ಸಾರಯುಕ್ತ ಕಾವ್ಯ ಸೃಜಿಸಿದ ನಿಸಾರ್

ಡಾ. ನಿಸಾರರು ಸರ್ಕಾರಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದ ಪ್ರಾಧ್ಯಾಪಕರಾಗಿ ಕಲ್ಲು-ಮಣ್ಣು ಕುರಿತು ಪಾಠ ಮಾಡುತ್ತಿದ್ದರೂ, ಅವರ ಅಂತರಂಗದಲ್ಲಿ ಕಾವ್ಯ ಸದಾ ಜಿನುಗುತ್ತಿತ್ತು. ಮಣ್ಢಿನಲಿ, ನೀರಿನಲಿ ಬದುಕನ್ನೇ ನೆಟ್ಟವರು ನಿಸಾರರು. ಅವರ ವಸ್ತ್ರಸಂಹಿತೆಯೂ ಭಿನ್ನ. ಬಿರು ಬೇಸಗೆಯಲ್ಲೂ ಕೋಟು-ಟೈ-ಬೂಟು ತೊಟ್ಟೇ ಅವರು ಹೊರಗೆ ಇಣುಕುತ್ತಿದ್ದುದು. ಎಲ್ಲರಂಥವರಲ್ಲ ನಿಸಾರರು.
===
♦ ಕೆ. ರಾಜಕುಮಾರ್
[email protected]
[email protected]

