Sunday, December 5, 2021

ಬದಲಾಗಲಿ ಮಹಿಳೆ ಮೇಲಿನ ದೃಷ್ಟಿಕೋನ

Follow Us

ಮತ್ತೊಂದು ಮಹಿಳಾ ದಿನ ಆಚರಣೆಗೊಳ್ಳುತ್ತಿದೆ. ಒಂದಷ್ಟು ಮಹಿಳೆಯರು ಖುಷಿಪಡುತ್ತಿದ್ದರೆ, ಮತ್ತಷ್ಟು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ಇನ್ನೆಲ್ಲೋ ಅತ್ಯಾಚಾರಕ್ಕೊಳಗಾದ ಮಹಿಳೆಯರ ಬಾಳೇ ಕೊನೆಯಾಗುತ್ತಿದೆ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಗಳಲ್ಲಿ ಗಿಫ್ಟ್ ಸಿಕ್ಕರೆ ಸಾಕಾ? ಸ್ಥಾನ-ಮಾನದ ಮಾತು ಮಾನಗೆಟ್ಟವರ ನಡುವೆ ಕರಗಿಹೋಗುತ್ತಿದೆಯಾ? ಮಧ್ಯರಾತ್ರಿಯಲ್ಲಿ ನಡೆದುಹೋಗುವುದು ಹಾಗಿರಲಿ, ವಾಹನದಲ್ಲಿ ಸಾಗುವುದೂ ಕಷ್ಟ ಎನ್ನುವ ಸ್ಥಿತಿ ಇಂದಿನದು. ನಿತ್ಯವೂ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದಕ್ಕೆಲ್ಲ ಕೊನೆ ಎಂದು? ಮಹಿಳಾಪರ ನಿಲುವು ಘೋಷಣೆ, ಭಾಷಣಕ್ಕಷ್ಟೇ ಸೀಮಿತವಾಗುತ್ತಿದೆಯಾ? ಹಾಗಾದರೆ, ಮಹಿಳೆಯರು ಕಣ್ಣೀರಿಡದ ಸ್ಥಿತಿ ನಿರ್ಮಾಣವಾಗುವುದೆಂತು? ಅತ್ತೆ ಸೊಸೆ ಜಗಳ ಕೊನೆಯಾಗುವುದೆಂತು?
===
• ದೀಪ್ತಿ ಭದ್ರಾವತಿ
response@134.209.153.225
ತ್ತೊಂದು ಮಹಿಳಾ ದಿನಾಚರಣೆ ಆಚರಿಸುವ ಈ ಹೊತ್ತಿನಲ್ಲಿ ಇಂದಿನ ದಿನಮಾನಗಳು ಮಹಿಳೆಯರ ಪಾಲಿಗೆ ಹೇಗಿವೆ? ಅವರುಗಳ ಪರಿಸ್ಥಿತಿ ಬದಲಾಗಿದೆಯಾ? ಅವರ ಹಕ್ಕುಗಳಿಗೆ ಮಾನ್ಯತೆ ಸಿಕ್ಕಿದೆಯಾ? ಅವರ ಮಾತುಗಳಿಗೆ ಮಹತ್ವ ದೊರಕಿದೆಯಾ? ಅವರ ಕಷ್ಟಗಳು ಕಡಿಮೆಯಾಗಿವೆಯಾ? ಅವರನ್ನು ನೋಡುವ ದೃಷ್ಟಿಕೋನಗಳು ಅವರನ್ನು ಅಳೆಯುವ ಸಾಧನಗಳು, ಹೇರುವ ಮಿತಿಗಳು, ಧರ್ಮದ ಸಂಪ್ರದಾಯದ ಕಾರಣ ನೀಡಿ ಮನೆಯ ಚೌಕಟ್ಟಿನ ಒಳಗೆಯೇ ಮಹಿಳೆಯರನ್ನು ಕಟ್ಟಿ ಹಾಕಲು ಬಯಸುವ ಮನಸ್ಸುಗಳು ಬದಲಾಗಿವೆಯೇ? ಎಂದು ಕೇಳಿದರೆ ಬಹುಶಃ ಈ ಇಪ್ಪತ್ತೊಂದನೆ ಶತಮಾನದಲ್ಲಿಯೂ ನಾವು ಇಲ್ಲ ಎಂತಲೇ ಹೇಳಬೇಕಾಗುತ್ತದೆ.
