Sunday, December 5, 2021

ಕೊರೋನಾ ಎಫೆಕ್ಟ್, ಹೊರಬಂತು ಅಜ್ಜನ ತಬಲಾ!

Follow Us

ಅಜ್ಜನಿಗೆ, ಮೊಮ್ಮಕ್ಕಳಿಗೆ ಎಂದೂ ಇಲ್ಲದ ಬಾಂಧವ್ಯವನ್ನು ತಬಲಾ ಬೆಸೆದಿದೆ. ‘ಅಜ್ಜನ ತಬಲಾ’ ಎಂದು ಹೀಯಾಳಿಸುತ್ತಿದ್ದ ಮೊಮ್ಮಕ್ಕಳೀಗ ದಿನದ ಕೆಲ ಸಮಯವಾದರೂ ಅಜ್ಜನೆದುರು ಕುಳಿತು ವಿದ್ಯಾರ್ಥಿಗಳಾಗಿದ್ದಾರೆ. ಹೀಗಾದರೂ ಕೊರೋನಾ ಲಾಕ್ ಡೌನ್ ಮನೆಯ ಹಿರಿಯರ ವಿದ್ಯೆಗೆ ಬೆಲೆ ನೀಡುವುದನ್ನು ಕಲಿಸಿದೆ.
ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com

