Sunday, December 5, 2021

ಮನೆ ಮನೆಯಲ್ಲೂ ಜಲಕನ್ಯೆಯರು!

Follow Us

ಇಂದು ‘ವಿಶ್ವ ಜಲ ದಿನ’

ಸದಾ ಚಲನಶೀಲವಾಗಿರುವ ನೀರಿನೊಂದಿಗೆ ಬಂಧ ಬೆಸೆದುಕೊಂಡವಳು ಮಹಿಳೆ. ಹೀಗಾಗಿಯೇ ಏನೋ, ಆಕೆಯನ್ನು ಹರಿಯುವ ನದಿಗೆ ಹೋಲಿಕೆ ಮಾಡಲಾಗುತ್ತದೆ. ಇನ್ನು ಮನೆ ಮನೆಯಲ್ಲೂ ನೀರಿನ ರಕ್ಷಣೆ, ಸ್ವಚ್ಛತೆ, ಸಂಗ್ರಹದ ಜವಾಬ್ದಾರಿಯೂ ಆಕೆಯದ್ದೇ. ಹವಾಮಾನ ಬದಲಾವಣೆಯ ಇಂದಿನ ದಿನಗಳಲ್ಲಿ ಜಲಮೂಲಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗುತ್ತಿದೆ. ಮೊದಲಿನಿಂದಲೂ ನೀರಿನ ಕಾರ್ಯನಿರ್ವಹಿಸುತ್ತ ಬಂದಿರುವ ಮಹಿಳೆ ಈ ಕಾರ್ಯದಲ್ಲೂ ನೇತೃತ್ವ ವಹಿಸಿದರೆ ಸಾಧ್ಯವಾಗದ್ದೇನಿದೆ?
* ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com

