Saturday, January 28, 2023

ಯಕ್ಷರಂಗದ ಕಲಾದೀಪ ಮಂಕಿ ಈಶ್ವರ್ ನಾಯ್ಕ

Follow Us

ಯಕ್ಷರಂಗದಲ್ಲಿ ಪ್ರೇಕ್ಷಕರ ಕಣ್ಮಣಿಯಾಗಿ ಬೆಳಗುತ್ತಿರುವ, ತನ್ನದೇ ಅಭಿಮಾನಿಗಳನ್ನೂ ಹೊಂದಿರುವ ಮಂಕಿ ಈಶ್ವರ್ ನಾಯ್ಕ ಅವರ ಬದುಕಿನ ಕಥೆಯಿದು.

===

  • ವಿಷ್ಣು ಭಟ್ ಹೊಸ್ಮನೆ
    ಚಿತ್ರಗಳು: ಉಪ್ಪಿನಕುದ್ರು ಧೀರಜ್ ಉಡುಪ

ಸಂಭ್ರಮವೋ ಸಂತಸವೋ ಗರಿಗೆದರಿ ನಿಲ್ಲುವುದು ಆಸೆಯೊಂದು ಪೂರ್ತಿಯಾದಾಗ, ಗಮ್ಯವನ್ನು ತಲುಪಿದ ಕ್ಷಣದಲ್ಲಿ ಅಥವಾ ಬದುಕಿನಲ್ಲೊಂದು ಅದ್ಭುತ ನಡೆದು ನೆಮ್ಮದಿಯ ನಿಟ್ಟುಸಿರು ಬಿಟ್ಟಾಗ. ಹೊಟ್ಟೆ, ಬಟ್ಟೆ ಮತ್ತು ಕಟ್ಟೆ ಈ ಮೂರೂ ಬದುಕಲು ಬೇಕು. ಆದರೆ ಈ ಮೂರಕ್ಕೋಸ್ಕರವೇ ಇವತ್ತು ಬದುಕುವಂತಾಗಿದೆ. ನಾಳೆಯ ಚಿಂತೆಗಳು ಇವತ್ತಿನ ಪುಟ್ಟಪುಟ್ಟ ಖುಷಿಯನ್ನು ತಬ್ಬಲಿಯಾಗಿಸುತ್ತಿವೆ. ಆದರೆ ಜಗತ್ತಿಗೆ ಇಂತಹ ಮುಖಗಳು ಬೇಡ. ನೋವನ್ನು ನುಂಗಿಕೊಂಡು ನಗುವ ಸಿಂಗರಿಸಿಕೊಂಡು ಇದ್ದರೆ ಸಾಕು. ಹೂವಿನ ಚಂದ ಮತ್ತು ಘಮ ನಮಗೆ ಕೊಡುವ ಮುದದ ಹೊರತಾಗಿ ಆ ಹೂವಿನ ಆಯುಷ್ಯವಾಗಲೀ ಸಂಜೆಯಾಗುತ್ತಲೇ ತೊಟ್ಟು ಕಳಚಿ ಬೀಳುವ ಸ್ಥಿತಿಯಾಗಲೀ ನಮ್ಮನ್ನು ಕಾಡುವುದಿಲ್ಲ. ಇವತ್ತು ಸಂಬಂಧಗಳೂ ಇದೇ ಹಾದಿಯಲ್ಲಿವೆ. ಬದುಕಿನ ಪಯಣಗಳಿಗೂ ಇದೇ ಹೆದ್ದಾರಿ!
ಒಂದು ಒಳ್ಳೆಯ ಹಂಬಲಕ್ಕೆ ಬದುಕಿಗೆ ಬೆಂಬಲವಾಗಿ ನಿಲ್ಲುವ ತಾಕತ್ತಿದೆ. ಆದರೆ ಈ ಹಂಬಲಕ್ಕೆ ಹರಡಿಕೊಳ್ಳಲು ಅವಕಾಶ ಬೇಕು. ಅನುಕೂಲವೂ ಬೇಕು. ಈ ಜಗತ್ತಿನಲ್ಲಿ ಬೆಳಕು-ನೆರಳು ಎರಡೂ ಇಲ್ಲದೆ ಸತ್ತುಹೋದ ಆಸೆಗಳೆಷ್ಟೋ ಅಥವಾ ಬದುಕುಗಳೆಷ್ಟೋ. ಇಂತಹ ಜಗತ್ತಿನಲ್ಲಿ ಆ ಹುಡುಗ ಆಸೆಗಳ ಮೂಟೆಯನ್ನು ಹೊತ್ತುಕೊಂಡು ನಿಂತಿದ್ದ. ನಾಳೆಗಳನ್ನು ಹೊಸ ಬಗೆಯಲ್ಲಿ ಕಾಣುವ ಕನಸುಗಳು ಕಂಗಳಲ್ಲಿ ಹುಟ್ಟಿ ಬೆಳೆಯುತ್ತ ಇರುವಾಗಲೇ ಬದುಕು ಎಲ್ಲವನ್ನೂ ಬದಲಾಯಿಸುವ ತಯಾರಿಯಲ್ಲಿತ್ತು. ಆದರೆ ಈ ಹುಡುಗನಿಗೆ ಕಲಿಯುವ ಆಸೆ. ತಾನು ಓದಿ ಒಳ್ಳೆಯ ಶಿಕ್ಷಕನಾಗಬೇಕೆಂದುಕೊಂಡವನ ಕೈಯಲ್ಲಿ ಪುಸ್ತಕ ಕೊಳ್ಳಲೂ ದುಡ್ಡು ಇಲ್ಲದ ಸ್ಥಿತಿ. ಪಿಯೂಸಿ ತನಕ ಉನ್ನತ ಶ್ರೇಣಿಯಲ್ಲಿಯೇ ತೇರ್ಗಡೆ ಹೊಂದುತ್ತಾ ಇದ್ದ ಹುಡುಗನಿಗೆ ದ್ವಿತೀಯ ಪಿಯೂಸಿಗೆ ಬಂದಾಗ ಖಾಲಿ ಕೈ. ಓದುವ ಆಕಾಂಕ್ಷೆ ಹೆಚ್ಚುತ್ತಿತ್ತು. ಹಳೆಯ, ಯಾರೋ ಓದಿ ಬಿಟ್ಟ ಪುಸ್ತಕವೂ ಸಿಗದೇ ಹೋದಾಗ ಮುಂದೆ ಓದುವ ಬಯಕೆ ಸಾಯುತ್ತ ಹೋಯಿತು. ಆದರೆ ಬದುಕಿಗೆ ಮುಂದೇನು? ನನ್ನ ಬದುಕಿಗೆ ಗುರಿಯೇನು? ಎಂಬ ಚಿಂತೆ ಹುಡಗನನ್ನು ಕಾಡುತ್ತಿದ್ದಾಗ ಕೆರೆಮನೆ ಶಂಭು ಹೆಗಡೆಯವರು ನಡೆಸುತ್ತಿದ್ದ ಯಕ್ಷಗಾನ ಶಾಲೆಯ ಬಗೆಗೆ ಈ ಬಾಲಕನ ಕಿವಿಗೆ ಬಿತ್ತು. ಆ ಯಕ್ಷಗಾನ ಶಾಲೆಯಲ್ಲಿ ಐನೂರು ರೂಪಾಯಿ ಸ್ಟೈಪೆಂಡ್ ಕೊಡುತ್ತಾರೆ ಎಂಬ ವಿಷಯ, ಈ ದುಡ್ಡಿನಲ್ಲಿ ಮತ್ತೆ ವಿದ್ಯಾಭ್ಯಾಸವನ್ನೂ ಮುಂದುವರಿಸಲು ಅನಕೂಲವಾದೀತು ಎಂಬ ಯೋಚನೆ ಈ ಕಲಾಕೇಂದ್ರಕ್ಕೆ ಇಂಟರ್ವ್ಯೂಗೆ ಹೋಗಲು ಬಹುಮುಖ್ಯ ಕಾರಣವಾಯಿತು. ಕೃಷ್ಣಯಾಜಿ ಬಳ್ಕೂರು ಅವರ ಅಭಿಮಾನಿಯಾಗಿದ್ದ ಈ ಹುಡುಗನಿಗೆ ಅವರಂತೆ ತಾನೂ ವೇಷ ಮಾಡಬೇಕೆಂಬ ಆಸೆ ತಕ್ಷಣಕ್ಕೆ ಹುಟ್ಟಿಕೊಂಡಿತ್ತು.
ಹೊಸ ಕನಸನ್ನು ತನ್ನ ಕಂಕಳಲ್ಲಿಟ್ಟುಕೊಂಡು ಬಂದ ತನಗೆ ಯಕ್ಷಗಾನದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಭಯವೂ ಇತ್ತು. ಕಲಾಕೇಂದ್ರಕ್ಕೆ ಬಂದ 90 ಕ್ಕೂ ಹೆಚ್ಚು ಆಕಾಂಕ್ಷಿಗಳಲ್ಲಿ ಆಯ್ಕೆಯಾದವರು ಕೇವಲ ಹದಿನೈದು ಮಂದಿ. ಈ ಹದಿನೈದರ ಪಟ್ಟಿಯಲ್ಲಿ ಈ ಬಾಲಕನ ಹೆಸರು ಇರಲಿಲ್ಲ. ಹುಡುಗ ತನ್ನ ತಳಮಳವನ್ನು ಗೆಳೆಯ ಗೋಪಾಲ ಅಂಬಿಗನಲ್ಲಿ ಹೇಳಿಕೊಂಡಿದ್ದ. ಆತ ತಡಮಾಡದೆ ಶಂಭು ಹೆಗಡೆಯವರಲ್ಲಿ ತನ್ನ ಮಿತ್ರನ ಕಷ್ಟವನ್ನು ತಿಳಿಸಿ, ಕ್ಲಾಸಿಗೆ ಸೇರಿಸಿಕೊಳ್ಳಲು ವಿನಂತಿಸಿಕೊಂಡಿದ್ದ. ಆಯ್ಕೆಯಾದ ಹದಿನೈದು ವಿದ್ಯಾರ್ಥಿಗಳಲ್ಲಿ ಇಬ್ಬರು ಬಿಟ್ಟು ಹೋದಾಗ ಈ ಬಾಲಕನನ್ನು ಕಲಾಕೇಂದ್ರ ಕರೆಯಿತು. ಆ ಬಳಿಕ ಯಕ್ಷರಂಗದಲ್ಲಿ ಪ್ರೇಕ್ಷಕರ ಕಣ್ಮಣಿಯಾಗಿ ಬೆಳಗುತ್ತಿರುವ, ಇವತ್ತು ತನ್ನದೇ ಅಭಿಮಾನಿಗಳನ್ನೂ ಹೊಂದಿರುವ ಕಲಾವಿದರ ಬದುಕಿನ ಕಥೆಯಿದು. ಇಷ್ಟಕ್ಕೂ ಇವರು ಬೇರಾರೂ ಅಲ್ಲ, ಮಂಕಿ ಈಶ್ವರ್ ನಾಯ್ಕ.