ನಾವುಗಳು ಜಾಗತೀಕರಣ, ಔದ್ಯೋಗಿಕರಣ, ಕೈಗಾರಿಕರಣದಂತಹ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದೀವಿ ಎಂದುಕೊಳ್ಳುವಾಗಲೂ ಇಲ್ಲಿನ ಸ್ತ್ರೀಯರ ಸಾಮಾಜಿಕ ಸ್ಥಾನಮಾನಗಳನ್ನು ನೋಡುವುದಾದರೆ ಅಂತಹ ಹೇಳಿಕೊಳ್ಳುವ ಮಟ್ಟದಲ್ಲಿ ಯಾವ ಬದಲಾವಣೆಗಳೂ ಕಂಡು ಬರುವುದಿಲ್ಲ. ಬಾಲ್ಯವಿವಾಹ, ವರದಕ್ಷಿಣೆ ಪಿಡುಗು, ಸ್ತ್ರೀಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳಗಳು ಹೇಳುತ್ತ ಹೋದರೆ ದೊಡ್ಡ ಪಟ್ಟಿಯೇ ಇದೆ.
ಕಾರಣಗಳನ್ನು ನಾವು ಹುಡುಕುತ್ತ ಹೋದರೆ ಮತ್ತೆ ಅದೇ ಪುರುಷ ಪ್ರಧಾನ ಮನಸ್ಥಿತಿಯತ್ತ ಹೊರಳುತ್ತವೆ. ಭಾರತದ ಸಮಾಜ ತನ್ನ ಆರಂಭದ ಕಾಲಘಟ್ಟದಿಂದಲೂ ಪುರುಷ ಪ್ರಧಾನ ವ್ಯವಸ್ಥೆಯನ್ನೇ ವೈಭವೀಕರಿಸುತ್ತ ಬಂದಿರುವುದು ಪ್ರತಿಯೊಬ್ಬರಿಗೂ ತಿಳಿದ ವಿಚಾರವೇ. ಇಲ್ಲಿನ ಇತಿಹಾಸದುದ್ದಕ್ಕು ಪುರುಷರನ್ನಷ್ಟೇ ಮುಂಚೂಣಿಯಲ್ಲಿಟ್ಟು ನೋಡಿರುವ ಅನೇಕ ಉದಾಹರಣೆಗಳಿವೆ. ಅದು ನಮ್ಮ ಜನಪದ ಇರಬಹುದು ಅಥವಾ ಪುರಾಣಗಳಿರಬಹುದು. ಅಥವಾ ಸಾಹಿತ್ಯದ ಯಾವುದೇ ಪ್ರಕಾರಗಳಿರಬಹುದು ಅವು ಪುರುಷರನ್ನು ಮಾತ್ರ ಕೇಂದ್ರಿಕೃತಗೊಳಿಸುತ್ತವೆ. ಇಲ್ಲಿ ವ್ಯಕ್ತಿಯ ವಂಶ ಎನ್ನುವುದು ಗಂಡಿನ ಹೆಸರಿನಿಂದ ಮುಂದುವರೆಯುವ ಮನಸ್ಥಿತಿ ಹುಟ್ಟಿಕೊಂಡಿದೆಯಾದ್ದರಿಂದ ಹೆಣ್ಣನ್ನು ಅನುಪಯುಕ್ತ ಹೊರೆ ಎಂದು ಭಾವಿಸುವುದೇ ಹೆಚ್ಚು. ಅಲ್ಲದೆ ಸ್ತ್ರೀಯನ್ನು ಎಂದಿಗೂ ಪುರುಷನ ಆಸ್ತಿ ಎನ್ನುವ ದೃಷ್ಟಿಕೋನದಲ್ಲಿಯೇ ನೋಡಲಾಗುತ್ತದೆ. ಆಕೆಯ ಸ್ವಂತ ವ್ಯಕ್ತಿತ್ವದ ಹಕ್ಕನ್ನು ಸಂಪ್ರದಾಯದ ಹೆಸರಿನಲ್ಲಿ ಹತ್ತಿಕ್ಕಲಾಗುತ್ತದೆ ಅಥವಾ ನಿರಾಕರಿಸಲಾಗುತ್ತದೆ. ಮಹಿಳೆಯರ ಜೀವನದ ಗುರಿಯೇ ಮದುವೆ ಎನ್ನುವ ಮನೋಭಾವ ಇಡೀ ಸಮಾಜದಲ್ಲಿ ಬೇರೂರಿದೆ. ಇದಕ್ಕೆ ನಮ್ಮ ತಂದೆ ತಾಯಿಯರು ಮನೆ ಮಂದಿ ಯಾರೂ ಕೂಡ ಹೊರತಲ್ಲ. ಹೆಂಗಸು ಓದಿ ಏನಾಗಬೇಕಿದೆ ಎನ್ನುವ ಮನೋಭಾವದಿಂದ ಬಹುತೇಕ ಜನರು ಹೊರತಾಗಿಲ್ಲ ಇಂತಹದ್ದೊಂದು ಮನೋಭಾವವೇ ಹೆಂಗಸರ ಬಹಳಷ್ಟು ಸಮಸ್ಯೆಗೆ ಕಾರಣವಾಗಿದೆ. ಅದು ಅವಳ ವಿದ್ಯಾಭ್ಯಾಸ, ಅವಳ ಬೌದ್ಧಿಕ ಬೆಳವಣಿಗೆ ಅವಳ ವ್ಯಕ್ತಿತ್ವ ವಿಕಸನ ಈ ಎಲ್ಲದರ ಮೇಲೆಯೂ ಪರಿಣಾಮವನ್ನು ನಕಾರಾತ್ಮಕ ಪರಿಣಾಮವನ್ನು ಬೀರಿದೆ. ಹೆಣ್ಣು ಎಷ್ಟು ಓದಿದರೂ ತಮಗೇನು ಪ್ರಯೋಜನವಿಲ್ಲ ಎಂದು ಭಾವಿಸುವ ಪೋಷಕರು ಮಗಳ ವಿದ್ಯಾಭ್ಯಾಸದ ಕುರಿತಾಗಿ ಅಷ್ಟೇನು ಆಸಕ್ತಿ ವಹಿಸದೇ ಇರುವುದು ಬಹಳಷ್ಟು ಮನೆಗಳಲ್ಲಿ ಕಂಡು ಬರುತ್ತದೆ. ಈ ಸ್ಥಿತಿ ಕೇವಲ ಅನಕ್ಷರಸ್ಥ ಕುಟುಂಬಗಳಲ್ಲಿ ಇದೆ ಎಂದು ಭಾವಿಸಿಕೊಂಡರೆ ಅದು ತಪ್ಪು. ವಿದ್ಯಾವಂತ ತಂದೆ ತಾಯಿಯರು ಕೂಡ ತಮ್ಮ ಮಗನ ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವವನ್ನು ಮಗಳಿಗೆ ನೀಡದಿರುವ ಬಹಳಷ್ಟು ಪ್ರಸಂಗಗಳನ್ನು ನಾವು ಕಾಣಬಹುದು. ಹೀಗಾಗಿ ಸ್ತ್ರೀಯರ ಕುರಿತಾಗಿನ ತಾರತಮ್ಯಗಳು ಮನೆಯ ಒಳಗಿನಿಂದಲೇ ಪ್ರಾರಂಭವಾಗುತ್ತದೆ ಎನ್ನುವುದನ್ನು ನಾವು ಅಲ್ಲಗಳೆಯುವಂತಿಲ್ಲ. ಇದೇ ಕಾರಣಕ್ಕೆ ಭೇಟಿ ಬಚಾವೋ ಭೇಟಿ ಪಡಾವೋ ಎನ್ನುವಂತ ಮಹತ್ವದ ಕರ‍್ಯಕ್ರಮಗಳು ಕೂಡ ಹೇಳಿಕೊಳ್ಳುವ ಮಟ್ಟದಲ್ಲಿ ಪರಿಣಾಮವನ್ನು ಬೀರುತ್ತಿಲ್ಲ. ಇನ್ನು ಮದುವೆ ಎನ್ನುವ ಸಂಸ್ಥೆಯಲ್ಲಿ ಕೂಡ ಪುರುಷರದ್ದೇ ಪಾರಮ್ಯ. ಗಂಡಿಗೆ ಅತೀ ಮಹತ್ವ ನೀಡುವ ಈ ಸಂಸ್ಥೆ ಹೆಣ್ಣನ್ನು ಹೆಣ್ಣಿನ ಮನೆಯವರನ್ನು ಅಧಃಪತನಕ್ಕೆ ಇಳಿಸುತ್ತವೆ. ಹೆಣ್ಣು ಹೆತ್ತವರು ಕಡೇ ಎನ್ನುವ ನಿರ್ಣಯವನ್ನು ಹೊಂದಿದೆ. ಮತ್ತು ಅದರ ಜತೆಯಲ್ಲಿ ವರದಕ್ಷಿಣೆ ಎನ್ನುವ ಭೂತ ಆಕೆಯ ಮತ್ತು ಆಕೆಯನ್ನು ಹೆತ್ತವರ ಬದುಕನ್ನು, ಕನಸನ್ನು ಹೊಸಕಿ ಬಿಡುತ್ತದೆ. ಅಲ್ಲದೆ ಅವಳನ್ನು ಭ್ರೂಣದಲ್ಲಿಯೇ ಸಾಯಿಸುವಂತೆ ಮಾಡುವ ನಿಲುವಿಗೆ ತಂದು ನಿಲ್ಲಿಸುತ್ತದೆ.
ಹಾಗಿದ್ದರೆ ಇನ್ನು ಮಹಿಳೆಯರ ಸ್ಥಿತಿಗತಿಗಳು ಏನು ಬದಲಾಗಿಯೇ ಇಲ್ಲವಾ? ಅವಳ ಜೀವನ ಮಟ್ಟದಲ್ಲಿ ಏರಿಕೆ ಆಗಿಯೇ ಇಲ್ಲವಾ ಎಂದು ಕೇಳುವುದಾದರೆ ಸ್ವಲ್ಪ ಮಟ್ಟಿಗೆ ಬದಲಾಗಿದೆ ಎಂತಲೇ ಹೇಳಬಹುದು. ಮತ್ತದೇ ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಶೇಕಡ 65 ರಷ್ಟು ಹೆಣ್ಣುಮಕ್ಕಳು ಇದೀಗ ವಿದ್ಯಾವಂತರಾಗುತ್ತಿದ್ದಾರೆ. ಇದು ಸಮಾಧಾನದ ವಿಚಾರವೇ. ಆದರೆ ಉದ್ಯೋಗದ ವಿಚಾರಕ್ಕೆ ಬಂದರೆ ಅಷ್ಟೊಂದು ಸಕಾರಾತ್ಮಕತೆ ಕಂಡು ಬರುವುದಿಲ್ಲ. ಶೇಕಡ 61 ರಷ್ಟು ಮಂದಿ ಮಾತ್ರ ಉದ್ಯೋಗಸ್ಥೆಯರಾಗುತ್ತಿದ್ದಾರೆ. ಇನ್ನು ಉದ್ಯೋಗ ರಂಗದಲ್ಲಿಯೂ ಕೂಡ ಆಕೆಯ ಸ್ಥಿತಿಗತಿಗಳು ಹೇಳಿಕೊಳ್ಳುವ ಮಟ್ಟಿಗೆ ಚನ್ನಾಗಿಲ್ಲ. ಮೇಲಧಿಕಾರಿಗಳ ಲೈಂಗಿಕ ದೌರ್ಜನ್ಯ, ಸಹೋದ್ಯೋಗಿಗಳ ಕಿರುಕುಳ, ವೇತನ ತಾರತಮ್ಯ ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವುದು ಮಹಿಳೆಯರ ವಿಚಾರಕ್ಕೆ ಬಂದರೆ ಇನ್ನು ಗಗನಕುಸುಮವಾಗಿಯೇ ಉಳಿದಿದೆ. ಕೃಷಿ ಕ್ಷೇತ್ರದಲ್ಲಿ ಬಹುತೇಕ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರು ಕೂಡ ಅಲ್ಲಿ ಅವರುಗಳ ಪರಿಸ್ಥಿತಿ ಇನ್ನು ತಳಮಟ್ಟದಲ್ಲಿದೆ. ಹೆಂಗಸಿಗೆ ಕಡಿಮೆ ಕೂಲಿ ಎನ್ನುವುದು ಪ್ರತಿಯೊಬ್ಬರಲ್ಲಿ ಬೇರೂರಿ ಹೋಗಿದೆ. ಇನ್ನು ಉದ್ಯೋಗಸ್ಥ ಮಹಿಳೆಯರು