Sunday, May 29, 2022

‘ಕುದಿಯುವ ಕಪ್ಪೆಯ ಸಿಂಡ್ರೋಮ್’ನಿಂದ ಹೊರಬನ್ನಿ

Follow Us

ಕೆಲವೊಮ್ಮೆ ನಾವು ಅಪಾಯಕಾರಿ ಪರಿಸ್ಥಿತಿಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತೇವೆ. ಇಂತಹ ಮನೋಭಾವ ಸಲ್ಲದು. ಅಪಾಯದ, ಎಚ್ಚರಿಕೆಯ ಕರೆಗಂಟೆಯ ಲಕ್ಷಣಗಳು ಗೋಚರಿಸುತ್ತಲೇ ನಾವು ಅದರಿಂದ ಹೊರಬರಲು ಪ್ರಯತ್ನಿಸಬೇಕು. ಅಪಾಯಕಾರಿ ಪರಿಸ್ಥಿತಿಯಲ್ಲಿ ಮೊಂಡುತನ ತೋರಬಾರದು, ಕುದಿಯುವ ಕಪ್ಪೆಯಂತೆ ಇರಬೇಡಿ. ಆರೋಗ್ಯ, ಸಂಬಂಧಗಳು, ವೃತ್ತಿ ಅಥವಾ ಉದ್ಯೋಗ, ವ್ಯವಹಾರ ಹೂಡಿಕೆಗಳಂತಹ ಸನ್ನಿವೇಶಗಳನ್ನು ಸರಿಯಾಗಿ ಗ್ರಹಿಸಿ, ಶಕ್ತಿ ಇರುವಾಗಲೇ ಪರಿಸ್ಥಿತಿಗಳಿಂದ ಹೊರಬನ್ನಿ.
♦ ಹರೀಶ್‍ಕುಮಾರ್ ಸಿ.ವಿ.
ಮನೋತಜ್ಞರು, ಆಪ್ತ ಸಮಾಲೋಚಕರು
newsics.com@gmail.com