ಮಂಕಿ ಈಶ್ವರ್ ನಾಯ್ಕ್ 1977ರಲ್ಲಿ ಜನಿಸಿದರು. ತಂದೆ ಹನುಮಂತ ನಾಯ್ಕ್, ತಾಯಿ ಲಕ್ಷ್ಮೀ. ಅರ್ಧಾಂಗಿ ಚಂದ್ರಕಲಾ. ಮೇಘರಾಜ ಮತ್ತು ಮಾನಸಾ ಮಕ್ಕಳು. ಈಶ್ವರ ನಾಯ್ಕರ ಬಾಲ್ಯವೆಲ್ಲಾ ಕಥೆಗಳೇ. ಸುಖವ ಕೊಡುವ ನಾಳೆಗಾಗಿ ಕಾಯುತ್ತಿರುವ ಕಣ್ಣುಗಳು ಇವತ್ತಿಗೂ ಹಾಗೇ ಇವೆ. ಛಲ ಬಿಡದ ಕಾಯಕ, ಕಾಯಕದಲ್ಲಿನ ಒಲವು, ತನ್ಮಯತೆ. 1994ರಲ್ಲಿ ಶ್ರೀಮಯ ಯಕ್ಷಗಾನ ಕಲಾಕೇಂದ್ರಕ್ಕೆ ಸೇರಿ ಕಲೆಯನ್ನು ಒಲಿಸಿಕೊಂಡರು. ಗುರುಗಳಾಗಿದ್ದ ಹೆರಂಜಾಲು ವೆಂಕಟರಮಣ ಗಾಣಿಗ, ಹೆರಂಜಾಲ ಗೋಪಾಲ ಗಾಣಿಗ, ವಿದ್ವಾನ್ ಗಣಪತಿ ಭಟ್, ಎ.ಪಿ. ಪಾಠಕ್, ದೇವಿದಾಸ ಬಾರ್ಕೂರು ಜತೆಗೆ ಅವಕಾಶ ನೀಡಿದ ಶಂಭು ಹೆಗಡೆಯವರನ್ನೂ ಸದಾ ಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ದ ಶಿವಾನಂದ ಹೆಗಡೆಯವರನ್ನೂ ಕಾರಣರಾದ ಮಿತ್ರ ಗೋಪಾಲ ಅಂಬಿಗರನ್ನೂ ನೆನಸಿಕೊಳ್ಳುವಾಗ ಈಶ್ವರ ನಾಯ್ಕರ ಕಣ್ಣಲ್ಲಿ ಹೊಳಪು ಮತ್ತು ಧನ್ಯತೆಯ ಬೆಳಕು. ಗುಂಡಬಾಳ, ಬಗ್ವಾಡಿ, ಅಮೃತೇಶ್ವರಿ, ಪೆರ್ಡೂರು, ನೀಲಾವರ ತಿರುಗಾಟ ನಡೆಸಿ, ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿ ಮುಖ್ಯ ಪಾತ್ರಗಳಲ್ಲಿ ಜನಮನ ತಣಿಸುತ್ತ ಮೆಚ್ಚುಗೆ ಗಳಿಸುತ್ತಿದ್ದಾರೆ. ಕೊಂಡದಕುಳಿ ರಾಮ-ಲಕ್ಷ್ಮಣ ಹೆಗಡೆ ಪ್ರಶಸ್ತಿ, ಹೈದರಾಬಾದ್ ಕರಾವಳಿ ಮೈತ್ರಿ ಪ್ರಶಸ್ತಿ, ನಟಶೇಖರ ಪ್ರಶಸ್ತಿ, ಮಂಕಿ ಶಾಲಾಶಿಕ್ಷಕವೃಂದದಿಂದ ಸಂದೀಪ ಪ್ರಶಸ್ತಿ, ಡಾ|| ಶಾಂತಾರಾಮ ಪ್ರಶಸ್ತಿ, ಕಾರವಾರ ಪತ್ರಕರ್ತ ಸಂಘದ ಪ್ರಶಸ್ತಿ ಮೊದಲಾದವು ಇವರ ಕಲಾಶಕ್ತಿಯ ಪ್ರತಿಬಿಂಬಗಳು.
ಇವರು ಓದುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ರಂಗದಲ್ಲಿ ಇವರ ವಾಕ್ಚಾತುರ್ಯವೇ ಇದಕ್ಕೆ ಸಾಕ್ಷಿ. ಇವರ ಹಿತವಾದ ಮಾತುಗಳು, ಪಾತ್ರಚಿತ್ರಣ, ಅಭಿನಯ, ತಮ್ಮದೇ ಆದ ಅಂದದ ಶೈಲಿಯ ನಯವಾದ ನಾಟ್ಯ, ಚಂದದ ವೇಷ ಎಲ್ಲವೂ ಯಕ್ಷಪ್ರೇಮಿಯನ್ನು ಸೋಲಿಸುತ್ತವೆ. ಪಾತ್ರಗಳಿಗೆ ಜೀವ ತುಂಬುವಲ್ಲಿ ನಿಷ್ಣಾತರು.
ರಂಗದಲ್ಲಿ ಕಲಾವಿದ ರಾಜನಾಗಿ, ಜಗವನ್ನೇ ಗೆಲ್ಲುವ ವೀರನಾಗಿ, ಕುಬೇರನಾಗಿ ಮೆರೆಯುತ್ತಾನೆ. ವೇಷ ಕಳಚಿದ ಬಳಿಕ ಬದುಕಿನ ಸಿಕ್ಕುಗಳಲ್ಲಿ ಬಸವಳಿಯುತ್ತಾನೆ. ಅನೇಕ ಕಲಾವಿದರ ಬದುಕು ಹೀಗೇ ಇರುತ್ತದೆ. ಹಲವು ಕಷ್ಟಗಳ ನಡುವೆಯೇ ಹೊಸಮನೆಯ ಹೊಸಿಲು ತುಳಿಯಲು ಸಿದ್ಧತೆ ನಡೆಸಿದ್ದಾರೆ. ಈಶ್ವರ ನಾಯ್ಕರ ಕೀರ್ತಿ ಇನ್ನೂ ಉತ್ತುಂಗಕ್ಕೇರಲಿ. ಅವರ ಬದುಕು ಬಂಗಾರವಾಗಲಿ.