ಸುಖವಾಗಿದ್ದಾರಾ. ತಮ್ಮ ಆರ್ಥಿಕ ಮಟ್ಟಗಳನ್ನು ಕಾಯ್ದುಕೊಂಡಿದ್ದಾರೆಯೇ ಎಂದರೆ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಯತ್ನಿಸುವ ಆಕೆಗೆ ಯಾವ ರಿಯಾಯತಿಯನ್ನು ಕೂಡ ಮನೆಯ ಸದಸ್ಸರು ನೀಡುವುದಿಲ್ಲ. ಆಕೆ ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಮನೆ ಮತ್ತು ಮಕ್ಕಳು ಆಕೆಯ ಜವಾಬ್ದಾರಿ ಎನ್ನುವಂತಹ ಅಲಿಖಿತ ಕಾನೂನು ಕುಟುಂಬಗಳಲ್ಲಿ ಇದೆ. ಆದ ಕಾರಣ ಆಕೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಇನ್ನು ಮಹಿಳಾ ರಕ್ಷಣೆ ಮತ್ತು ಮಹಿಳೆಯ ಸುರಕ್ಷಿತೆಗೆ ಎನ್ನುವ ಮಾತಂತೂ ದಿನ ನಿತ್ಯದ ಮಾತಿನ ಸರಕಾಗಿದೆ. ಯಾವ ನಾಗರೀಕ ಸಮಾಜ ಈ ಮಾತುಗಳನ್ನು ಆಡುತ್ತದೆಯೋ ಅದು ದುಸ್ಥಿತಿಯ ಹಂತಕ್ಕೆ ತಲುಪಿದೆ ಎಂತಲೇ ಅರ್ಥ. ಅಂತಹ ಶೋಚನೀಯ ಸ್ಥಿತಿಯಲ್ಲಿ ನಮ್ಮ ಭಾರತವಿದೆ ಎನ್ನುವುದು ಬೇಕೋ ಬೇಡವೋ ಒಪ್ಪಿಕೊಳ್ಳಬೇಕಾದ ಅನಿವರ‍್ಯ. ರಾಯಿಟರ್ಸ್ ಫೌಂಡೇಶನ್ನಿನ ಒಂದು ಸಮೀಕ್ಷೆ ಭಾರತ ಮಹಿಳೆಯರಿಗೆ ಸುರಕ್ಷಿತ ದೇಶವಲ್ಲ ಎಂದು ತಿಳಿಸಿದೆ. ಹೀಗಾಗಿಯೇ ಸರ್ಕಾರ ಅನೇಕ ಕರ‍್ಯಕ್ರಮಗಳನ್ನು, ಜಾಗೃತಿಯನ್ನು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಏನೆಲ್ಲ ಕ್ರಮಗಳನ್ನು ಕಾನೂನುಗಳನ್ನು ಕೈಗೊಳ್ಳುತ್ತಿರುವಾಗಲು. ದಿನ ಒಂದಲ್ಲ ಒಂದು ಕಡೆ ಮಹಿಳೆಯರ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಅತ್ಯಾಚಾರಗಳಂತಹ ಅಮಾನವೀಯ ಕ್ರಿಯೆಗಳು ನಡೆಯುತ್ತಲೇ ಇವೆ. ಮತ್ತದು ತಿಳಿಯಬಾರದು ಎನ್ನುವ ಕಾರಣಕ್ಕೆ ಅವರುಗಳನ್ನು ಪ್ರಾಣಿಗಳಿಗಿಂತಲೂ ಹೀನಾಯವಾಗಿ ಸಾಯಿಸುವುದು ನಡೆಯುತ್ತಲೇ ಬಂದಿದೆ.