ನೀರಿನೊಂದಿಗೆ ಮಹಿಳೆಯದ್ದು ಅವಿನಾಭಾವ ಸಂಬಂಧ. ನಮ್ಮ ದೇಶದಲ್ಲಂತೂ ನದಿಗಳ ಹೆಸರುಗಳೆಲ್ಲ ಬಹುತೇಕ ಮಹಿಳೆಯರದ್ದೇ. ಗ್ರಾಮೀಣ ಭಾಗದಲ್ಲೇ ಆಗಲಿ, ನಗರಗಳಲ್ಲೇ ಆಗಲಿ, ನೀರಿನ ಸಂಗ್ರಹದ ಹೊಣೆಯೂ ಮಹಿಳೆಯರದ್ದೇ ಎನಿಸಿಕೊಂಡಿದೆ. ಅಡುಗೆಗೆ ಬೇಕಾದ ಸ್ವಚ್ಛ ನೀರು ಸೇರಿದಂತೆ ಮನೆಯ ಸಕಲ ಕಾರ್ಯಗಳಿಗೆ ಬೇಕಾದ ನೀರನ್ನು ಸಂಗ್ರಹಿಸುವುದು ಆಕೆಯ ಪಾಲಿನ ಸವಾಲೂ ಹೌದು. ಈ ಸಂಕಷ್ಟವನ್ನು ಅರಿಯಬೇಕಾದರೆ ನಮ್ಮ ಗ್ರಾಮೀಣ ಭಾಗಗಳಿಗೆ ತೆರಳಬೇಕು. ಕಿಲೋಮೀಟರುಗಟ್ಟಲೆ ದೂರದಿಂದ ಬಿಸಿಲಿನಲ್ಲಿ ನೀರನ್ನು ಹೊತ್ತು ತಂದು ಬಸವಳಿಯುವ ಹೆಣ್ಣುಮಕ್ಕಳು ಜೀವಮಾನದ ತಪಸ್ಸಿಗೆ ಬದ್ಧವಾದವರಂತೆ ಭಾಸವಾಗುತ್ತಾರೆ.
ಮೊದಲೆಲ್ಲ ಸ್ವಚ್ಛವಾದ ನೀರು ಸುಲಭಕ್ಕೆ ದಕ್ಕಿಬಿಡುತ್ತಿತ್ತೇನೋ. ಆದರೆ, ಇಂದು ಸಿಗುವ ನೀರಿನ ಗುಣಮಟ್ಟ ಹೇಗಿರುತ್ತದೆಯೋ ಯಾರು ಬಲ್ಲರು? ಏಕೆಂದರೆ, ಮಾನವನ ಹಸ್ತಕ್ಷೇಪದಿಂದ ಜಲಮೂಲಗಳೆಲ್ಲ ಮಲಿನವಾಗಿವೆ. ಕೆರೆ, ಬಾವಿ, ನದಿಗಳೆಲ್ಲ ಕಲುಷಿತಗೊಂಡಿವೆ. ಹೀಗಾಗಿ, ನೀರನ್ನು ಸಂಗ್ರಹಿಸಿದ ಬಳಿಕವೂ ಆಕೆಯ ಕಾರ್ಯ ನಿಲ್ಲುವುದಿಲ್ಲ. ಅದನ್ನು ಕುಡಿಯಲು ಯೋಗ್ಯವನ್ನಾಗಿ ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಾಳೆ. ಮೊದಲೆಲ್ಲ ಆಕೆಯ ಈ ಕಾರ್ಯ ಪರಿಗಣನೆಗೇ ಬರುತ್ತಿರಲಿಲ್ಲ. ನೀರಿನ ಭದ್ರತೆಗೆ ಆದ್ಯತೆ ದೊರೆಯುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯ ಪಾತ್ರಕ್ಕೆ ಪ್ರಾಮುಖ್ಯತೆ ಬಂದಿದೆ.
ಮೊದಲಿನಿಂದಲೂ ನೀರಿನ ಜವಾಬ್ದಾರಿ ಮಹಿಳೆಯದ್ದಾದರೂ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳಲ್ಲಿ ಮಹಿಳೆಯ ಪಾತ್ರವಿರಲಿಲ್ಲ. ಅಂದರೆ, ಜಲಮೂಲಗಳನ್ನು ರಕ್ಷಿಸುವ ಯಾವುದೇ ಕಾರ್ಯಗಳಲ್ಲಿ ಆಕೆಯನ್ನು ಪರಿಗಣಿಸುತ್ತಲೇ ಇರಲಿಲ್ಲ. ಇತ್ತೀಚೆಗೆ ಅಲ್ಲಲ್ಲಿ ಈ ನೋಟ ಬದಲಾಗುತ್ತಿದೆ ಎನ್ನಬಹುದು. ದೊಡ್ಡ ದೊಡ್ಡ ಕಾರ್ಯಯೋಜನೆಗಳಲ್ಲಿ ಮಹಿಳೆಯರ ನಿರ್ಧರಿಸುವಿಕೆ ಇಲ್ಲದೇ ಹೋದರೂ ತಳಮಟ್ಟದಲ್ಲಿ, ಸಮುದಾಯದ ಸ್ತರದಲ್ಲಿ ಮಹಿಳೆಯರ ಗುಂಪುಗಳು ಈಗ ಸಕ್ರಿಯವಾಗುತ್ತಿವೆ.