ಮತ್ತಷ್ಟು ಸುದ್ದಿಗಳು

vertical

Latest News

ಪಠಾಣ್ ಸಿನಿಮಾ ಗೆಲುವಿನ ಹಿಂದೆ ಐಎಸ್ಐ ಕೈವಾಡವಿದೆ : ಕಂಗನಾ ರಣಾವತ್

Newsics. Com ಮುಂಬೈ: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ರಿಲೀಸ್ ಆದ...

ಪೇಪರ್ ಡ್ರೆಸ್ ಧರಿಸಿ ಸಖತ್ ಹಾಟ್ ಅವತಾರದಲ್ಲಿ ನಿವೇದಿತಾ ಗೌಡ

Newsics.Com ಬೆಂಗಳೂರು: ನಿವೇದಿತಾ ಗೌಡ ಹೊಸ ಅವತಾರದಲ್ಲಿ ಬಂದಿದ್ದಾರೆ. ಈ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಕಪ್ಪು ಬಣ್ಣದ...

100ನೇ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಲೊಗೊ, ಜಿಂಗಲ್ ಆಹ್ವಾ-ಒಟ್ಟು 1.11 ಲಕ್ಷ ಬಹುಮಾನ

Newsics.Com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ನ 100ನೇ ಆವೃತ್ತಿಗಾಗಿ ವಿಶೇಷ ವಿನ್ಯಾಸದ ಲೊಗೊ ಹಾಗೂ ಜಿಂಗಲ್ಗಳನ್ನು...
- Advertisement -
error: Content is protected !!