-
ನರೇಂದ್ರ ಪೈ
response@134.209.153.225
‘ಕ್ಯಾಪ್ಟನ್ ಕವಿತೆಗಳು’ ಹೆಸರೇ ಸೂಚಿಸುವಂತೆ ಜ ನಾ ತೇಜಶ್ರೀಯವರು ತಮ್ಮ ತಂದೆಯವರ ಕುರಿತು ಧೇನಿಸಿದ್ದರ ಫಲ. ಅವರು ಭೌತಿಕವಾಗಿ ಕಣ್ಮರೆಯಾದ ಬಳಿಕ ಹೊರಬರುತ್ತಿವೆಯಾದ್ದರಿಂದ ಸಹಜವಾಗಿಯೇ ಇಲ್ಲಿ ಸಾವಿನ ನೆರಳು ಕೂಡ ದಟ್ಟವಾಗಿ ಹಬ್ಬಿದೆ. ಸಾವಿನ ನೆರಳು ಎಂದರೆ ಪಂಚೇಂದ್ರಿಯಗಳಿಗೆ ಅದುವರೆಗೂ ಲಭ್ಯವಿದ್ದ ಕೆಲವೊಂದು ಅನುಭವಗಳಿಗೆ ಒಬ್ಬ ವ್ಯಕ್ತಿ ನಾಟ್ ಅವೈಲೇಬಲ್ ಆದ, ಆ ‘ಗೈರು’ ಕಾಡುವ ಸಂಕಟ. ಕಣ್ಣಿಂದ ಕಾಣಲಾರೆವು, ಮುಟ್ಟಲಾರೆವು, ನಮ್ಮ ಮಾತು ಕೇಳುವಂತೆ ಒತ್ತಾಯಿಸಲಾರೆವು, ಅವರ ಮಾತು ಕೇಳಿಸಿಕೊಳ್ಳಲಾರೆವು…
ಅವರಿಲ್ಲ, ಅವರಿಲ್ಲ ಎನಿಸುವ ಪ್ರತಿಕ್ಷಣದ ಸಂಕಟ ಅದು.
ಆದರೆ ಅದಷ್ಟೇ ನಿಜವಲ್ಲ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ನಮಗೆ ಲಭ್ಯ ಇರುವುದು ಕೂಡ ನೆನಪುಗಳಲ್ಲಿ. ಸದಾ ಕಾಲ ನಾವು ನಮ್ಮ ಪ್ರೀತಿಯ ವ್ಯಕ್ತಿಯನ್ನು ಮುಟ್ಟಬಹುದಾದ, ಕಣ್ಣಾರೆ ನೋಡಬಹುದಾದ, ಮುಖಾಮುಖಿ ಮಾತಿಗೆ ಸಿಗಬಲ್ಲ ಸ್ಥಿತಿಯಲ್ಲೇ ಇರುವುದಿಲ್ಲ. ಆದರೂ ಆಗ ನಮಗೆ ‘ಗೈರು’ ಕಾಡುವುದಿಲ್ಲ. ಏಕೆಂದರೆ, ಬಯಸಿದರೆ ಅದನ್ನು ಸಾಧ್ಯವಾಗಿಸಿಕೊಳ್ಳಬಲ್ಲೆವು ಎನ್ನುವ ಭರವಸೆ, ಎಲ್ಲೋ ಇದ್ದಾರೆ ಎನ್ನುವ ನಂಬುಗೆ ಅಲ್ಲಿ ಕೆಲಸ ಮಾಡುತ್ತಿರುತ್ತದೆ. ಸಾವು ಈ ಭರವಸೆಯನ್ನು ಅಳಿಸಿ ಹಾಕಿ ಬಿಡುತ್ತದೆ. ‘ಗೈರು’ ಸ್ಥಾಯೀ ಭಾವವಾಗುತ್ತದೆ. ಇಲ್ಲಾ ಎಂದುಕೊಂಡಾಗ ನೋವು. ಇಲ್ಲೇ ಇದ್ದಾರೆ, ನನ್ನಲ್ಲೇ ಇದ್ದಾರೆ ಎಂದುಕೊಂಡಾಗ ಒಂದಷ್ಟು ಶಾಂತಿ. ಒಂಟಿತನಕ್ಕೂ ಏಕಾಂತಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವಿದು. ನಾವೂ ಹೊರಟು ನಿಂತಿರುವುದು ಅರಿವಾದಾಗ ಒಂಥರಾ ನಿರ್ಲಿಪ್ತಿ. ಸಾವು ಕಾಡುವ ಬಗೆ ವಿಭಿನ್ನ, ವಿಶಿಷ್ಟ ಮತ್ತು ವಿಚಿತ್ರ ಕೂಡ.