ಡಾ.ನಿಸಾರ್ ಅಹಮದ್ ಅವರು ಕನ್ನಡದಲ್ಲಿ ಸಾರಯುಕ್ತ ಕಾವ್ಯ ಸೃಜಿಸಿದವರು‌. ಗದ್ಯವನ್ನು ಹುಲುಸಾಗಿ ಸೃಜಿಸಿದರೂ ಜನಮನದಲ್ಲಿ ಕವಿಯೆಂದೇ ನೆಲೆಗೊಂಡವರು. ಸಂಜೆ ಮಳೆ ಧೋ ಎಂದಾಗಲೆಲ್ಲ ಅವರ ‘ಸಂಜೆ ಐದರ ಮಳೆ’ ನೆನಪಾಗುತ್ತಿತ್ತು. ಸಂಕಟ-ಸೂತಕದ ವೇಳೆ ಮನಸ್ಸು ಸಿಟಿ ಮಾರುಕಟ್ಟೆಯತೆ ಆದಾಗ, ಅದು ನಿರಾಳವಾಗಿ, ನಿಸಾರರ ‘ಮನಸು ಗಾಂಧಿಬಜಾ಼ರ್’ ಕವನದಂತಾಗಬಾರದೆ ಎಂದೆನಿಸುತ್ತಿತ್ತು. ಸರ್ಕಾರಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರದ ಪ್ರಾಧ್ಯಾಪಕರಾಗಿ ಕಲ್ಲು-ಮಣ್ಣು ಕುರಿತು ಪಾಠ ಮಾಡುತ್ತಿದ್ದರೂ, ಅವರ ಅಂತರಂಗದಲ್ಲಿ ಕಾವ್ಯ ಸದಾ ಜಿನುಗುತ್ತಿತ್ತು. ಮಣ್ಢಿನಲಿ, ನೀರಿನಲಿ ಬದುಕನ್ನೇ ನೆಟ್ಟವರು ನಿಸಾರರು.
ಅವರ ವಸ್ತ್ರಸಂಹಿತೆಯೂ ಭಿನ್ನ. ಬಿರು ಬೇಸಗೆಯಲ್ಲೂ ಕೋಟು-ಟೈ-ಬೂಟು ತೊಟ್ಟೇ ಅವರು ಹೊರಗೆ ಇಣುಕುತ್ತಿದ್ದುದು. ಎಲ್ಲರಂಥವರಲ್ಲ ನಿಸಾರರು. ತಮ್ಮ ಬರಹದಲ್ಲಿ ಮುಸ್ಲಿಂ ಸಂವೇದನೆಯನ್ನು ಕಂಡರಿಸಿದರೂ, ಅವರು ಈ ನೆಲದ ಪ್ರಧಾನ ಧಾರೆಯಲ್ಲಿದ್ದವರು. ಎಂದೂ ಹುಸಿ ಬುದ್ಧಿಜೀವಿಯಾಗಲಿಲ್ಲ. ಯಾವ ಪಂಥ-ಪಂಗಡ ಎಂದು ಪ್ಲಕಾರ್ಡು (ಘೋಷಣಾಫಲಕ) ಹಿಡಿದು ಹೊರಟವರಲ್ಲ. ಗೋಕಾಕ್ ಚಳವಳಿಯಲ್ಲಿ ಮುಖ ತೋರಿಸಿದ್ದನ್ನು ಬಿಟ್ಟರೆ, ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರಲ್ಲ. ಬಂದರೂ ನಡುವೆಯೇ ಅಂತರ್ಧಾನ. ಸದಾ ಸಾಹಿತ್ಯವನ್ನೇ ಧೇನಿಸಿದವರು. ಅವರ ಅಭಿಮಾನಿಗಳಿಗೂ ವೇದಿಕೆಯ ಮೇಲಿಂದಲೇ ಮಹತ್ತ್ವವಾದದ್ದನ್ನು ಸೃಜಿಸಿ ಎಂದು ದಾಕ್ಷಿಣ್ಯವಿಲ್ಲದೆ ಹೇಳುತ್ತಿದ್ದ ಗಟ್ಟಿಗ. ನಾಡೋಜದಿಂದ ಹಿಡಿದು ಪದ್ಮಶ್ರೀವರೆಗೆ ಎಲ್ಲವೂ ಅವರಿಗೆ ಸಂದಾಯವಾದವು. ನಿಸಾರರು ಈ ನಾಡಿನ ರಾಷ್ಟ್ರಕವಿಯಾಗಬೇಕೆಂಬ ಹಪಹಪಿಕೆ ಅವರ ಅಭಿಮಾನಿಗಳಿಗಿತ್ತು. ಆ ಒಂದು ಅದೃಷ್ಟ ಅವರ ಬೆನ್ನಿಗಿರಲಿಲ್ಲ. ಹದಿನಾಲ್ಕು ವರ್ಷಗಳ ಹಿಂದೆಯೇ ಅವರು ಶಿವಮೊಗ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಉತ್ತಂಗಿ ಚೆನ್ನಪ್ಪನವರ ನಂತರ ಧಾರ್ಮಿಕ ಅಲ್ಪಸಂಖ್ಯಾತ ವರ್ಗದವರೊಬ್ಬರು ಸಮ್ಮೇಳನದ ಸರ್ವಾಧ್ಯಕ್ಷರಾದದ್ದು ಅದೇ ಮೊದಲು. ಅವರು ಏನೇ ಬರೆದರೂ, ಜನರ ಮನದಲ್ಲಿ ಅವರು ಗೂಡು ಕಟ್ಟಿಕೊಂಡಿದ್ದು ಮಾತ್ರ ಅವರ ನಿತ್ಯೋತ್ಸವ ಕವನದಿಂದಾಗಿ‌. ರೇವತಿ ರಾಗದಲ್ಲಿನ ಆ ಗೀತೆ ಖಂಡಾಂತರಕ್ಕೂ ಹಾರಿ ಜನಪ್ರಿಯವಾಯಿತು. ಅವರೇ ಧೈರ್ಯಮಾಡಿ ನಿರ್ಮಿಸಿದ ನಿತ್ಯೋತ್ಸವ; ಕನ್ನಡ ಭಾವಗೀತೆಗಳ ಮೊದಲ ಧ್ವನಿಸುರುಳಿ 1978ರಲ್ಲಿ ಅನಾವರಣಗೊಂಡಿತು. ಅಂತಹ ಪ್ರಯತ್ನ ಇಡೀ ಭಾರತದಲ್ಲಿ ಎಲ್ಲೂ ಆಗಿರಲಿಲ್ಲ. ‘ಲಲಿತ ಸಂಗೀತ’ವಾಗಿದ್ದ ಪ್ರಕಾರವೊಂದು ‘ಸುಗಮ ಸಂಗೀತ’ ಎಂದೆನಿಸಿಕೊಳ್ಳಲು ನಿಸಾರ್ ಅಹಮದ್ ಮತ್ತು ಮೈಸೂರು ಅನಂತಸ್ವಾಮಿಯವರ ಕೊಡುಗೆ ದೊಡ್ಡದಿದೆ‌.

