Saturday, April 17, 2021

ತೇರೀ ಉಮ್ಮೀದ್ ತೇರಾ ಇಂತಸಾರ್ ಕರ್ ತೇಂ ಹೈ…

* ಸುಮನಾ ಲಕ್ಷ್ಮೀಶ response@134.209.153.225

ಬಾಲಿವುಡ್ ರೋಮ್ಯಾಂಟಿಕ್ ಹೀರೋ, 80ರ ದಶಕದಲ್ಲಿ ಯುವತಿಯರ ಕನಸಿಗೆ ನೀರೆರೆದಿದ್ದ ತುಂಟ ಕಂಗಳ, ನಗುಮೊಗದ ನಟ ರಿಷಿ ಕಪೂರ್. ಹಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ರಿಷಿ ಈಗ ನೆನಪು ಮಾತ್ರ.

ಬಾಲಿವುಡ್ ಸಿನಿಮಾ ಜಗತ್ತಿನ ಶೋ ಮ್ಯಾನ್ ಸಾಲದಲ್ಲಿ ಮುಳುಗಿಹೋಗಿದ್ದ ಸಮಯ. ಬಹು ನಿರೀಕ್ಷೆಯ “ಮೇರಾ ನಾಮ್ ಜೋಕರ್’ ಕಲೆಕ್ಷನ್’ನಲ್ಲಿ ಸೋತಿತ್ತು. ಮಾಡಿದ ಸಾಲ ತೀರಿಸಲು ಆ ಶೋ ಮ್ಯಾನ್ ಯುವ ಜೋಡಿಯ ಪ್ರಣಯವನ್ನು ಒಳಗೊಂಡ ಸಿನಿಮಾ ನಿರ್ಮಾಣಕ್ಕೆ ತೊಡಗಿದ್ದ. ಆತನಿಗೆ ಅಂದಿನ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಮೇಲೆ ಮನಸ್ಸು. ತನ್ನ ಹೊಸ ಸಿನಿಮಾದ ಹೀರೋ ರಾಜೇಶ್ ಖನ್ನಾ ಆಗಬೇಕೆಂಬ ಆಸೆ. ಆದರೆ, ಹಣಕಾಸು ಕೂಡಿಬರಬೇಕಲ್ಲ? ಹೀಗಾಗಿ, ಮಗನನ್ನೇ ಹಾಕಿಕೊಂಡು ಸಿನಿಮಾ ಮಾಡಿದ. ಸಿನಿಮಾ ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಮೊದಲ ನಟನೆಗೇ ಹೊಸ ಹೀರೋನನ್ನು ಫಿಲಂಫೇರ್ ಅವಾರ್ಡ್ ಮೂಲಕ ಸ್ವಾಗತಿಸಿತು. “ಹಮ್ ತುಮ್ ಇಕ್ ಕಮರೇ ಮೇ ಬಂದ್ ಹೋ’ ಹಾಡನ್ನು ಒಳಗೊಂಡ ರೋಮ್ಯಾಂಟಿಕ್ ಸಿನಿಮಾ “ಬಾಬಿ’ ಬಾಲಿವುಡ್’ನಲ್ಲಿ ಇತಿಹಾಸ ಸೃಷ್ಟಿಸಿದ್ದು ಹೀಗೆ. ಬಾಲಿವುಡ್ ಶೋ ಮ್ಯಾನ್ ರಾಜ್ ಕಪೂರ್ ತನ್ನ ಮಗನನ್ನು ಸಿನಿ ಜಗತ್ತಿಗೆ ಪರಿಚಯಿಸಿದ್ದು ಹೀಗೆ. ಏಕಾಏಕಿ ಹೀರೋ ಆಗಿ, ಸ್ಟಾರ್ ಪಟ್ಟಕ್ಕೆ ಬಂದು ಬಾಲಿವುಡ್ ಸಿನಿಪ್ರಿಯರ ಮನದಲ್ಲಿ ಖಾಯಂ ನೆಲೆ ಕಂಡುಕೊಂಡ ಆ ಯುವ ನಟ ಬೇರ್ಯಾರೂ ಅಲ್ಲ ರಿಷಿ ಕಪೂರ್. ಅಂದು ಪದಾರ್ಪಣೆ ಮಾಡಿದ ರಿಷಿ ಕಪೂರ್ ತಮ್ಮ ಕೊನೆಯ ಕಾಲದವರೆಗೂ ಬಾಲಿವುಡ್’ನಲ್ಲಿ ಮಿಂಚಿದರು. ಮೊದಲ ರೊಮ್ಯಾಂಟಿಕ್ ಚಿತ್ರದ ಮೂಲಕ ರೊಮ್ಯಾಂಟಿಕ್ ಹೀರೋ ಎನ್ನುವ ಖ್ಯಾತಿ ರಿಷಿಗೆ ಖಾಯಂ ಆಗಿ ಉಳಿಯಿತು.
ರಿಷಿ ಕಪೂರ್…ಕಪೂರ್ ಕುಟುಂಬದ ಕುಡಿ. ರಕ್ತದಲ್ಲೇ ಬಂದ ನಟನೆ. ಜತೆಗೆ ಅದೃಷ್ಟ. ಹೀಗಾಗಿ, ಇಡೀ ದೇಶದ ಯುವ ಮನಸ್ಸುಗಳಲ್ಲಿ ಮುಖ್ಯವಾಗಿ ಹೆಂಗಳೆಯರ ಮನದಲ್ಲಿ ನೆಲೆ ನಿಂತರು. ರಿಷಿಯಂತೆ ಮೀಸೆಯನ್ನು ತೆಗೆಸಿಕೊಂಡು ತಾನೂ ಬಾಲಿವುಡ್ ನಟ ಎಂಬಂತೆ ಬೀಗಿದ ಯುವಕರು ಅದೆಷ್ಟೋ ಮಂದಿ. ತನ್ನ ಮದುವೆಯಾಗುವವ ರಿಷಿಯಂತೆ ನಗುನಗುತ್ತ ಇರಬೇಕೆಂದು ಕನಸು ಕಂಡ ಯುವತಿಯರಿಗೆ ಲೆಕ್ಕವಿಲ್ಲ. ತುಂಟ ಕಂಗಳ, ನಗುಮೊಗದ ರಿಷಿಯನ್ನು ಇಷ್ಟಪಡದವರು ಯಾರೂ ಇರಲಿಲ್ಲ.  