ಕೆಲ ವರುಷಗಳ ತನಕ ಅದು ಯಾರ ಗಮನಕ್ಕೂ ಬಾರದೇ ಸರ‍್ಯ ಹುಟ್ಟಿ ಸಹಜವಾಗಿ ಮುಳುಗಿ ಹೋಗುವ ತೆರದಲ್ಲಿ ಈ ರೀತಿಯ ವಿಚಾರಗಳು ಸಹ ಮುಚ್ಚಿಹೋಗುತ್ತಿದ್ದವು. ಸ್ತ್ರೀ ಕೂಡ ತನ್ನ ಮೇಲಾಗುವ ದೌರ್ಜನ್ಯ ತನ್ನ ಜೀವನದ ಒಂದು ಭಾಗ ಎನ್ನುವಂತೆ ಸ್ವೀಕರಿಸುವುದು ಮತ್ತು ಶೀಲ ಪಾವಿತ್ರ್ಯತೆ, ಸನ್ನಡತೆ ಈ ಎಲ್ಲವೂ ತನಗೊಬ್ಬಳಿಗೆ ಸಲ್ಲುವಂತದ್ದು ಪುರುಷನಾದವ ಏನು ಮಾಡಿದರೂ ಅದು ಸರಿಯೇ ಇರುತ್ತದೆ ಎಂದು ಭಾವಿಸಿಕೊಂಡಿದ್ದು ಇದಕ್ಕೆಲ್ಲ ಮುಖ್ಯ ಕಾರಣ. ಆದರೆ ಸಂತಸದ ವಿಚಾರವೆಂದರೆ ಮಾಧ್ಯಮ ಕ್ರಾಂತಿಯ ನಂತರ ಈ ರೀತಿಯ ವಿಚಾರಗಳು ಜನರನ್ನು ಬಹುಬೇಗ ತಲುಪುತ್ತಿವೆ. ಅದಕ್ಕೆ ಆಕ್ರೋಶಗಳು ಕೂಡ ಮೊಳಕೆಯೊಡೆಯುತ್ತಿವೆ. ಆದರೂ ಕೂಡ ದೌರ್ಜನ್ಯ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಪುಟ್ಟ ಬಾಲಕಿಯರಿಂದ ಹಿಡಿದು ೭೫ರ ಹಿರಿಯ ಮಹಿಳೆಯವರೆಗೂ ಬದುಕಿದಷ್ಟು ಕಾಲ ನಿರಂತರ ಭಯದಲ್ಲಿಯೇ ಬದುಕುವಂತಾಗಿದೆ. ಆದರೆ ದೌಭಾಗ್ಯವೆಂದರೆ ಈ ರೀತಿಯ ಭಯ ಹುಟ್ಟಿಸಿರುವುದು ಯಾವುದೇ ಅನಾಮಿಕ ಪ್ರಾಣಿಗಳಲ್ಲ. ಅಥವಾ ಯಾವುದೋ ಲೋಕದಿಂದ ಬಂದAತಹ ಆಗಂತುಕರೂ ಅಲ್ಲ. ನಮ್ಮ ನಡುವೇ ಇರುವ ನಮ್ಮಂತೆಯೇ ಬೆಳೆಯುವ ಯಾರದ್ದೋ ಮಗ, ಯಾರದ್ದೋ ಅಣ್ಣ, ಮತ್ತು ಯಾವುದೋ ಹೆಣ್ಣಿಗೆ ಏನಾದರೊಂದು ಸಂಬAಧಿಯಾಗಿಯೇ ಇರುವ ಪುರುಷರಿಂದ. ನಾವು ಚಂದ್ರಯಾನ ಮಾಡುತ್ತಿದ್ದೇವೆ. ನಮ್ಮ ಹೆಣ್ಣುಮಕ್ಕಳು ಕಮಾಂಡರ್ ಹುದ್ದೆಗೆ ಏರುತ್ತಿದ್ದಾರೆ ಎಂದು ಸಂಭ್ರಮಪಟ್ಟುಕೊಳ್ಳುವಾಗಲೇ ರಾತ್ರಿ ಎಂಟು ಗಂಟೆಯ ಮೇಲೆ ಯಾವೊಬ್ಬ ಹೆಣ್ಣು ಮಗಳು ರಸ್ತೆಗೆ ಇಳಿಯಲಾಗದಂತಹ ಪರಿಸ್ಥಿತಿ ಇದೆ. ಮಹಿಳಾ ಮೀಸಲಾತಿ, ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ ಈ ಎಲ್ಲವೂ ಭಾಷಣದ ವಸ್ತುಗಳಾಗಿವೆ. ಹಾಗಿದ್ದರೆ ಈ ಎಲ್ಲದಕ್ಕೆ ಪರಿಹಾರಗಳೇ ಇಲ್ಲವೇ ಎಂದರೆ ಖಂಡಿತ ಇದೆ. ಬಹು ಮುಖ್ಯವಾಗಿ ಪುರುಷ ಸಮಾಜ ಹೆಣ್ಣು ಕೂಡ ತನ್ನ ಹಾಗೆಯೇ ಮನುಷ್ಯ ಜೀವಿ ಎಂದು ಭಾವಿಸುವುದು ಮೂಲಭೂತವಾಗಿ ಆಗಬೇಕಿರುವ ಬದಲಾವಣೆ.