ಅಂದಹಾಗೆ, ಕುಡಿಯುವ ನೀರನ್ನು ಶುದ್ಧಗೊಳಿಸುವ ಪ್ರಕ್ರಿಯೆ ಸುಮಾರು 4 ಸಾವಿರ ವರ್ಷಗಳ ಹಿಂದೆಯೇ ಶುರುವಾಗಿತ್ತಂತೆ. ಬಹುತೇಕ ನಾಗರಿಕತೆಗಳು ನೀರನ್ನು ಕುದಿಸಿ ಕುಡಿಯುವ ಮೂಲಕ ಶುದ್ಧಗೊಳಿಸುವ ಪ್ರಕ್ರಿಯೆಯನ್ನು ಕಂಡುಕೊಂಡಿದ್ದವು. ಇನ್ನು ಭಾರತೀಯರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆಯೇ ಇದ್ದರು ಎನ್ನಬಹುದು. ಏಕೆಂದರೆ, ಇಲ್ಲಿ ಬಹಳ ಹಿಂದಿನಿಂದಲೂ ಬೆಳ್ಳಿ, ತಾಮ್ರದ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ ಕೀಟಾಣುಗಳನ್ನು ನಾಶಪಡಿಸುವ ಪದ್ಧತಿಯನ್ನು ಅನುಸರಿಸಲಾಗುತ್ತಿತ್ತು. ಅಚ್ಚರಿಯ ಸಂಗತಿ ಎಂದರೆ, ಗ್ರೀಕ್ ವಿಜ್ಞಾನಿ ಹಿಪೋಕ್ರೇಟ್ಸ್ ಕ್ರಿಸ್ತಪೂರ್ವ 500ರಲ್ಲಿಯೇ ಮನೆಬಳಕೆಯ ಫಿಲ್ಟರ್ ಶೋಧಿಸಿದ್ದ. ಅದಾದ ಬಳಿಕ, 1827ರಲ್ಲಿ ಜಾನ್ ಡುಲ್ಟಾನ್ ಮತ್ತು ಆತನ ಮಗ ಹೆನ್ರಿ ಅವರು ಬ್ಯಾಕ್ಟೀರಿಯಾವನ್ನು ತೆಗೆದುಹಾಕುವ ಫಿಲ್ಟರ್ ಅನ್ನು ಅಭಿವೃದ್ಧಿಪಡಿಸಿದ್ದರು. ಹೀಗೆ, ಅನಾದಿ ಕಾಲದಿಂದಲೂ ನೀರಿನ ಶುದ್ಧತೆಯ ವಿಚಾರದಲ್ಲಿ ಮಹಿಳೆ ಹೆಚ್ಚು ಪಾತ್ರ ವಹಿಸಿಲ್ಲದಿರುವುದು ಕಂಡುಬರುತ್ತದೆ.
ನೀರು ಮತ್ತು ಆರೋಗ್ಯ: 
ಕುಡಿಯುವ ನೀರಿಗೂ ಮಾನವನ ಆರೋಗ್ಯಕ್ಕೂ ಬಿಡಲಾರದ ನಂಟಿದೆ. 2017ರ ವಿಶ್ವಸಂಸ್ಥೆ ವರದಿಯಂತೆ ಜಗತ್ತಿನ ಶೇ. 80ರಷ್ಟು ಕೊಳಚೆ ನೀರು ಬಾಹ್ಯ ವಾತಾವರಣಕ್ಕೆ ಬಿಡುಗಡೆಯಾಗುತ್ತಿದೆ. ಇದು ಕೆರೆ, ನದಿ, ಸಮುದ್ರಗಳಿಗೆ ಸೇರ್ಪಡೆಯಾಗುತ್ತಿದೆ. ಮಲಿನ ನೀರು ಕಾಲರಾ, ಭೇದಿ, ಅತಿಸಾರ, ಟೈಫಾಯ್ಡ್, ಪೊಲಿಯೋದಂಥ ಮಾರಕ ರೋಗಗಳಿಗೆ ಕಾರಣವಾಗುತ್ತವೆ. 2018ರ ವಿಶ್ವಸಂಸ್ಥೆ ವರದಿ ಪ್ರಕಾರ, ಭಾರತದಲ್ಲೊಂದೇ ಮಲಿನ ನೀರಿನಿಂದ ಉಂಟಾಗುವ ರೋಗಗಳಿಂದ ವಾರ್ಷಿಕ 36,600 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ. ಈ ಸಮಯದಲ್ಲಿ ನೀರಿನ ರಕ್ಷಣೆಗೆ ಮಹಿಳೆಯರ ಸಾರಥ್ಯ ಅಗತ್ಯವಾಗಿದೆ.

