Friday, November 27, 2020

ಶಾಲೆಗಳಲ್ಲಿ ಇಕೋ ಕ್ಲಬ್

– ಸುನೀತ ಕೆ.ಕೆ., ಶಿಕ್ಷಕಿ
[email protected]

ಶಾಲೆಗಳ ಬೆಳವಣಿಗೆಗೆ ವ್ಯಕ್ತಿತ್ವ ವಿಕಸನಕ್ಕೆ ವಿದ್ಯಾರ್ಥಿಗಳಿಗಾಗಿ ಸರ್ಕಾರ ಆಯೋಜಿಸುವ ಯೋಜನೆಗಳು ಹತ್ತು ಹಲವು. ಪಠ್ಯವಸ್ತು ಕಲಿಕೆಯ ಜತೆ ಜತೆಯಲ್ಲೆ ಇವೆಲ್ಲವನ್ನು ಅಳವಡಿಸಿಕೊಳ್ಳುತ್ತಲೇ ಎಲ್ಲಾ ಯೋಜನೆಗಳಿಗೂ ಜೀವ ತುಂಬುವ ಜವಾಬ್ದಾರಿ ಶಿಕ್ಷಕರದು. ಹೀಗೆ ಹಲವು ಯೋಜನೆಗಳಲ್ಲಿ ಇಕೋ ಕ್ಲಬ್ ಕೂಡ ಒಂದು.
“ಪ್ರಕೃತಿ ತನ್ನ ಆನೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ” ಗಾಂಧೀಜಿಯವರ ಸಾರ್ವಕಾಲಿಕ ಸತ್ಯದ ನುಡಿ ಪ್ರಸ್ತುತ ಸಾಕಷ್ಟು ಚಿಂತನೆಗೆ ಒಡ್ಡುತ್ತದೆ.
ಪ್ರಕೃತಿಯನ್ನು ಕಾಯ್ದುಕೊಳ್ಳುತ್ತಲೇ ನಮ್ಮ ಸುತ್ತಲಿನ ಪರಿಸರವನ್ನು ಕಾಪಿಡುವಲ್ಲಿ ಎಳೆವೆಯಿಂದಲೇ ಬದುಕಿನಲ್ಲಿ ಅನುಸರಿಸುವಂತೆ ಮಾಡುವಲ್ಲಿ ಇಕೋ ಕ್ಲಬ್ ಬೇರೆ ಎಲ್ಲಾ ಯೋಜನೆಗಳನ್ನು ಮೀರಿ ದಾಪುಗಾಲಿಡುತ್ತಿದೆ.
ಇತ್ತೀಚೆಗೆ ಶಾಲೆಗಳು ಸ್ವಚ್ಛವಾಗಿಡುವಲ್ಲಿ, ಹಸಿರಾಗಿಡುವಲ್ಲಿ ಅದೆಷ್ಟು ಕಾಳಜಿ ವಹಿಸುತ್ತಿದೆ ಎಂದರೆ ಒಂದು ಶಾಲೆಯಲ್ಲಿ ಕಂಡು ಕೊಂಡ ಹೊಸತನದ ಹಂಚಿಕೆಯಿಂದ ಉಳಿದವರು ಅದನ್ನು ಅನುಸರಿಸುತ್ತಲೇ ಅವರೂ ಕಾಡಾ ಮತ್ತೊಂದು ಹೊಸತನ ಕಂಡಕೊಳ್ಳುವತ್ತ ಹೊರಳಲು ಹವಣಿಸುತ್ತಾರೆ. ಇಲ್ಲಿ ನಮ್ಮ ಶಾಲೆ ಮತ್ತೆಲ್ಲಾ ಶಾಲೆಗಿಂತ ಭಿನ್ನವಾಗಿರಬೇಕೆಂಬ ಸ್ಪರ್ಧಾತ್ಮಕ ಮನೋಭಾವ ಮತ್ತು ಅರ್ಪಣಾ ಮನಸ್ಸು ಶಾಲೆಗಳ ಪರಿಸರವನ್ನು ಸುಸ್ಥಿತಿಯಲ್ಲಿಡುತ್ತದೆ.
ಶಾಲಾ ವಿದ್ಯಾರ್ಥಿಗಳನ್ನೊಳಗೊಂಡ ಈ ಹಸಿರುಪಡೆ ತನ್ಮೂಲಕ ವರ್ಷದ ಆರಂಭದಿಂದಲೇ ಅಂದರೆ ಜೂನ್ ೫ ಪರಿಸರ ದಿನಾಚರಣೆಯಿಂದಲೇ ತನ್ನ ಕಾರ್ಯಕ್ಕೆ ನಾಂದಿ ಹಾಡುತ್ತದೆ. ಶಾಲಾವರಣದಲ್ಲಿ ಗಿಡನೆಡುವುದು, ಗಿಡಗಳನ್ನು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಂಚಿಕೊಟ್ಟು ಅವುಗಳ ಪೋಷಣೆ ಮಾಡುವುದು, ಕಸದ ವಿಂಗಡನೆ ಹಾಗೂ ವಿಲೇವಾರಿ, ಬಣ್ಣವಿಲ್ಲದ ಮಣ್ಣಿನ ಗಣಪತಿ, ಪಟಾಕಿ ರಹಿತ ಪರಿಸರ ಸ್ನೇಹಿ ದೀಪಾವಳಿ, ಸ್ವಚ್ಚ ಭಾರತದ ಕಲ್ಪನೆ, ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲೆ, ಹೊರ ಸಂಚಾರ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತಿವೆ. ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರವನ್ನು ಮಲಿನ ಮಾಡದಂತೆ ಹೇಗಿಟ್ಟುಕೊಳ್ಳಬೇಕು, ಈ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ನಮ್ಮ ಪಾತ್ರವೇನು ಎಂದು ಎಚ್ಛರಿಸುತ್ತವೆ.
ಪರಿಸರಕ್ಕೆ ಅತ್ಯಂತ ಮಾರಕವಾಗುತ್ತಿರುವ ಪ್ಲಾಸ್ಟಿಕ್, ಇವುಗಳ ಬಳಕೆ ಹೇಗೆ ಕಡಿಮೆ ಮಾಡಕೊಳ್ಳಬಹುದು ? ಮತ್ತೆ ಮರುಬಳಕೆ ಹೇಗೆ ಎಂಬ ವಿಚಾರದಲ್ಲಿ ಮನವರಿಕೆ ಮಾಡಿಕೊಡುತ್ತದೆ. ಅದೆಷ್ಟೋ ಶಾಲೆಗಳು ಮಕ್ಕಳ ಹುಟ್ಟು ಹಬ್ಬಗಳಂದು ಪ್ಲಾಸ್ಟಿಕ್ ಹೊದಿಕೆಯೊಳಗಿರುವ ಚಾಕ್ಲೇಟ್ ಹಂಚುವುದನ್ನು ಬಿಟ್ಟು ಪಾಯಸ ಮಾಡಿಸುವ ಕ್ರಮವನ್ನು ಅನುಸರಿಸುತ್ತಿರುವುದು ಪ್ಲಾಸ್ಟಿಕ್ ಚೂರುಗಳನ್ನು ನೆಲಕ್ಕೆ ಎಸೆಯುವುದರಿಂದಾಗುವ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ತೆಗೆದುಕೊಳ್ಳುತ್ತಿರುವ ಒಳ್ಳೆಯ ಪ್ರಯತ್ನವೇ ಸರಿ.
ಚಾಕ್ಲೇಟ್ ಹಂಚುವ ಬದಲು ಪ್ರತಿ ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದಂದು ಶಾಲೆಗೊಂದು ಗಿಡ ತಂದು ಎಲ್ಲರ ಸಮ್ಮುಖದಲ್ಲಿ ನೆಟ್ಟು ಆ ಗಿಡಕ್ಕೆ ವಿದ್ಯಾರ್ಥಿಯ ಹೆಸರನ್ನಿಡುವುದರ ಮೂಲಕ ಶುಭಕೋರುತ್ತಾ, ಹಸಿರನ್ನು ಬೆಳೆಸುವ ಪ್ರಯತ್ನ ಅನೇಕ ಶಾಲೆಗಳು ಅನುಸರಿಸುತ್ತಿರುವುದು ಶ್ಲಾಘನೀಯ ಹಾಗೂ ಶುಭ ಸೂಚಕ ಕೂಡ.
ನೀರು ಪೋಲು ಮಾಡದೆ ಸದ್ಬಳಕೆ ಮಾಡುವಲ್ಲೂ ಕೂಡ ಅನೇಕ ಶಾಲೆಗಳು ಇಕೋ ಕ್ಲಬ್ ಅಡಿಯಲ್ಲಿ ಬೇರೆ ಬೇರೆ ರೀತಿಯ ವ್ಯವಸ್ಥೆಗಳನ್ನು ಅನುಸರಿಸುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳ ಸಾಲೇ ದೊರೆಯುತ್ತವೆ. ಮಕ್ಕಳ ಊಟಕ್ಕೆ ಮೊದಲು ತಟ್ಟೆ ತೊಳೆಯುವಾಗ ತಟ್ಟೆಯಲ್ಲಿ ತುಂಬಿದ ನೀರನ್ನು ತಮ್ಮ ತಮ್ಮ ಗಿಡದ ಬುಡಕ್ಕೆ ತೊಳೆದು, ಊಟದ ನಂತರವೂ ಒಂದು ತಟ್ಟೆ ನೀರನ್ನು