯಲ್ ಸೈನ್ಸ್) ಮತ್ತೊಂದು ವನ್ಯಜೀವಿ ವಿಜ್ಞಾನ.ಪದಾರ್ಧ ವಿಜ್ಞಾನವನ್ನು ಬರೆದುಕೊಟ್ಟವರು ಇಸ್ರೋದಲ್ಲಿ ಆ ವಿಭಾಗದ ವಿಜ್ಞಾನಿಗಳಾಗಿದ್ದ ಸಿ ಆರ್ ಸತ್ಯ. ಇವರ ಪರಿಚಯ ಹೇಗಾಯಿತೋ ಮರೆತಿದೆ, ಆದರೆ ಆ ವ್ಯಕ್ತಿಯನ್ನು ಮರೆಯಲು ಸಾಧ್ಯವೇ ಇಲ್ಲ! ಅಂತಹ ವ್ಯಕ್ತಿತ್ವ ಅವರದ್ದು, ಅಷ್ಟೇ ಸರಳರು. ಪದಾರ್ಥ ವಿಜ್ಞಾನ, ವಿಜ್ಞಾನಕ್ಕಿಂತ ಹೆಚ್ಚಾಗಿ ಎಂಜಿನಿಯರಿಂಗ್ ವಿಷಯ. ಇದನ್ನು ಅದೆಷ್ಟು ಸರಳವಾಗಿ ಕನ್ನಡದಲ್ಲಿ ಬರೆದುಕೊಟ್ಟರೆಂದರೆ, ಅದನ್ನು ಓದಿಯೇ ಸವಿಯಬೇಕು. ಪದಾರ್ಥವಿಜ್ಞಾನ ಕುರಿತಾಗಿ ಇದಕ್ಕೂ ಮುಂಚೆ ಕನ್ನಡದಲ್ಲಿ ಲೇಖನ ಬಂದಿತ್ತೆ? ತಿಳಿಯದು. ಸುಮಾರು ಮುವ್ವತ್ತೈದು ಪುಟಗಳಷ್ಟು ವಿಸ್ತಾರವಾದ ಲೇಖನ, ಚಿತ್ರಗಳನ್ನೂ ಕೊಟ್ಟಿದ್ದರು. ಪೂರ್ತಿ ಕೈಬರಹದ ಲೇಖನ! ಅಂತೂ ವಿಶ್ವಕೋಶಕ್ಕೆ ಒಂದು ಅತಿ ಮಹತ್ವದ ವಿಭಾಗವೇ ಸೇರಿದಂತಾಯಿತು. ಅವರು ಕನ್ನಡದ ಆಶ್ವಿನಿ ದೇವತೆಗಳಲ್ಲೊಬ್ಬರಾದ ಪ್ರೊ ಎ ಆರ್ ಕೃ ಅವರ ಮೊಮ್ಮಗ. ಇದನ್ನು ಕೇವಲ ಪ್ರಾಸಂಗಿಕವಾಗಿ ಹೇಳಿದ್ದೇನೆ ಅಷ್ಟೆ.
ಹಾಗೆಯೇ ಸೇರಿಸಲಾದ ಮತ್ತೊಂದು ಮಹತ್ವದ ಕ್ಷೇತ್ರವೆಂದರೆ, ವನ್ಯಜೀವಿ ವಿಜ್ಞಾನ. ಈ ಕ್ಷೇತ್ರದ ಮೂಲಭೂತ ವಿಷಯಗಳನ್ನು ಕುರಿತು ಕನ್ನಡದ ಮತ್ತೊಬ್ಬ ಹೆಮ್ಮೆಯ ವಿಜ್ಞಾನಿ ಡಾ ಕೆ ಉಲ್ಲಾಸ ಕಾರಂತರು ಬರೆದುಕೊಟ್ಟರು. ಜತೆಗೆ, ಹುಲಿ ಕುರಿತಾಗಿ ಹದಿನೇಳು ಪುಟದಷ್ಟು ವಿಸ್ತಾರವಾದ ಲೇಖನವನ್ನು ಬರೆದುಕೊಟ್ಟರು! ಹುಲಿಯನ್ನು ಕುರಿತ ಇಂತಹ ಲೇಖನ ಬ್ರಿಟಾನಿಕ ವಿಶ್ವಕೋಶದಲ್ಲಿಯೂ ಇಲ್ಲ ಎಂಬುದು ಕನ್ನಡಕ್ಕೆ ಮೂಡಿದ ಗರಿಯೇ ಸರಿ. ಇಷ್ಟೇ ಅಲ್ಲದೆ, ಬ್ರಿಟನ್ನಿನ ಸಂಸ್ಥೆಯೊಂದಕ್ಕೆ ತಾವೇ ಖುದ್ದು ಪತ್ರ ಬರೆದು ನಮಗೆ ಅತ್ಯುತ್ತಮವಾದ ವಿಡಿಯೋವನ್ನು ಹಾಗೂ ಅದನ್ನು ಬಳಸಿಕೊಳ್ಳಲು ಅನುಮತಿಯನ್ನು ತರಿಸಿಕೊಟ್ಟರು! ಇದು ವಿಶ್ವಕೋಶದ ಶೈಕ್ಷಣಿಕ ಎತ್ತರವನ್ನು ಮತ್ತಷ್ಟು ಹೆಚ್ಚಿಸಿತು. ಇವರು ಎಲ್ಲರಿಗೂ ತಿಳಿದಿರುವಂತೆ ಡಾ ಶಿವರಾಮ ಕಾರಂತರ ಪುತ್ರರು.
ಈ ಎಲ್ಲವನ್ನೂ ಸಂಯೋಜಿಸುವ ಭಾಗ್ಯ ನನ್ನದಾಗಿತ್ತು! ಹೀಗೆ ಒಂದು ಒಳ್ಳೆಯ ಕಾರ್ಯ ನಡೆಯುತ್ತಿದ್ದರೆ ಇಡೀ ಜಗತ್ತು ಅದಕ್ಕಾಗಿ ಶ್ರಮಿಸುತ್ತದೆ ಎಂಬ ಜಪಾನಿ ಗಾದೆಯಂತೆ ವಿಜ್ಞಾನ ತಂತ್ರಜ್ಞಾನ ಜಗತ್ತಿನ ದಿಗ್ಗಜರು ಇದಕ್ಕೆ ಲೇಖನ ಬರೆಯುವ ಮೂಲಕ, ಚಿತ್ರ, ವಿಡಿಯೋ ಒದಗಿಸುವ ಮೂಲಕ ಇದರ ಶೈಕ್ಷಣಿಕ ಮಹತ್ವವನ್ನು ಅದೆಷ್ಟೋ ಪಟ್ಟು ಹೆಚ್ಚಿಸಿದರು.