 ಕ್ಷಿಗಳು ಹಾಗೂ ಸಸ್ತನಿಗಳು ಬಿಸಿರಕ್ತ ಪ್ರಾಣಿಗಳು. ಮೀನುಗಳು, ಉಭಯವಾಸಿಗಳು ಮತ್ತು ಸರಿಸೃಪಗಳು ಶೀತರಕ್ತ ಪ್ರಾಣಿಗಳೆಂದು ನಮಗೆ ತಿಳಿದಿದೆ. ಬಿಸಿರಕ್ತ ಪ್ರಾಣಿಗಳ ದೇಹದ ಉಷ್ಣತೆಯು ಎಂತಹ ಋತುಮಾನದಲ್ಲೂ ಸ್ಥಿರವಾಗಿದ್ದರೆ, ಶೀತರಕ್ತ ಪ್ರಾಣಿಗಳು ಋತುಮಾನಕ್ಕನುಗುಣವಾಗಿ ತಮ್ಮ ದೇಹದ ಉಷ್ಣತೆಯನ್ನು ಮಾರ್ಪಾಟು ಮಾಡಿಕೊಳ್ಳುತ್ತವೆ. ಈ ಹೊಂದಾಣಿಕೆಯ ಗುಣವೇ ಅವುಗಳು ಪ್ರಕೃತಿಯಲ್ಲಿ ಜೀವಿಸಲು ಸಾಧ್ಯವಾಗಿದೆ. ರಕ್ಷಣಾ ತಂತ್ರಗಳು, ಪ್ರಾಣಿಗಳು ಹಾಗೂ ಮನುಷ್ಯರಿಗೆ ಪ್ರಕೃತಿಯು ನೀಡಿದ ಅತ್ಯಮೂಲ್ಯ ಕೊಡುಗೆ. ಯಾವುದೇ ಅಪಾಯ ಎದುರಾದರೆ ಅದನ್ನು ಎದುರಿಸಲು ‘ಓಡು ಇಲ್ಲವೇ ಕಾದಾಡು’ ಎಂಬ ಮೂಲ ಪ್ರವೃತ್ತಿಯನ್ನು ಪ್ರಕೃತಿ ಜೀವಿಗಳಿಗೆ ನೀಡಿದೆ. ಈ ಪ್ರವೃತ್ತಿಯು ದೇಹದ ಶಕ್ತಿಯೆಲ್ಲಾ ಅಪಾಯ ಎದುರಿಸಲು ಸಹಕಾರಿಯಾಗಿದೆ. ಮಾನವ ಅರಣ್ಯಗಳಲ್ಲಿ ಅಲೆದಾಡುತ್ತಿದ್ದಾಗ ಇಂತಹ ಪ್ರೇರಣೆ ಅವನ ಉಳಿವಿಗೆ ಅವಶ್ಯಕವಾಗಿತ್ತು. ನಮಗೆ ಭಯ ಹುಟ್ಟಿಸುವ ಯಾವುದಾದರೂ ಪರಿಸ್ಥಿತಿ ಅಥವಾ ಸನ್ನಿವೇಶಗಳಲ್ಲಿ ನಮ್ಮ ದೇಹ ‘ಓಡು ಇಲ್ಲವೇ ಕಾದಾಡು’ ಎಂದು ಪ್ರತಿಕ್ರಿಯಿಸುತ್ತದೆ. ಹೃದಯಬಡಿತ, ರಕ್ತದೊತ್ತಡ ಹೆಚ್ಚಿಸಿ, ಮಾಂಸಖಂಡಗಳನ್ನೆಲ್ಲಾ ಬಿಗಿಪಡಿಸಿ, ಅಡ್ರಿನಲ್ ಎಂಬ ಹಾರ್ಮೋನ್ ರಕ್ತದೊಳಗೆ ಸ್ರವಿಸಿ ಎಚ್ಚರಿಕೆಯ ಕರೆಗಂಟೆ ಭಾರಿಸುತ್ತದೆ. ಇದರಿಂದ ನಾವು ಅಂತಹ ಯಾವುದೇ ಪರಿಸ್ಥಿತಿಯನ್ನು ಸೂಕ್ತವಾಗಿ ಎದುರಿಸಲು ಸಾಧ್ಯವಾಗುತ್ತದೆ. ದೇಹಕ್ಕೆ ಯಾವುದೇ ಅನಾಹುತವಾಗುವುದಿಲ್ಲ. ಒಂದು ವೇಳೆ ಪದೇ ಪದೇ ಪರಿಸ್ಥಿತಿಗಳನ್ನೆದುರಿಸುತ್ತಿದ್ದರೆ, ದೇಹದ ರೋಗ ನಿರೋಧಕ ವ್ಯವಸ್ಥೆ ಕುಸಿದುಬೀಳುತ್ತದೆ. ಮಾನಸಿಕವಾಗಿ ದೈಹಿಕವಾಗಿ ಬಳಲಬೇಕಾಗುತ್ತದೆ.
ಎಚ್ಚರಿಕೆ ನಿರ್ಲಕ್ಷಿಸದಿರಿ…
ಹ್ಯಾನ್ಸ್‍ಸೆಲ್ಯೆ ಎಂಬ ಸಂಶೋಧಕ ಒತ್ತಡಕ್ಕೆ ಜೀವಿ ತೋರುವ ಪ್ರತಿಕ್ರಿಯೆಯನ್ನು ಅಭ್ಯಸಿಸಿದ್ದಾನೆ. ಇವನ ಪ್ರಕಾರ, ಯಾವುದೇ ಅಪಾಯದ ಸೂಚನೆ ಕಂಡಾಗ ವ್ಯಕ್ತಿ ‘ಎಚ್ಚರಿಕೆಯ’ ಲಕ್ಷಣಗಳನ್ನು ತೋರುತ್ತಾನೆ. ನಂತರ ತನ್ನ ಎಲ್ಲಾ ಸಾಮರ್ಥ್ಯ ಬಳಸಿ ಒತ್ತಡಕಾರಕವನ್ನು ಎದುರಿಸಲು ಪ್ರಯತ್ನಿಸುತ್ತಾನೆ. ಒತ್ತಡಗಳನ್ನು ಸೂಕ್ತ ಸಮಯದಲ್ಲಿ ನಿಭಾಯಿಸಿದರೆ ಅದು ನಮ್ಮ ಗುರಿಯ ಮಾರ್ಗದಲ್ಲಿ ಯಾವುದೇ ವಿಘ್ನಗಳನ್ನು ತಂದೊಡ್ಡುವುದಿಲ್ಲ. ಒತ್ತಡದ ಕರಗಂಟೆಯನ್ನು ಅಥವಾ ಎಚ್ಚರಿಕೆಯನ್ನು ನಿರ್ಲಕ್ಷಿಸಿದರೆ ಕುದಿಯುವ ನೀರಲ್ಲಿ ಕಪ್ಪೆಯು ಸಿಲುಕಿ ಹೊರಬರಲಾರದೆ ಸಾಯುವಂತೆ ನಾವು ಒತ್ತಡಕ್ಕೆ ಬಲಿಯಾಗಬೇಕಾಗುತ್ತದೆ.