ಗಿಡದ ಬುಡಕ್ಕೆ ಹಾಕುವುದು, ಹನಿ ನೀರಾವರಿ ಪದ್ಧತಿಯಂತೆ ಶಾಲಾ ಹಂತದಲ್ಲಾಗುವಂತಹ ಬೇರೆ ಬೇರೆ ಕ್ರಮಗಳನ್ನು ಅನುಸರಿಸುವುದು, ಅಕ್ಕಿ, ಬೇಳೆ ತೊಳೆದ ಪೌಷ್ಠಿಕಾಂಶದ ನೀರನ್ನು ಕೂಡ ಗಿಡಕ್ಕೆ ಹಾಕುತ್ತಿರುವ ಹೊಸ ಕ್ರಮವನ್ನು ತಿಳಿಸಿ ಮತ್ತೆಲ್ಲಾ ಶಾಲೆಗಳೂ ಅನುಸರಿಸುವುದು. ಹೀಗೆ ಒಂದೇ ಎರಡೇ ?
ಸಾವಯವ ಗೊಬ್ಬರ ತಯಾರಿಕೆಯಲ್ಲಿ ಕೂಡ ಇಕೋ ಕ್ಲಬ್ ವಿದ್ಯಾರ್ಥಿಗಳದು ಎತ್ತಿದ ಕೈ. ತರಕಾರಿ ಸಿಪ್ಪೆಗಳಿಂದ ತಯಾರಾಗುವ ಗೊಬ್ಬರ ಗಿಡಗಳ ಬುಡ ಸೇರುವುದು, ವಿಂಗಡಣೆಯಾದ ಒಣಕಸ ಕಸದ ಬುಟ್ಟಿ ಸೇರುವುದು ಹೀಗೆ ಇಕೋ ಕ್ಲಬ್ ಶಾಲೆಗಳಲ್ಲಿ ಬೇರೆ ಬೇರೆ ಚಟುವಟಿಕೆಗಳಿಂದ ಪರಿಸರ ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ.
ಇದರ ಹಿಂದೆ ಇಲಾಖಾ ಅಧಿಕಾರಿಗಳ ಮಾರ್ಗದರ್ಶನ, ಇಕೋ ಕ್ಲಬ್ ಸಂಯೋಜಕರ ಸಲಹೆ ಹಾಗೂ ಶಿಕ್ಷಕರ ಅರ್ಪಣಾ ಮನಸ್ಸು ವಿದ್ಯಾರ್ಥಿಗಳ ಮೂಲಕ ಕಾರ್ಯಪ್ರವೃತ್ತವಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಹಾಗೂ ಎಚ್ಚರಿಕೆಯನ್ನು ಕೂಡ ನೀಡುತ್ತಿದೆ.
ವಾಹನಗಳಲ್ಲಿ ಪ್ರಯಾಣಿಕರು ಬಳಸಿ ರಸ್ತೆಗೆ ಎಸೆಯುವ ಪ್ಲಾಸ್ಟಿಕ್ ಬಾಟಲಿ ಹಾಗೂ ಕವರ್‌ಗಳಿಂದಲೇ ಹೆಚ್ಚು ಪರಿಸರ ಮಲಿನತೆ ಎಂಬುದು ನಿತ್ಯ ಸತ್ಯ. ಇದನ್ನು ನಿಷೇಧಿಸಬೇಕಾಗಿದೆ. ಸಾರ್ವಜನಿಕ ವಾಹನಗಳಲ್ಲಿ ಕಡ್ಡಾಯವಾಗಿ ಕಸದ ಬುಟ್ಟಿಗಳನ್ನಿಡಬೇಕು. ಸಿಕ್ಕಿದಲ್ಲೆಲ್ಲ ಕಸ ಎಸೆಯದಂತೆ ಮತ್ತಷ್ಟು ಜಾಗೃತಿ ಮೂಡಿಸಬೇಕು.
ಹೊಳೆಯೊಳಗೆ ಬಂದು ಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಹಾಮಳೆಯ ವೇಳೆ ಹೊಳೆಯೇ ಅನಾವರಣ ಮಾಡಿ ಅಣಕಿಸಿದ್ದನ್ನು ಕಣ್ಣಾರೆ ಕಂಡಿದ್ದೇವೆ. ಹೀಗಾಗದಂತೆ ಸಾಕಷ್ಟು ಎಚ್ಛರಿಕೆಯ ಕ್ರಮಗಳು ಜಾರಿಯಾಗಬೇಕೆಂಬುದು ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕರ ಬಹುದೊಡ್ಡ ಕನಸು, ಅಭಿಲಾಷೆ, ನಿರೀಕ್ಷೆ ಹಾಗೂ ಅಪೇಕ್ಷೆ ಕೂಡ.. ಈಡೇರುವುದೇ ? ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿಗಳು

Latest News

ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಮೃತದೇಹ ನಾಯಿಪಾಲು!

newsics.comಲಕ್ನೊ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರಚರ್ ಮೇಲೆ ಇರಿಸಲಾದ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿನ್ನುತ್ತಿರುವ ಹೃದಯವಿದ್ರಾವಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉತ್ತರಪ್ರದೇಶದ...

ಕೊರೋನಾ ವಿರುದ್ಧ ಮರವೇರಿದ್ದ ಸ್ವಾಮೀಜಿ ತಪಸ್ಸು ಇಂದು ಅಂತ್ಯ

newsics.comಬೀದರ್: ಕೊರೋನಾ ಸಂಕಷ್ಟ ದೂರವಾಗಲೆಂದು ಪ್ರಾರ್ಥಿಸಿ ಮರದ ಮೇಲೆ ಕಳೆದ ಎಂಟು ದಿನಗಳಿಂದ ತಪಸ್ಸಿನಲ್ಲಿ ತೊಡಗಿದ್ದ ಮಹದೇವ ಸ್ವಾಮೀಜಿ ಇಂದು (ನ.27) ತಮ್ಮ ತಪಸ್ಸು ಅಂತ್ಯಗೊಳಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ ಸ್ವಾಮೀಜಿ ದರ್ಶನಕ್ಕೆ...

ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರಡೋನಾ ಹೆಸರು

newsics.com ನೇಪಲ್ಸ್(ಇಟಲಿ): ನೇಪಲ್ಸ್‌ನಲ್ಲಿರುವ ಸ್ಯಾನ್ ಪಾವೊಲೊ ಸ್ಟೇಡಿಯಂ ಹೆಸರು ಬದಲಾಗಲಿದೆ. ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರ ಹೆಸರಿನಲ್ಲಿ ಸ್ಟೇಡಿಯಂಗೆ ಮರುನಾಮಕರಣ ಮಾಡಲು ನೇಪಲ್ಸ್‌ನ ಮೇಯರ್ ಗುರುವಾರ (ನ.26)...
- Advertisement -
error: Content is protected !!