ಗ ಹರೆಯದಲ್ಲಿರುವ ಮೊಮ್ಮಕ್ಕಳು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾಗಿದ್ದಾಗ ಅಜ್ಜ ತಬಲಾ ಕಲಿಸಲು ಯತ್ನಿಸಿದ್ದರು. ಮೊದಲೇ ಶಾಲೆಯ ಹೊರೆ, ಆಟೋಟಗಳು, ಜತೆಗೆ ಅಮ್ಮನ ನಿರಾಸಕ್ತಿಯಿಂದ ಮಕ್ಕಳು ಆ ಕರೆಗೆ ಓಗೊಟ್ಟಿರಲಿಲ್ಲ. ವರ್ಷಗಳ ಕಾಲ ಪ್ರಯತ್ನಿಸಿದರೂ ಮೊಮ್ಮಕ್ಕಳು ತಮ್ಮ ಜತೆಗೆ ಕೂರದಿರುವುದನ್ನು ಕಂಡ ಅಜ್ಜ ಕೊನೆಗೆ ಆ ಪ್ರಯತ್ನವನ್ನೇ ಕೈಬಿಟ್ಟು ತಮ್ಮ ಪಾಡಿಗೆ ಲಹರಿ ಬಂದಾಗ ತಬಲಾ ಬಾರಿಸುತ್ತ ದೇವರ ನಾಮ ಹೇಳಿಕೊಳ್ಳುತ್ತಿದ್ದರು. ಅದು ಸೊಸೆಯ ಟೀಕೆಗೂ ಕಾರಣವಾಗಿತ್ತು ಎನ್ನುವುದು ಬೇರೆ ಮಾತು.
ದೊಡ್ಡವರಾಗುತ್ತಿರುವಂತೆ ಇಬ್ಬರೂ ಮೊಮ್ಮಕ್ಕಳು “ಅಜ್ಜನ ತಬಲಾ’ ಎಂದು ಲೇವಡಿ ಬೇರೆ ಮಾಡಲು ಆರಂಭಿಸಿದ್ದರಿಂದ ಅವರ ಎದುರು ತಬಲಾ ಬಾರಿಸುವುದನ್ನೇ ಬಿಟ್ಟರು. ಈಗ ಕೊರೋನಾ ಲಾಕ್ ಡೌನ್ ಇರುವುದರಿಂದ ಅನೇಕ ದಿನಗಳಿಂದ ಮೊಮ್ಮಕ್ಕಳು ಮನೆಯಲ್ಲೇ ಇದ್ದಾರೆ, ಹೀಗಾಗಿ ಅಜ್ಜ ತಮ್ಮ ತಬಲಾವನ್ನು ಹೊರತೆಗೆದಿರಲಿಲ್ಲ. ಯೂಟ್ಯೂಬ್ ನಲ್ಲಿ ತಮ್ಮ ಕ್ಲಾಸ್ ಮೇಟ್ ಒಬ್ಬನ ತಬಲಾ ನೋಡಿದ ದಿನವೇ ದ್ವಿತೀಯ ಪಿಯುಸಿ ಮೊಮ್ಮಗ ಅಜ್ಜನ ಬಳಿ ಬಂದು ತಬಲಾ ತೆಗೆಯುವಂತೆ ಕೇಳಿದ್ದ. ಅಚ್ಚರಿಯಾದರೂ ಸುಮ್ಮನೆ ತೆಗೆದು ಹೊರಗಿರಿಸಿದ್ದರು. ಅವನೇ ದುಂಬಾಲು ಬಿದ್ದು ಕಲಿಸಿಕೊಡು ಎಂದ. ಅಂದಿನಿಂದ ಇಬ್ಬರೂ ಮೊಮ್ಮಕ್ಕಳೂ ಅಜ್ಜನ ಬಳಿ ದಿನಕ್ಕೆ ಒಂದು ತಾಸಿಗೆ ಕಡಿಮೆ ಇಲ್ಲದಂತೆ ತಬಲಾ ಹೇಳಿಸಿಕೊಳ್ಳುತ್ತಿದ್ದಾರೆ. ಸೊಸೆ ಮೊದಲು ಟೀಕಿಸಲು ಬಂದರೂ ಮಕ್ಕಳು ಮೊಬೈಲ್ ಬಿಟ್ಟಿರುವುದನ್ನು ಕಂಡು ಸುಮ್ಮನಾಗಿದ್ದಾಳೆ. ಹೀಗಾಗಿ, ಪ್ರತಿದಿನ ಸಂಜೆ ಮನೆಯಲ್ಲಿ ಈಗ ತಬಲಾ ವೈಭವ. ಅಜ್ಜನಿಗೆ ತಬಲಾ ಕುರಿತಾಗಿ ಇರುವ ಜ್ಞಾನವನ್ನು ಕಂಡು ಮೊಮ್ಮಕ್ಕಳಿಗೆ ಅಚ್ಚರಿಯಾಗುತ್ತಿದೆ. ಅಜ್ಜ ಚೆನ್ನಾಗಿ ಹೇಳಿಕೊಡುತ್ತಲೂ ಇರುವುದರಿಂದ ಅವರು ಚುರುಕಾಗಿ ಕಲಿಯುತ್ತಿದ್ದಾರೆ. ಮನೆಯಲ್ಲೇ ಇಷ್ಟೆಲ್ಲ ತಿಳಿವಳಿಕೆ ಇರುವ ಅಜ್ಜನಿದ್ದರೂ ಇಷ್ಟು ದಿನ ಅವರ ವಿದ್ಯೆಯನ್ನು ಕಾಲಕಸವಾಗಿ ಕಂಡಿದ್ದಕ್ಕೆ ಅವರಿಗೆ ಪಶ್ಚಾತ್ತಾಪವಿದೆ. ಈಗ ತಬಲಾ ಕಲಿಯುತ್ತಿರುವ ವಿಡಿಯೋ, ಫೋಟೊಗಳನ್ನು ಸ್ಟೇಟಸ್ ಗೆ ಹಾಕಿಕೊಂಡು ಹೆಮ್ಮೆ ಪಡುತ್ತಿದ್ದಾರೆ. ಮನೆಯಲ್ಲೇ ನಮಗೆ ಮಾಸ್ಟರ್ ಇದ್ದಾರೆ ಎಂದು ಅಜ್ಜನನ್ನೂ ಸೇರಿಸಿಕೊಂಡು ಫೋಟೊ ಹಾಕಿ ಎಲ್ಲರಿಗೂ ಪರಿಚಯಿಸುತ್ತಿದ್ದಾರೆ.
ಹೀಗಾಗಿ, ಸಂಜೆಯ ಸಮಯದಲ್ಲಿ ಮನೆಯಲ್ಲಿ ತಬಲಾ ನಿನಾದ. ಅಜ್ಜನಿಗೆ ಹಳೆಯ ಕಾಲದ ಉತ್ತಮ ಕಲಾವಿದರೆಲ್ಲರ ಬಗ್ಗೆ ತಿಳಿದಿದೆ. ಅವರ ಕೆಲವು ಯೂಟ್ಯೂಬ್ ವಿಡಿಯೋಗಳನ್ನು ಅಜ್ಜನಿಗೆ ತೋರಿಸುತ್ತ ಮೊಮ್ಮಕ್ಕಳು ಅವರನ್ನು ಖುಷಿಪಡಿಸುತ್ತಿದ್ದಾರೆ. ಮೊಮ್ಮಕ್ಕಳು ಎಷ್ಟು ಸ್ನೇಹಪರವಾಗಿದ್ದಾರೆಂದು ಅಜ್ಜನಿಗೂ ಅರಿವಿಗೆ ಬರುತ್ತಲಿದೆ. ಪರಿಣಾಮ, ಅಜ್ಜನಿಂದ ಮೊಮ್ಮಕ್ಕಳಿಗೆ, ಮೊಮ್ಮಕ್ಕಳಿಂದ ಅಜ್ಜನ ಮೇಲಾಗುತ್ತಿರುವ ಸಿಡಿಮಿಡಿಗಳು ಇಲ್ಲವೇ ಇಲ್ಲ ಎಂದರೆ ತಪ್ಪಿಲ್ಲ. ಹಳೆಯ ಬೇರು, ಹೊಸ ಚಿಗುರು ತಬಲಾದಿಂದ ಒಂದಾಗಿವೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!