newsics.com
ಬೆಂಗಳೂರು: ‘ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಖಲಿಸಲಾಗಿರುವ ಎಂಟು ದೂರುಗಳನ್ನು ರದ್ದುಪಡಿಸಬೇಕು’ ಎಂದು ಕೋರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಸಂಬಂಧ ಶಿವಕುಮಾರ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಎಂಟು ಅರ್ಜಿಗಳು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ನಿಗದಿಯಾಗಿದ್ದವು.
ವಿಚಾರಣೆ ವೇಳೆ ಎಲ್ಲ ಅರ್ಜಿಗಳನ್ನೂ ಪರಿಶೀಲಿಸಿದ ನ್ಯಾಯಪೀಠವು, ‘ಅರ್ಜಿಗಳಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆ ಎತ್ತಿದೆ’ ಎಂಬ ಅಂಶವನ್ನು ಪರಿಗಣಿಸಿ, ‘ದಸ್ತಾವೇಜಿನ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸಿ’ ಎಂದು ಶಿವಕುಮಾರ್ ಪರ ವಕೀಲರಿಗೆ ಸೂಚಿಸಿತು. ವಿಚಾರಣೆಯನ್ನು ಒಂದು ವಾರದ ಕಾಲ ಮುಂದೂಡಿತು.