ಅಂತೆಯೇ ಪ್ರತಿ ತಂದೆ ತಾಯಿ ತನ್ನ ಮಗನಿಗೆ ಹೆಣ್ಣು ಮಕ್ಕಳ ಜತೆ ವರ್ತಿಸಬೇಕಾದ ರೀತಿಯನ್ನ ಮತ್ತು ಅವ ಈ ಲೋಕದವನೇ ಆಗಿದ್ದು ಈ ಪ್ರಕೃತಿಯ ಸಾಮಾನ್ಯ ಜೀವಿಯಂತಲೇ ಹೇಳಿಕೊಡುವ ಪದ್ಧತಿಯನ್ನ. ಅವನಲ್ಲಿ ಪುರುಷಹಂಕಾರವನ್ನು ಬೆಳೆಸದೆ. ಮನೆಯಲ್ಲಿ ಹೆಣ್ಣು ಮಕ್ಕಳ ಮತ್ತು ಅವನ ನಡುವೆ ಯಾವೊಂದು ವ್ಯತ್ಯಾಸವನ್ನು ಮಾಡದೆ ತನ್ನ ಸಹಜೀವಿಯೊಟ್ಟಿಗೆ ಬದುಕುವ ಸಹೃದಯತೆಯನ್ನು, ಸ್ತ್ರೀಯರನ್ನು ಗೌರವಿಸಬೇಕಾದ ರೀತಿಗಳನ್ನು ಹೇಳಿಕೊಡಲೇ ಬೇಕಾದ್ದು ಅನಿವಾರ‍್ಯ.
ಗಂಡು ಮಗ ಎಲ್ಲಿ ಹೋದರೇನು ಎನ್ನುವ ಹುಂಬತನ ಬಿಟ್ಟು ಅವ ಎಲ್ಲಿ ಹೋದ ಬಂದ ಅವನ ಸಂಗಡಿಗರು ಯಾರು ಅವ ಮಾಡುವ ಕ್ರಿಯೆಗಳೇನು ಎಂದೆಲ್ಲ ನೋಡುವ ಜವಾಬ್ದಾರಿ ಪಾಲಕರ ಮೇಲಿದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ನಮ್ಮಲ್ಲಿ ಯಾರಿಂದ ತೊಂದರೆಯಾಗುತ್ತದೆಯೋ ಅವರನ್ನು ರಸ್ತೆಯಲ್ಲಿ ಬಿಟ್ಡು ಯಾರು ತೊಂದರೆಗೆ ಒಳಗಾಗುತ್ತಾರೋ ಅವರನ್ನು ಕೂಡಿಡುವ ಪದ್ಧತಿ ಬೆಳೆದು ಬಂದಿದೆ. ಅದನ್ನು ಬಿಡಬೇಕು.