ತೇಜಶ್ರೀಯವರು ‘ಹಡಗು ಹತ್ತುವ ಮುನ್ನ’ ಆಡಿರುವ ಎರಡು ಮಾತುಗಳು ಬಹಳ ಮಹತ್ವದವು. ಅವು ಹೀಗಿವೆ:
ಮೊದಲನೆಯದು:
“ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವ ಈ ಕವಿತೆಗಳ ಬಗ್ಗೆ ಮುನ್ನುಡಿಯಲ್ಲಿ ಹೇಳುವುದೇನೂ ಇಲ್ಲ. ನನ್ನನ್ನು ಆತ್ಯಂತಿಕವಾಗಿ ತಟ್ಟಿದ ಅಣ್ಣನ ಸಾವು ಇಲ್ಲಿನ ಕವಿತೆಗಳ ಕೇಂದ್ರದಲ್ಲಿದೆ ಎನ್ನುವುದು ಮೂಲದಲ್ಲಿ ನಿಜ. ಆದರೆ, ಇವು ಸಾವಿನ ಕವಿತೆಗಳಲ್ಲ ಅಥವಾ ಬರೀ ಅಪ್ಪನ ಕುರಿತ ನೆನಪುಗಳೂ ಅಲ್ಲ. ಇದೊಂದು ವಿಚಿತ್ರವಾದ ಬಗೆ; ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮದ ಮೂಲಕ ಹೊರಗಿನಿಂದ ಅನುಭವಿಸಿದ ಅಪ್ಪ, ನನ್ನ ಅಂತರಂಗವನ್ನು ಮುಟ್ಟಿ, ಮತ್ತೆ ಅಲ್ಲಿಂದ ಕವಿತೆಯಾಗಿ ಕಾಣುವ ಅಪ್ಪನೇ ಬೇರೆ. ಹೀಗೆ ಮೈತಳೆಯುವ ಅಪ್ಪ ನಾನೇ ಸೃಷ್ಟಿಸಿದ್ದೂ ಅಲ್ಲ ಅಥವಾ ಸಾವಿನ ನಂತರ ಕೆಟ್ಟದ್ದೆಲ್ಲ ಹೋಗಿ ಬರೀ ಒಳ್ಳೆಯವರಾಗಿ ಕಾಣುವ ವ್ಯಕ್ತಿಯೂ ಅಲ್ಲ. “ಇದು ಬರಿ ಬೆಳಗಲ್ಲೋ ಅಣ್ಣಾ” ಎಂದ ಬೇಂದ್ರೆಯವರ ಕವಿತೆಯಲ್ಲಿ ‘ಆದ’ ಬೆಳಗಿನ ಹಾಗೆ, ಇದು ಕವಿತೆಯಲ್ಲಿ ಉಂಟಾದ ಅಪ್ಪ ಮತ್ತು ಸಾವು…”
ಎರಡನೆಯದು:
“ಸಾವಿನ ಅನುಭವವೇ ಬೇರೆ, ಅದೇ ಸಾವು ಕವಿತೆಯಾಗುವಾಗಿನ ರೀತಿಯೇ ಬೇರೆ. ಎರಡೂ ಒಂದೇ ಅಲ್ಲ. ಸಾವು, ನನ್ನನ್ನು ಬೇರೆಯಾಗಿ ಮಾಡುತ್ತ, ಲೋಕವನ್ನು ಬೇರೆಯಾಗಿ ತೋರಿಸಿದೆ. ಈ ಕವಿತೆಗಳನ್ನು ಪ್ರಕಟಿಸುವ ಧೈರ್ಯ ಬಂದದ್ದೇ ಈ ಇಬ್ಬಗೆಯ ಆಗುವಿಕೆಯನ್ನು ಹಂಚಿಕೊಳ್ಳುವ ಸಣ್ಣ ಆಸೆಯಿಂದ. …….ನನ್ನ ಅಣ್ಣನ ಸಾವನ್ನು ನಾನು ಪಡೆದುಕೊಂಡಿರುವುದು ಅಥವಾ ಅದು ನನಗೆ ದಕ್ಕಿರುವುದು ಈ ಭಾಷೆಯ ಮೂಲಕ, ಈ ಕವಿತೆಗಳಾಗಿ…”
ತೇಜಶ್ರೀಯವರು ಈ ಮೂಲಕ ವಾಸ್ತವ ಮತ್ತು ಕವಿತೆಯ ಮೂಲಕ ತಾವು ಕಟ್ಟಿಕೊಂಡ ವಾಸ್ತವ ಎರಡರ ನಡುವೆ ಒಂದು ಗೆರೆಯೆಳೆಯುತ್ತಾರೆ ಮತ್ತು ಅದೇ ಹೊತ್ತಿಗೆ, ತಾವು ಸೃಜಿಸಿದ ಕಲ್ಪಿತ ವಾಸ್ತವದ ಮುಖೇನ ತಾವು ಬದುಕಿನಲ್ಲಿ ಪಡೆದುಕೊಳ್ಳುವುದರ ಕುರಿತು ಕೂಡಾ ಭರವಸೆ ಹೊಂದಿದ್ದಾರೆ. ಎಲ್ಲರ ಬದುಕಿನಲ್ಲಿಯೂ ಸಾಹಿತ್ಯದ ನೆಲೆಯೇ ಅದು. ಸಾಹಿತ್ಯ ಕಟ್ಟಿಕೊಡುವ ಬದುಕು, ಅನುಭವ, ಜಗತ್ತು, ವಾಸ್ತವ ಯಾವುದೂ ರಿಯಲ್ ಅಲ್ಲ. ಅದು ವರ್ಚ್ಯುಯಲ್. ಆದರೆ ಕಲ್ಪಿತ ವಾಸ್ತವದ ಮೂಲಕವೇ (ಬಹುಶಃ ಕೇವಲ ಕಲ್ಪಿತವಾಸ್ತವದ ಮೂಲಕ ಮಾತ್ರವೇ) ನಾವು ನಮ್ಮ ಬದುಕಿನಲ್ಲಿ ಪಡೆದುಕೊಳ್ಳಬಹುದಾದ್ದು ತುಂಬ ಇದೆ. ಅಂಥ ಒಂದು ಭರವಸೆಯೇ ಸಾಹಿತ್ಯದ ಓದು ಮತ್ತು ರಚನೆಯ ಹಿಂದಿರುವ ಸೆಲೆ.