ಸೂಕ್ತ ಕಾಲಕ್ಕೇ ನಿರ್ಧರಿಸಿ…
ಬಹಳಷ್ಟು ಆತ್ಮಹತ್ಯೆಯ ಪ್ರಕರಣಗಳನ್ನು ಗಮನಿಸಿದರೆ ಅವರು ಒತ್ತಡದ ಕರೆಗಂಟೆಗಳನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ. ಕುದಿಯುವ ಕಪ್ಪೆಯ ಪ್ರಾಯೋಗಿಕ ಉದಾಹರಣೆಯೊಂದಿಗೆ ಅಪಾಯದ ಕರೆಗಂಟೆಗೆ ಹೇಗೆ ನಾವು ಪ್ರತಿಕ್ರಿಯಿಸಬೇಕೆಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಕಪ್ಪೆಯನ್ನು ಕುದಿಯುವ ನೀರಿನ ಪಾತ್ರೆಯಲ್ಲಿ ಬಿಟ್ಟರೆ ಅದು ಉದ್ರಿಕ್ತವಾಗಿ ಹೊರಬರಲು ಪ್ರಯತ್ನಿಸುತ್ತದೆ. ಕಪ್ಪೆಯನ್ನು ಒಂದು ಪಾತ್ರೆಯಲ್ಲಿ ಇರಿಸಿ ತಂಪಾದ ನೀರನಿಂದ ತುಂಬಿದರೆ ಅದು ತನ್ನ ದೇಹದ ಉಷ್ಣತೆಯನ್ನು ಆ ವಾತಾವರಣದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು (ಸಾಮಾನ್ಯವಾಗಿ 10 ಡಿಗ್ರಿಯಿಂದ 40 ಡಿಗ್ರಿ ಉಷ್ಣಾಂಶವು ಯಾವುದೇ ಜೀವಿಯು ಜೀವಿಸಲು ಅನುಕೂಲಕರವಾಗಿದೆ). ನೀರಿನ ಉಷ್ಣತೆಯನ್ನು ನಿಧಾನವಾಗಿ ಹೆಚ್ಚಿಸುತ್ತಾ ಹೋದಂತೆ ಕಪ್ಪೆಯು ತನ್ನ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ನೀರು ಕುದಿಯತೊಡಗಿದಂತೆ ಕಪ್ಪೆಯು ಸಹಜವಾಗಿಯೇ ಹೊರಬರಲು ಪ್ರಯತ್ನಿಸುತ್ತದೆ. ತನ್ನ ಪ್ರಯತ್ನವನ್ನು ಮುಂದುವರೆಸಿ ‘ಅಪಾಯದ ಕರೆಗಂಟೆಯನ್ನು’ ಲಕ್ಷಿಸಿದರೆ ಮಾತ್ರ ಅದು ತನ್ನೆಲ್ಲಾ ಬಲ ಪ್ರಯೋಗ ಮಾಡಿ ಅಲ್ಲಿಂದ ಹೊರಗೆ ನೆಗೆಯುತ್ತದೆ. ಒಂದು ವೇಳೆ ‘ನಿರಾಕರಣೆ’ ಮನೋಭಾವ ತೋರಿದಲ್ಲಿ ಅಥವಾ ಮತ್ತಷ್ಟು ಹೊಂದಾಣಿಕೆಯಲ್ಲಿ ತೊಡಗುತ್ತಾ ಸಾಗಿದರೆ ಮತ್ತೆ ಆ ಪರಿಸ್ಥಿತಿಗೆ ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಕೈಮೀರಿದಾಗ ನೆಗೆಯಲು ಪ್ರಯತ್ನಿಸಿದರೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅದು ನೀರಿನ ತಾಪಮಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ತನ್ನ ಎಲ್ಲಾ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಹಾಗಾಗಿ ಅತೀ ಶೀಘ್ರದಲ್ಲಿ ಅದು ಸಾಯುತ್ತದೆ. ಕಪ್ಪೆಯನ್ನು ಕೊಂದದ್ದು ಯಾವುದು? ನಮ್ಮಲ್ಲಿ ಹಲವರು ಕುದಿಯುವ ನೀರೆಂದು ಭಾವಿಸುತ್ತಾರೆ. ಸತ್ಯಾಂಶವೇನೆಂದರೆ, ಕಪ್ಪೆಯನ್ನು ಕೊಂದದ್ದು ಅದು ಯಾವಾಗ ಹೊರಗೆ ಹೋಗಬೇಕೆಂಬುದನ್ನು ನಿರ್ಧರಿಸಲು ವಿಫಲವಾದ ತನ್ನದೇ ಆದ ‘ಅಸಮರ್ಥತೆ’ಯೇ ಆಗಿದೆ.