ಮಹಿಳಾ ಜಲಯೋಧರು: 
ಒಡಿಶಾದ ನೌಪಾಡ, ಛತ್ತೀಸ್‌ಗಢದ ಕಾಂಕೇರ್, ತೆಲಂಗಾಣದ ಹೈದರಾಬಾದ್‌ನಲ್ಲಿ ಮಹಿಳಾ ಜಲಯೋಧರ ಪಡೆಯಿದೆ. ಫ್ಲೋರೈಡ್ ಬಾಧಿತ ಪ್ರದೇಶವಾಗಿರುವ ಕಾಂಕೇರ್‌ನಲ್ಲಿ 2018ರಿಂದಲೂ ಗ್ರಾಮದ ಮಹಿಳಾ ಕಾರ್ಯಕರ್ತರು ನೀರಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನೀರಿನ ಗುಣಮಟ್ಟ ಪರೀಕ್ಷೆ ಸೇರಿದಂತೆ ನೀರನ್ನು ರಕ್ಷಿಸುವ ಎಲ್ಲ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ 360ಕ್ಕೂ ಅಧಿಕ ಸಕ್ರಿಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿದ್ದಾರೆ. ಕಾಂಕೇರ್ ಸೇರಿದಂತೆ ಸಮೀಪದ ಫ್ಲೋರೈಡ್ ಬಾಧಿತ ಚರಮ, ನರಾರ್‌ಪುರ್ ಬ್ಲಾಕ್‌ಗಳ ನೀರನ್ನೂ ಇವರು ಪರೀಕ್ಷೆ ಮಾಡಿದ್ದು, ಶುದ್ಧ ಕುಡಿಯುವ ನೀರನ್ನು ತಮ್ಮದಾಗಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಇನ್ನೊಂದು ಯಶಸ್ವಿ ಗಾಥೆಯೆಂದರೆ, ಒಡಿಶಾದ ಜಲ ಬಂಧು ಮಾದರಿಯದ್ದು, ನೌಪಾಡ ಜಿಲ್ಲೆಯ 24 ಗ್ರಾಮ ಪಂಚಾಯಿತಿಗಳು ಹಾಗೂ ಅಲ್ಲಿನ ಎಲ್ಲ ಜಲಮೂಲಗಳಲ್ಲಿ ಮಹಿಳಾ ಜಲಯೋಧರೇ ಪರೀಕ್ಷೆ ನಡೆಸಿ ಫ್ಲೋರೈಡ್ ನೀರಿನಿಂದ ಮುಕ್ತಿ ಪಡೆದಿದ್ದಾರೆ. ಹೈದರಾಬಾದ್‌ನಲ್ಲೂ ಸಹ ಬಸ್ತಿ ವಿಕಾಸ್ ಮಂಚ್ ಎನ್ನುವ ಸಂಸ್ಥೆಯೊಂದು 157 ಮಹಿಳೆಯರನ್ನು ಬಳಸಿಕೊಂಡು 21 ಕೊಳೆಗೇರಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವಲ್ಲಿ ಯಶಸ್ವಿಯಾಗಿದೆ. ಹೀಗೆ ದೇಶದ ಅಲ್ಲಲ್ಲಿ ಮಹಿಳಾ ಜಲಯೋಧರ ಪಡೆ ಸೃಷ್ಟಿಯಾಗುತ್ತಿರುವುದು ಹೆಚ್ಚು ಅರ್ಥಪೂರ್ಣ.
ಇವೆಲ್ಲ ಬೆರಳೆಣಿಕೆಯ ಯಶೋಗಾಥೆಗಳಷ್ಟೆ. ಮಹಿಳೆಯರ ನೇತೃತ್ವದಲ್ಲಿಯೇ ಕೆರೆಗಳು ಪುನರುಜ್ಜೀವನಗೊಂಡಿರುವ ನಿದರ್ಶನಗಳು ಸಾಕಷ್ಟಿವೆ. ನಮ್ಮ ರಾಜ್ಯದಲ್ಲಿಯೂ ಈ ಬಗ್ಗೆ ಹೋರಾಡುತ್ತಿರುವ ಅನೇಕ ಮಹಿಳೆಯರಿದ್ದಾರೆ. ಅಷ್ಟಕ್ಕೂ ಮಹಿಳೆಯರು ಮನಸ್ಸು ಮಾಡಿದರೆ ಸಾಧ್ಯವಾಗದ್ದು ಏನಿದೆ? ಅವರಿಗೆ ಸಮಾಜದಿಂದ ಬೇಕಾಗಿರುವುದು ಒಂದಿಷ್ಟು ತೆರೆದ ಮನಸ್ಸಿನ ಸಹಾಯ ಹಾಗೂ ಹೆಚ್ಚು ಹೆಚ್ಚು ಅವಕಾಶಗಳಷ್ಟೇ. ಮೇಲಿನ ಉದಾಹರಣೆಗಳಂತೆ ಪ್ರತಿ ಗ್ರಾಮ, ತಾಲೂಕು, ಜಿಲ್ಲೆಗಳ ಜಲಮೂಲಗಳು ಮಹಿಳೆಯರ ನೇತೃತ್ವದಲ್ಲಿ ಮಾಲಿನ್ಯಮುಕ್ತವಾಗುವಂತಾದರೆ ಇದುವರೆಗೂ ಸಾಧ್ಯವಾಗದ ಮಹತ್ವದ ಬದಲಾವಣೆಯೊಂದು ಘಟಿಸುತ್ತದೆ. ಅದರ ನೇರ ಲಾಭ ಗ್ರಾಮೀಣ ಜನಜೀವನ, ಸಮಾಜಕ್ಕೇ ಆಗುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಮುಂಬೈ ಏರ್‌ಪೋರ್ಟ್‌ನಲ್ಲಿ ನಟಿ ಜಾಕ್ವೆಲಿನ್ ಫೆರ್ನಾಂಡೀಸ್‌ಗೆ ತಡೆ

newsics.com ಮುಂಬೈ: ಖ್ಯಾತ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ದುಬೈಗೆ ಹೊರಟಿದ್ದ ಜಾಕ್ವೆಲಿನ್ ಫೆರ್ನಾಂಡೀಸ್ ಅವರನ್ನು ಲುಕೌಟ್ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ತಡೆಯಲಾಗಿದೆ....

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 29,52,708 ಜನ ಗುಣಮುಖರಾಗಿದ್ದಾರೆ. 6 ಜನ ಸೋಂಕಿತರು...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...
- Advertisement -
error: Content is protected !!