ನವೋಲ್ಲಾಸ ಮತ್ತು ನಿಸಾರ್:
ನಿಸಾರರ ಶ್ರೇಷ್ಠ ಭಾವಗೀತೆಗಳ ಎರಡು ಧ್ವನಿಸುರುಳಿಗಳು ಹೊರಬಂದವು. ನವೋಲ್ಲಾಸ ಭಾಗ ಒಂದು, ಎರಡು. ಸಂಗೀತ ಮಾಂತ್ರಿಕ ಪದ್ಮಚರಣ್ ಅವರ ಸ್ವರಸಂಯೋಜನೆ. ಭಾವಗೀತೆಗಳ ವ್ಯಾಖ್ಯೆಯನ್ನು ಖಚಿತಗೊಳಿಸಿದ್ದಷ್ಟೇ ಅಲ್ಲದೆ ಅಲ್ಲಿನ ಹಾಡುಗಳೆಲ್ಲ ಮಾಧುರ್ಯದ ಎರಕ ಹೊತ್ತಂತಿವೆ. ಬಣ್ಣಿಸಲಸದಳ; ಕೇಳಿಯೇ ತಣಿಯಬೇಕು. ನಿರುಮ್ಮಳವಾಗುವುದಂತೂ ಖಂಡಿತ. ಅದೊಂದು ಮಾದರಿ. ಅದೊಂದು ಮಾರ್ಗ ಪ್ರವರ್ತಕ.

ಸುನೀಲ ವಿಸ್ತರ ಜಗತ್ತು:
ನಿಸಾರರೊಂದಿಗೆ ಹತ್ತಿರ, ಹತ್ತಿರ ನಾಲ್ಕು ದಶಕಗಳ ನಂಟು, ಸ್ನೇಹ. ಅದರ ಆರಂಭ ಗೋಕಾಕ್ ಚಳವಳಿಯ ಸಂದರ್ಭದ್ದು. ಅವರ ಸುರುಳಿ ಬಂತೆಂದರೆ ಸಾಕು, ಫೋನಿಸಿ ಹಂಚಿಕೊಳ್ಳುತ್ತಿದ್ದರು. ಅವರ ಸನಿಹವಾಣಿ ಕರೆಗಳು ಬಂತೆಂದರೆ ಅವು ಎಂದೂ ದೀರ್ಘ-ಸುದೀರ್ಘ. ಅವರ 65ನೆಯ ವಯಸ್ಸಿನಲ್ಲೊಂದು ಭರ್ಜರಿ ಅಭಿನಂದನಾ ಸಮಾರಂಭ. ಭಾರತೀಯ ವಿದ್ಯಾಭವನದಲ್ಲಿ. ಆಗ ತಮ್ಮ ಭಾವಚಿತ್ರ ಪ್ರಕಟಿಸಬೇಕೆಂಬ ಆಗ್ರಹ ನನ್ನ ಮೇಲೆ. ಪ್ರಕಟಿಸಿದೆ. ಅವರು ತಮ್ಮ 30ರ ಹರೆಯದಲ್ಲಿದ್ದಾಗಿನ ಪಟ ಕಳುಹಿಸಿದ್ದರು. ಈಗಿನದು ಬೇಡ, ಮೂಳೆ ಚಕ್ಕಳದಂತಾಗಿರುವೆ, ಹಳೆಯದನ್ನೇ ಪ್ರಕಟಿಸಿ ಎಂದಿದ್ದರು. ನಿಯಮದ ಪ್ರಕಾರ ಇತ್ತೀಚಿನದನ್ನೇ ಪ್ರಕಟಿಸಬೇಕು ಎಂದಿದ್ದೆ. ಅಂತೆಯೇ ಮಾಡಿದ್ದೆ. ಅವರದು ಮಗು ಸ್ವಭಾವ. ವಿಕ್ಷಿಪ್ತತೆಯೂ ಇತ್ತು. ಅವರು ಕನ್ನಡಿಗರ ಅಪಾರವಾದ ಪ್ರೀತಿಯನ್ನು ದೋಚಿಕೊಂಡು ಹೋಗಿದ್ದಾರೆ. ಪ್ರೀತಿಯನ್ನು ಉಂಡು ಹೋದವರು ಸರಿ. ಕೊಟ್ಟೂ ಹೋಗಿದ್ದಾರೆ. ಹೋಗುವಾಗ ತಮ್ಮ ಅಮೂಲ್ಯವಾದ ಕೃತಿಗಳನ್ನು ಕನ್ನಡಿಗರ ಮಡಿಲಿಗೆ ಹಾಕಿ ಹೋಗಿದ್ದಾರೆ. ಅವರು ಕೋಮು ಸಾಮರಸ್ಯಕ್ಕೆ ಶ್ರೇಷ್ಠ ಉದಾಹರಣೆ. ಎಂದೂ ಸೀಮಿತ ಚೌಕಟ್ಟನ್ನು ಹಾಕಿಕೊಂಡವರಲ್ಲ. ಅವರದು ಸುನೀಲ ವಿಸ್ತರ ಜಗತ್ತು. ನಿಸಾರ್ ಸಾರ್ ಗಡಿಬಿಡಿಯ ವ್ಯಕ್ತಿ . ಆದರೆ ಕೋಮು, ಭಾಷೆ, ಜಾತಿಗಳ ಗಡಿಯನ್ನು ಮೀರಿ ಬೆಳೆದ ದಿಗ್ಗಜ. ಅವರಿಗೊಂದು ವಿದಾಯ ಹೇಳೋಣ. “ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳನ್ನು ಅರ್ಪಿಸಿಲ್ಲಿ” ಎಂಬ ಕುವೆಂಪು ಅವರ ಸಾಲುಗಳನ್ನು ಉದ್ಧರಿಸಿ ಅವರನ್ನು ಬೀಳ್ಕೊಡೋಣ.