ಹಾಗೆಯೇ, ನಾವು ನಮ್ಮ ಯಾವತ್ತೂ ಅನುಭವ, ಸಂವೇದನೆ, ಭಾವನೆಗಳನ್ನು ಭಾಷೆಯಲ್ಲಿ, ಅಕ್ಷರಗಳಲ್ಲಿ, ಭಾಷೆ ಒದಗಿಸುವ ವಿವಿಧ ಪದಗಳಲ್ಲಿ ನಮೂದಿಸಿದ ಕ್ಷಣವೇ ಅದು ನಿಜದಿಂದ ಲುಪ್ತಗೊಂಡು ನಿಲ್ಲುತ್ತದೆ ಎನ್ನುವುದು ಕೂಡ ಸತ್ಯ. ಹಾಗಾಗಿ, ಚರಿತ್ರೆ ಎನ್ನುವುದು ಇಲ್ಲ. ಇರುವುದೆಲ್ಲಾ ಫಿಕ್ಷನ್. ಭಾಷೆಯಲ್ಲಿ ಏನನ್ನೇ ಬರೆದರೂ ಅದು ಫಿಕ್ಷನ್ನೇ. ಅಕೌಂಟೆನ್ಸಿಯ ಒಂದು ಲೆಡ್ಜರ್ ಅಕೌಂಟು ಕೂಡ ಫಿಕ್ಷನಲ್! (ಈ ಮಾತಿಗೆ ಪ್ರೇರಣೆ ಅಮೆರಿಕನ್ ಕಾದಂಬರಿಕಾರ ಡಾಕ್ಟೊರೊವ್). ಈ ಅರ್ಥದಲ್ಲೇ ನಾವು ಟಿಪ್ಪು ಬಗ್ಗೆ ಮಾಡುವ ವಾದವೆಲ್ಲವೂ ಒಂದು ಫಿಕ್ಷನಲ್ ಕ್ಯಾರೆಕ್ಟರ್ ಕುರಿತಷ್ಟೇ ಆಗಿರುತ್ತದೆ. ಎಂದೋ ಆಗಿ ಹೋದ ಮನುಷ್ಯ ಹೀಗಿದ್ದ ಹಾಗಿದ್ದ ಎಂದು ಇವತ್ತು ನಾವು ಆಡುವುದೆಲ್ಲಾ ಕಲ್ಪನೆಯಿಂದ ಪಡೆದಿದ್ದೇ ಹೊರತು ಅನುಭವದಿಂದ ಅಲ್ಲ. ಅಯೋಧ್ಯೆಯ ರಾಮನ ಕುರಿತು ಆಡುವುದೂ ಅಷ್ಟೇ. ತೇಜಶ್ರೀಯವರಿಗೆ ಈ ಬಗ್ಗೆ ಸ್ಪಷ್ಟವಾದ ಅರಿವಿದೆ. ತಮ್ಮ ಕಾವ್ಯದಲ್ಲಿ ಪಡಿಮೂಡಿದ ಅಪ್ಪ ಮತ್ತು ತಮ್ಮ ಅಣ್ಣನ ನಡುವೆ ಅವರು ಗೆರೆ ಎಳೆದು ಸ್ಪಷ್ಟಪಡಿಸುತ್ತಿರುವುದು ಇದನ್ನೇ. ಇದೇ ಮಾತನ್ನು ಅವರು ಸಾವಿನ ಎದುರು ನಿಂತು ತಾವು ಕಂಡುಕೊಂಡಿದ್ದರ ಕುರಿತೂ ಆಡಿರುವುದು ಮಾತ್ರ ಸ್ವಲ್ಪ ವಿಚಾರ ವಿಮರ್ಶೆಗೆ ಕಾರಣವಾಗುವಂತಿದೆ.