“ತೇರೀ ಉಮ್ಮೀದ್ ತೇರಾ ಇಂತಸಾರ್ ಕರ್ ತೇ ಹೈಂ…’ ಎನ್ನುತ್ತ ದಿವ್ಯಾಭಾರತಿ ಹಿಂದೆ ಸುತ್ತುವ ದೀವಾನಾ ಆಗಿ, “ಪಾಯಲಿಯಾ ಹೋ ಹೋ ಹೋ…’ ಎನ್ನುತ್ತ ಗೆಜ್ಜೆಯ ಮೇಲೆ ಹಾಡು ಹಾಡಿ ಯುವತಿಯರ ಎದೆಯಲ್ಲಿ ಕಿರಿದಾದ ನಾದ ಮೂಡಿಸಿದ ನಾಯಕನಾಗಿ, “ಸರ್ಗಮ್’ ಚಿತ್ರದ “ಡಫಲಿವಾಲಾ’ ಆಗಿ ರಿಷಿ ಮೂಡಿಸಿದ ಭಾವೋನ್ಮಾದವನ್ನು ಆತನನ್ನು ಇಷ್ಟಪಟ್ಟವರ್ಯಾರೂ ಮರೆಯರು.
“ದರ್ದೆ ದಿಲ್, ದರ್ದೆ ಜಿಗರ್…ದಿಲ್ ನೆ ಜಗಾಯಾ ಆಪನೆ’ ಹಾಡಿನ ಯುವ ಕೋಲ್ಮಿಂಚು ರಿಷಿ. “ಚೆಹೆರಾ ಹೈ ಯಾ ಚಾಂದ್ ಖಿಲಾ ಹೈ..’ ಎಂದ ರಿಷಿ ಪ್ರತಿ ಪ್ರೇಮಿಯೂ ತನ್ನ ಪ್ರಿಯತಮೆಗೆ ನೀಡಬಹುದಾದ ಹಾಡಿನ ಉಡುಗೊರೆ ಕೊಟ್ಟರು.
ರಿಷಿಯ ಹೆಗ್ಗಳಿಕೆ ಎಂದರೆ, ಸ್ಟಾರ್ ಗಿರಿಗೆ ಅಪ್ಪಿಕೊಂಡು ನಿಲ್ಲಲಿಲ್ಲ. ಇನ್ನೋರ್ವ ಸ್ಟಾರ್ ಜತೆಗೆ ಯಾವುದೇ ಬಿಂಕವಿಲ್ಲದೆ ನಟಿಸಿ ಮಾದರಿಯಾದರು. ಹೀಗಾಗಿ, ಬೇರೆ ಬೇರೆ ಸ್ಟಾರ್ ನಟರ ಜತೆಗಿನ ಚಿತ್ರಗಳೇ ಅವರು ಹೆಚ್ಚು ಯಶಸ್ವಿಯಾದದ್ದು. ಅವುಗಳೊಂದಿಗೆ ತಮ್ಮದೇ ರೊಮ್ಯಾಂಟಿಕ್ ಸಿನಿಮಾಗಳಾದ, “ಲೈಲಾ ಮಜ್ನೂ, ಪ್ರೇಮ್ ರೋಗ್, ಸರ್ಗಮ್, ಚಾಂದಿನಿ, ದೀವಾನಾ, ದಾಮಿನಿ…’ ಮುಂತಾದವುಗಳ ಮೂಲಕ ಎಲ್ಲರ ಮನದೊಳಗೆ ಬೆಚ್ಚಗಿನ ಸ್ಥಾನ ಪಡೆದಿದ್ದಾರೆ. 1980ರಲ್ಲಿ ನೀತೂ ಸಿಂಗ್ ಜತೆ ವಿವಾಹವಾದ ರಿಷಿ ತುಂಬು ಬದುಕನ್ನು ಬಾಳಿದರು.
ಹೌದು, ರಿಷಿ…ಇನ್ನೊಮ್ಮೆ ಹುಟ್ಟಿ ಬನ್ನಿ. ನಿಮ್ಮನ್ನು ಈ ದೇಶ ಅದೇ ಪ್ರೀತಿಯಿಂದ ಬರಮಾಡಿಕೊಳ್ಳುತ್ತದೆ. ರಾಜ್ ಕಪೂರ್ ಮಗನೆಂದಲ್ಲ, ನೀತೂ ಸಿಂಗ್ ಗಂಡನೆಂದಲ್ಲ, ರಣಬೀರ್ ಕಪೂರ್ ಅಪ್ಪನೆಂದಲ್ಲ… ಕೇವಲ ರಿಷಿಯಾಗಿ ನಿಮ್ಮನ್ನು ಅಪ್ಪಿಕೊಳ್ಳುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಬೆಂಗಳೂರಿನಲ್ಲಿ 11, 404 ಕೊರೋನಾ ಸೋಂಕು, ರಾಜ್ಯದಲ್ಲಿ 17489 ಪ್ರಕರಣ, 80 ಜನರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ  ರಾಜ್ಯದಲ್ಲಿ ಹೊಸದಾಗಿ  17,489  ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ...

ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿ ಹೊರಟ ಯುವತಿಗೆ ದಂಡ

newsics.com ಲಂಡನ್: ಜನರು ಲಾಕ್ ಡೌನ್ ವೇಳೆ ಮನೆಯಲ್ಲಿ ಇರಬೇಕು ಎಂದು ಪೊಲೀಸರು ಸೂಚಿಸುತ್ತಾರೆ. ಆದರೆ ಲಂಡನ್ ನಲ್ಲಿ ಯುವತಿಯೊಬ್ಬಳು ಲಾಕ್ ಡೌನ್ ವೇಳೆ ಹಾಟ್ ಯುವಕರನ್ನು ಹುಡುಕಿಕೊಂಡು ಹೋಗಿದ್ದಳು. ಈ ಸಾಹಸಕ್ಕೆ ಹೋದ ಯುವತಿ...

41 ಅಕ್ರಮ ವಲಸಿಗರ ಜಲ ಸಮಾಧಿ

newsics.com ಟ್ಯುನಿಷಿಯಾ: ಇಟಲಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ 41 ವಲಸಿಗರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಟ್ಯುನಿಷಿಯಾ ಸಮುದ್ರ ತೀರದಲ್ಲಿ ಈ  ದುರಂತ ಸಂಭವಿಸಿದೆ. ಈ ವಲಸಿಗರಿದ್ದ ಹಡಗು ಅಪಘಾತಕ್ಕೀಡಾದ ಪರಿಣಾಮ ವಲಸೆ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ....
- Advertisement -
error: Content is protected !!