ನಮ್ಮ ಸಮಾಜದಲ್ಲಿ ಸಂಸ್ಕಾರ ಮತ್ತು ಲಜ್ಜೆ ಹೆಣ್ಣಿಗೆ ಮಾತ್ರ ಸೀಮಿತವಾದ್ದು ಎನ್ನುವ ವಿಚಿತ್ರ ಹೇರಿಕೆಯೊಂದನ್ನು ಹೇರಲಾಗಿದೆ. ಇದೇ ಕಾರಣಕ್ಕೆ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಮೇಲೆ ನಡೆಯುವ ಶೋಷಣೆಗಳನ್ನು ಗೌಪ್ಯವಾಗಿರಿಸುತ್ತಾರೆ. ಅದೇ ಧರ‍್ಯದ ಮೇಲೆಯೇ ಪುರುಷರು ಹೆಂಗಸರನ್ನು ನಿರಂತರ ಶೋಷಿಸುತ್ತಾರೆ. ಅಲ್ಲದೇ ಪ್ರತಿ ಘಟನೆಗಳಿಗೂ ಹೆಂಗಸರ ನಡವಳಿಕೆಗಳಿಗೂ ತಾಳೆ ಹಾಕುವ ಮತ್ತು ಆಕೆಯನ್ನೇ ತಪ್ಪಿತಸ್ಥೆಯನ್ನಾಗಿಸುವ ಪುರುಷ ಪ್ರಧಾನ ಮನಸ್ಥಿತಿಗಳು ಆಕೆಯನ್ನು ಅನ್ಯಾಯದ ವಿರುದ್ಧ ತಲೆ ಎತ್ತದಂತೆ ಮಾಡುತ್ತವೆ. ಉದಾಹರಣೆಗೆ ಅವಳ ಬಟ್ಟೆ, ಅವಳ ಸಂಜೆಯ ಮೇಲಿನ ತಿರುಗಾಟಗಳು, ಅವಳ ನಗು, ಅವಳ ಮಾತು, ಅವಳ ವಿದ್ಯೆ. ಅವಳ ನೌಕರಿ. ಅವಳ ಪ್ರಾಪಂಚಿಕ ವ್ಯವಹಾರ ಈ ಎಲ್ಲವೂ ಕೂಡ ಅವಳ ಮೇಲೆ ಆರೋಪಗಳನ್ನು ತಂದಿಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಇದು ನಿಲ್ಲಬೇಕು.
ಇನ್ನು ಹೆಣ್ಣು ಮಕ್ಕಳನ್ನು ನಾಜೂಕಾಗಿ ಬೆಳೆಸುವ ಶಿಕ್ಷಣವೊಂದು ನಮ್ಮ ನಡುವಿದೆ. ಬಹುತೇಕ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಹೊರಗಿನ ಪ್ರಪಂಚದಲ್ಲಿ ಧರ‍್ಯವಾಗಿ ಬದುಕುವು ಸಂಕಟಗಳನ್ನು ಎದುರಿಸುವ ಕಲೆಗಳನ್ನು ಕಲಿಸುವುದೇ ಇಲ್ಲ. ಹೆಣ್ಣು ಮಕ್ಕಳನ್ನು ಬರಿಯ ಮದುವೆ ಸಲುವಾಗಿ ಬೆಳೆಸುವ, ಯಾರು ಏನೆಂದಾರು ಎನ್ನುವ ಆಲೋಚನೆಗಳಲ್ಲಿಯೇ ಅವರುಗಳ ಆತ್ಮಸ್ಥೆöರ‍್ಯವನ್ನು ಕುಗ್ಗಿಸುವ ಪ್ರಯತ್ನವನ್ನು ತಂದೆ ತಾಯಿಗಳು ಬಿಡಬೇಕು. ಸ್ತ್ರೀ ಸಮಾನತೆ ಎನ್ನುವುದು ಮನೆಯ ಒಳಗಿನಿಂದಲೇ ಆರಂಭವಾಗಬೇಕೇ ವಿನಃ ಮತ್ತೆಲ್ಲಿನಿಂದಲೋ ಅಲ್ಲ ಆ ದಿಕ್ಕಿನಲ್ಲಿ ಪ್ರತಿಯೊಬ್ಬರು ಯೋಚಿಸಿದಾಗ ಮಾತ್ರ ಈ ಮಹಿಳಾ ದಿನಕ್ಕೊಂದು ಅರ್ಥ. ಅದಿಲ್ಲದಿದ್ದಲ್ಲ ಉಳಿದ ಎಲ್ಲ ದಿನಾಚರಣೆಗಳ ಹಾಗೆ ಇದು ಕೂಡ ಕಾಗದದ ಮೇಲಿನ ಹುಲಿಯಂತೆ ಕಾಣುತ್ತದೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!