ನಾವು ಯಾವತ್ತೂ ನಮ್ಮದೇ ಸಾವಿನ ಅನುಭವದ ಕುರಿತು ಬರೆಯಲಾರೆವು. ಬರೆಯಬಹುದಾದ್ದೆಲ್ಲ ಇನ್ನೊಬ್ಬರ, ಸಾಧ್ಯವಿದ್ದರೆ, ತೀರ ಒಂದೇ ಜೀವ ಎನ್ನುವ ಮಟ್ಟಿಗೆ ಆಪ್ತರಾಗಿದ್ದವರ ಸಾವಿನ ಬಗ್ಗೆ. ಇತ್ತೀಚೆಗೆ ಹಂಚಿಕೊಂಡ When Death Takes Something from You… ಪುಸ್ತಕ ಮಾಡುವುದು ಇದನ್ನು. ತನ್ನ ಇಪ್ಪತ್ತೈದು ವರ್ಷ ಪ್ರಾಯದ ಮಗನನ್ನು ಕಳೆದುಕೊಂಡು ಆಘಾತಗೊಂಡ ತಾಯಿಯ ಅಂತರಂಗ ಬಿಚ್ಚಿಕೊಂಡ ಒಂದು ಬಗೆ ಅಲ್ಲಿ ನಮಗೆ ಕಾಣ ಸಿಗುತ್ತದೆ. ನಾವೆಲ್ಲರೂ ತಮ್ಮ ತೀರ ಹತ್ತಿರದವರ ಸಾವನ್ನು ಕಂಡಿದ್ದೇವೆ ಅಥವಾ ಕಾಣಬಹುದಾದ ಸಾಧ್ಯತೆಗಳಿವೆ. ಸಾಧ್ಯತೆಗಳಿವೆ ಅನಿಸಿದವರಿಗೆ ಅದರ ಕುರಿತು ಕಲ್ಪನೆಯಿದೆ. ಅವರು ಅದನ್ನು ಎದುರಿಸಲು ಯಾವತ್ತಿನಿಂದಲೂ ತಯಾರಾಗುತ್ತ ಹೈರಾಣಾಗುತ್ತ ಇರುತ್ತಾರೆ. ಈ ಪ್ರಕ್ರಿಯೆಯಲ್ಲಿ ನಾವು ಸಾವನ್ನು ಕುರಿತು ಕಗ್ಗತ್ತಲಲ್ಲಿ ತಡಕಾಡುವವರಂತೆ, ಸ್ಪಷ್ಟವಾಗಿ ನಾವದನ್ನು ಅರಿಯಲಾರೆವು ಎಂದು ತಿಳಿದಿದ್ದರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. ಅವರಿಲ್ಲದ-ಇವರಿಲ್ಲದ ನಮ್ಮ ಬದುಕು ಹೇಗಿರಬಹುದು ಎಂಬ ಕಲ್ಪನೆ, ಅದನ್ನು ಎದುರಿಸುವುದು ಹೇಗೆ ಎಂಬ ಕಲ್ಪನೆ ಇತ್ಯಾದಿಗಳ ಮೂಲಕ ನಾವು ಸಜ್ಜಾಗುತ್ತಿರುವುದು ನಮ್ಮದೇ ಸಾವಿಗೆ ಎನ್ನುವುದು ಕೂಡ ಬಹುಮಟ್ಟಿಗೆ ನಿಜ!
ಸಾಹಿತ್ಯದಲ್ಲಿ ನಮಗೆ ಸಿಗುವ ಇಂಥವೇ ಕೃತಿಗಳೆಲ್ಲ ಕಗ್ಗತ್ತಲಲ್ಲಿ ತಡಕಾಡುವಾಗ ಕೈಕಾಲಿಗೆ ತಗುಲಿದ, ಅಪಾಯವನ್ನೇನೂ ಮಾಡದೆ ಕಗ್ಗತ್ತಲಲ್ಲಿ ಎಲ್ಲೆಲ್ಲಿ ಏನಿದೆ ಎಂಬ ಬಗ್ಗೆ ಅಷ್ಟಿಷ್ಟು ಕುರುಡು ಅರಿವು ಕೊಡುವ ವಸ್ತುವಿನಂತೆ ಪೊರೆಯುತ್ತವೆ. ಆದರೆ ಅದರಿಂದಲೂ ಯಾವ ಪ್ರಯೋಜನವಾಗದು ಎನ್ನುವುದು ನಿಜ. ಕಣ್ಣು ಕೋರೈಸುವ ಬೆಳಕು ಹೊಮ್ಮಿದ್ದೇ ನಮ್ಮ ಜ್ಞಾನವೆಲ್ಲಾ ಕುರುಡ ಕಂಡ ಆನೆಯಾಗಿತ್ತು ಅನಿಸಬಹುದು. ಹಾಗಿದ್ದೂ ಬದುಕನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ಇಲ್ಲಿ ಬದುಕಬಹುದಾದ ಸಮಾಧಾನಕರ ವಿಧಾನವನ್ನು ಕಂಡುಕೊಳ್ಳುವುದಕ್ಕೆ ಅಷ್ಟಿಷ್ಟು ಸಹಾಯ ಖಂಡಿತಕ್ಕೂ ಒದಗುವುದು ಸಾಹಿತ್ಯದಿಂದಲೇ ಎನ್ನುವುದು ಕೂಡ ನಿಜ.