ಉದ್ದೇಶಪೂರ್ವಕ ನಿರ್ಲಕ್ಷ್ಯ ಬೇಡ…
ಅದೇ ರೀತಿ ನಾವೆಲ್ಲರೂ ಸೂಕ್ತ ಸಮಯದಲ್ಲಿ ಒತ್ತಡದ ಕರೆಗಂಟೆಗಳಿಗೆ ಪ್ರತಿಕ್ರಿಯಿಸದಿದ್ದರೆ ಕಪ್ಪೆಯ ಪರಿಸ್ಥಿತಿಯು ನಮಗೆ ಒದಗಿ ಬರಬಹುದು. ನಾವೆಲ್ಲರೂ ಜನರೊಂದಿಗೆ ಮತ್ತು ಸನ್ನಿವೇಶಗಳೊಂದಿಗೆ ಸೂಕ್ತವಾದ ಹೊಂದಾಣಿಕೆ ಮಾಡಿಕೊಳ್ಳಬೇಕು. ಆದರೆ, ನಾವು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕೆಂಬುದನ್ನು ಸರಿಯಾಗಿ ತಿಳಿಯಬೇಕು. ‘ಕುದಿಯುವ ಕಪ್ಪೆಯ ಸಿಂಡ್ರೋಮ್’ (Boiling frog Syndrome) ಅವಸ್ಥೆಯು ನಮ್ಮ ಜೀವನದುದ್ದಕ್ಕೂ ಉದ್ಭವಿಸಬಹುದು. ಆದರೆ, ಇಂತಹ ಪರಿಸ್ಥಿತಿಗೆ ನಾವು ತೋರುವ ಪ್ರತಿಕ್ರಿಯೆ ಅತ್ಯಂತ ಮುಖ್ಯವಾಗಿದೆ.
ಕೆಲವೊಮ್ಮೆ ಅಪಾಯಕಾರಿಯಾದ ಪರಿಸ್ಥಿತಿಗಳನ್ನು ನಾವು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತೇವೆ. ಇಂತಹ ಮನೋಭಾವ ಸಲ್ಲದು, ನಾವು ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಎದುರಿಸಲು ಕೆಲವೊಂದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವಸ್ಥಿತಿಯನ್ನು ಶಕ್ತಿಶಾಲಿಯಾಗಿಟ್ಟುಕೊಳ್ಳಬೇಕು. ಜನರು ತಮ್ಮನ್ನು ದೈಹಿಕವಾಗಿ, ಭಾವನಾತ್ಮಕವಾಗಿ ಅಥವಾ ಆರ್ಥಿಕವಾಗಿ ಶೋಷಿಸಲು ಅನುವು ಮಾಡಿಕೊಟ್ಟರೆ ಅವರು ಅದನ್ನು ಮುಂದುವರೆಸುತ್ತಾರೆ. ಆದುದರಿಂದ ಅಪಾಯದ, ಎಚ್ಚರಿಕೆಯ ಕರೆಗಂಟೆಯ ಲಕ್ಷಣಗಳು ಗೋಚರಿಸುತ್ತಲೇ ನಾವು ಅದರಿಂದ ಹೊರಬರಲು ಪ್ರಯತ್ನಿಸಬೇಕು.
ಹಠ ಬಿಡಿ…
ಅಪಾಯಕಾರಿ ಪರಿಸ್ಥಿತಿಯಲ್ಲಿ ಮೊಂಡುತನ ತೋರಬಾರದು, ಇಲ್ಲದಿದ್ದರೆ ಹದಗೆಡುವ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತೇವೆ. ಪರಿಸ್ಥಿತಿಯನ್ನು ನಿಭಾಯಿಸುವ ಶಕ್ತಿಯ ಕೊರತೆಯಿದ್ದಲ್ಲಿ ಆಪ್ತರ ಸಲಹೆ ಸೂಚನೆಯನ್ನು ತೆಗೆದುಕೊಳ್ಳಲು ಮರೆಯಬಾರದು. ಕುದಿಯುವ ಕಪ್ಪೆಯಂತೆ ಇರಬೇಡಿ. ಮನುಷ್ಯರಾದ ನಾವು ಕಪ್ಪೆಗಿಂತ ಚುರುಕಾಗಿದ್ದೇವೆ. ಆದುದರಿಂದ ಕಾಲಕ್ಕೆ ತಕ್ಕಂತೆ ಪ್ರತಿಕ್ರಿಯಿಸಿರಿ. ಆರೋಗ್ಯ, ಸಂಬಂಧಗಳು, ವೃತ್ತಿ ಅಥವಾ ಉದ್ಯೋಗ, ವ್ಯವಹಾರ ಹೂಡಿಕೆಗಳಂತಹ ಸನ್ನಿವೇಶಗಳನ್ನು ಸರಿಯಾಗಿ ಗ್ರಹಿಸಿ, ಕಾರ್ಯತತ್ಪರರಾಗಿರಿ. ಶಕ್ತಿ ಇರುವಾಗಲೇ ಪರಿಸ್ಥಿತಿಗಳಿಂದ ಹೊರಬನ್ನಿರಿ.