LEAVE A REPLY

Please enter your comment!
Please enter your name here

Read More

ಬೆಂಗಳೂರು ಗಲಭೆ ಕೇಸ್; ಆರೋಪಿ ನವೀನ್’ಗೆ ಜಾಮೀನು

newsics.comಬೆಂಗಳೂರು: ವಿವಾದಾತ್ಮಕ ಪೋಸ್ಟ್ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್'ಗೆ ರಾಜ್ಯ ಹೈಕೋರ್ಟ್ ​ಜಾಮೀನು...

ರಾಜ್ಯದಲ್ಲಿ UG, PG ಕಾಲೇಜು ಆರಂಭ; ನಾಳೆ ಅಂತಿಮ ನಿರ್ಧಾರ

newsics.comಬೆಂಗಳೂರು: ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಕಾಲೇಜು ಆರಂಭದ ಬಗ್ಗೆ ನಾಳೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕಾಲೇಜು ಆರಂಭ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.ಯುಜಿ ಹಾಗೂ...

ಕನ್ನಡ ಪ್ರಬಂಧ, ಕವನ ಸ್ಪರ್ಧೆ

newsics.com ಮಂಗಳೂರು: ಕರ್ನಾಟಕ ಪರ್ತಕರ್ತರ ಸಂಘದ ಪುತ್ತೂರು ತಾಲೂಕು ಘಟಕ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಬಂಧ, ಕವನ ಸ್ಪರ್ಧೆ ಆಯೋಜಿಸಿದೆ. ಪುತ್ತೂರು ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ 'ಆಂಗ್ಲ ಭಾಷೆಯ ಕಪಿಮುಷ್ಠಿಯಲ್ಲಿ ಕನ್ನಡದ ಉಸಿರು' ಹಾಗೂ ಸಾರ್ವಜನಿಕರಿಗೆ'...

Recent

ಬೆಂಗಳೂರು ಗಲಭೆ ಕೇಸ್; ಆರೋಪಿ ನವೀನ್’ಗೆ ಜಾಮೀನು

newsics.comಬೆಂಗಳೂರು: ವಿವಾದಾತ್ಮಕ ಪೋಸ್ಟ್ ಮೂಲಕ ಡಿಜೆ ಹಳ್ಳಿ ಗಲಭೆಗೆ ಪ್ರೇರಣೆ ನೀಡಿದ್ದ ಆರೋಪದ ಮೇಲೆ ಜೈಲು ಸೇರಿದ್ದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಳಿಯ ನವೀನ್'ಗೆ ರಾಜ್ಯ ಹೈಕೋರ್ಟ್ ​ಜಾಮೀನು...

ರಾಜ್ಯದಲ್ಲಿ UG, PG ಕಾಲೇಜು ಆರಂಭ; ನಾಳೆ ಅಂತಿಮ ನಿರ್ಧಾರ

newsics.comಬೆಂಗಳೂರು: ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಕಾಲೇಜು ಆರಂಭದ ಬಗ್ಗೆ ನಾಳೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕಾಲೇಜು ಆರಂಭ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.ಯುಜಿ ಹಾಗೂ...

ಕನ್ನಡ ಪ್ರಬಂಧ, ಕವನ ಸ್ಪರ್ಧೆ

newsics.com ಮಂಗಳೂರು: ಕರ್ನಾಟಕ ಪರ್ತಕರ್ತರ ಸಂಘದ ಪುತ್ತೂರು ತಾಲೂಕು ಘಟಕ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರಬಂಧ, ಕವನ ಸ್ಪರ್ಧೆ ಆಯೋಜಿಸಿದೆ. ಪುತ್ತೂರು ತಾಲೂಕಿನ ಕಾಲೇಜು ವಿದ್ಯಾರ್ಥಿಗಳಿಗಾಗಿ 'ಆಂಗ್ಲ ಭಾಷೆಯ ಕಪಿಮುಷ್ಠಿಯಲ್ಲಿ ಕನ್ನಡದ ಉಸಿರು' ಹಾಗೂ ಸಾರ್ವಜನಿಕರಿಗೆ'...
error: Content is protected !!