ತೇಜಶ್ರೀಯವರ ಕವಿತೆಗಳಲ್ಲಿ ತನ್ನ ಅಣ್ಣನ ಕುರಿತ ನೆನಪುಗಳಿಂದ ಅಣ್ಣನನ್ನು ಜೀವಂತಗೊಳಿಸಿಕೊಳ್ಳುವ ಪ್ರಯತ್ನವಿದೆ. ಬಾಲ್ಯದಲ್ಲಿ ಆತ ಪೊರೆದ ಪ್ರೀತಿ, ಅವನೊಂದಿಗೆ ಗುಡ್ಡ, ಗದ್ದೆ, ದಿಬ್ಬ ಅಲೆದ ನೆನಪು, ಸಂಜೆಯ ಹೊಂಬಿಸಿಲಿಗೆ ಅವನು ಮೈಯೊಡ್ಡಿ ಸುಮ್ಮನೇ ಮೌನದಲ್ಲಿ ಕುಳಿತ ಕ್ಷಣಗಳು, ದನ, ಬೆಕ್ಕು, ಗಿಡ, ಮರ, ಬಳ್ಳಿಗಳೊಂದಿಗೆ ಹೊಂದಿದ್ದ ಅನುಬಂಧ, ಅವನ ಧೀಮಂತ ವ್ಯಕ್ತಿತ್ವವನ್ನು ಗ್ರಹಿಸಿದ ಹತ್ತು ಹಲವು ಬಗೆಗಳು ಇಲ್ಲಿ ಹರಳುಗಟ್ಟಿವೆ. ಆದರೆ, ಪ್ರಕೃತಿ-ಪರಿಸರ ಮತ್ತು ವ್ಯಕ್ತಿತ್ವದ ಅನುಸಂಧಾನದ ಮೂಲಕ ತನ್ನಣ್ಣನ ನೆನಪುಗಳನ್ನು ಚಿರಂತನಗೊಳಿಸುವ ಕವಿಯ ಯಾವುದೇ ಚಿತ್ರದಲ್ಲಿ ಅಪ್ಪ-ಮಗಳನ್ನು ಬಿಟ್ಟರೆ ಬೇರೆ ಜೀವಂತ ವ್ಯಕ್ತಿಯಿಲ್ಲದಿರುವುದು ಕುತೂಹಲಕರ. ಇಲ್ಲಿ ಒಂದು ಕುಟುಂಬವಾಗಿ ಅಣ್ಣ ತನಗೊದಗಿದ ಬಗೆ ಯಾವುದು, ಅಮ್ಮನೊಂದಿಗೆ ಅಪ್ಪನಾಗಿ ಅವನು ತನಗೊದಗಿದ ಬಗೆ ಯಾವುದು, ತನ್ನ ಇತರ ಮಕ್ಕಳೊಂದಿಗಿಟ್ಟು ತನ್ನನ್ನು ಕಾಣುತ್ತಿದ್ದ ಬಗೆ ಯಾವುದು – ಎಂಬ ಬಗ್ಗೆಯೆಲ್ಲ ಏನೂ ಇಲ್ಲ. ಒಂದು ದೊಡ್ಡ ಶೂನ್ಯ, ಮಹಾಮೌನ.