ಮತ್ತಷ್ಟು ಸುದ್ದಿಗಳು

Latest News

ಪೋಲೀಸ್ ಠಾಣೆಗಳಲ್ಲಿ ಸಿಸಿಟಿವಿ ಆಡಿಯೋ ಕಡ್ಡಾಯ: ದೆಹಲಿ ಹೈಕೋರ್ಟ್

newsics.com ನವದೆಹಲಿ: ಪೋಲೀಸ್ ಠಾಣೆಯಲ್ಲಿ ಸಿಸಿಟಿವಿ ವಿಡಿಯೋ ಜೊತೆ ಆಡಿಯೋ ಕೂಡ ಇರಬೇಕೆಂದು ದೆಹಲಿ ಹೈಕೋರ್ಟ್ ಹೇಳಿದೆ. ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಪೋಲೀಸ್ ಠಾಣೆಯ ಎಲ್ಲಾ ಕಡೆಗಳಲ್ಲೂ...

ಎಂ.ಕರುಣಾನಿಧಿ ಕಂಚಿನ ಪ್ರತಿಮೆ ಅನಾವರಣ

newsics.com ಚೆನ್ನೈ: ಐದು ಬಾರಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅನಾವರಣಗೊಳಿಸಿದರು. ಈ ಮೊದಲೇ ಪ್ರತಿಮೆ ನಿರ್ಮಿಸಿದ್ದು, ಅದನ್ನು ಧ್ವಂಸಗೊಳಿಸಲಾಗಿತ್ತು. ಅದೇ ಪ್ರತಿಮೆ...

ಜಾಕ್ವೆಲಿನ್ ಫರ್ನಾಂಡಿಸ್‌ಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ

newsics.com ನವದೆಹಲಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿದೇಶಕ್ಕೆ ತೆರಳಲು ಇಡಿ ಅನುಮತಿ ನೀಡಿದೆ. ಸುಖೇಶ್ ಚಂದ್ರಶೇಖರ್ ವಿರುಧ್ದದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೆಲಿನ್ ಅವರಿಗೆ...
- Advertisement -
error: Content is protected !!