ಅಂತರದಲ್ಲಿ ನಿಂತು ರೂವಾರಿಯು ನೋಡುವಂತೆ ತನ್ನದೇ ಕೃತಿಯನ್ನು
ನೋಡುತ್ತಿದ್ದೆ ನೀನು ನನ್ನನ್ನು ಕೆಲವೊಮ್ಮೆ ಮೌನದಲ್ಲಿ.
ಒದರುವ ಹುಪ್ಪಟೆಯ ಹಿಡಿದು ಕೊಕ್ಕಲ್ಲಿ
ಗೂಡು ತೂರಿ ಗುಕ್ಕನುಣಿಸಿ ಮರಿಗೆ,
ಬಂದ ವೇಗದಲ್ಲೇ ಮರುಕ್ಷಣ
ಮಾಯವಾಗುವಂತೆ ತಾಯಿಹಕ್ಕಿ,
ನನ್ನ ಆತ್ಮವನ್ನು ಹೊಕ್ಕು ಹೊರಬರುತ್ತಿತ್ತು
ನಿನ್ನ ಮೌನ.
ಪರಿಪೂರ್ಣ ಕಲಾಕೃತಿಯನ್ನು ಎಂದೂ ಒಪ್ಪದ ನಿನ್ನ ಗುಣ
ನೂರು ಅರ್ಥಗಳ ಲೇಪಿಸುತ್ತಿದೆ ಈಗ ಆ ನಿನ್ನ ಮೌನಕ್ಕೆ.
ಇಲ್ಲಿರುವುದೆಲ್ಲಾ ಒನ್ ಟು ಒನ್ ಅನುಸಂಧಾನ, ಅಪ್ಪ-ಮಗಳು ಒಂದು ಯುನಿಟ್ ಆಗಿ ಅಪ್ಪ ಮಗಳಿಗೆ ಕೊಟ್ಟಿದ್ದು, ಮಗಳು ಅಪ್ಪನಿಂದ ಪಡೆದಿದ್ದು, ಗ್ರಹಿಸಿದ್ದು, ಕಟ್ಟಿಕೊಂಡಿದ್ದು ಮತ್ತು ದಕ್ಕಿಸಿಕೊಂಡಿದ್ದು ಮಾತ್ರವಲ್ಲ, ಅವುಗಳೊಂದಿಗೇ ಸಾಗಲಿರುವ ಭವಿಷ್ಯತ್ತಿನ ಹಾದಿಯಲ್ಲಿ ಮಾಡಲಿರುವುದು ಮಾತ್ರ. ಈ ಅಣ್ಣನ ಬದುಕಿನಲ್ಲಿ ಮಗಳ ಹೊರತಾಗಿ ಬರುವುದೆಲ್ಲಾ ಪ್ರಕೃತಿ ಮತ್ತು ಪರಿಸರ. ಬೇರೆ ಜೀವಂತ ವ್ಯಕ್ತಿಗಳಿಲ್ಲ. ಇದು ಆಶ್ಚರ್ಯ ಹುಟ್ಟಿಸಿದ ಒಂದು ಅಂಶ. ಇದರಿಂದ ಏನಾಗುತ್ತದೆ ಎಂದರೆ, ಅಣ್ಣನ ವ್ಯಕ್ತಿತ್ವ ಮತ್ತು ಸಾವು – ಭೌತಿಕ ಕಣ್ಮರೆ – ಮನಸ್ಸಿಗಾದ ಆಘಾತ – ಅದು ಸೃಷ್ಟಿಸಿದ ಶೂನ್ಯ – ನಂತರದ ದಿನಗಳಲ್ಲಿ ಅಣ್ಣನ ನೆನಪು ಹುಟ್ಟಿಸಿದ ಅವನ ಬೇರೆ ಬೇರೆ ವಸ್ತುಗಳು (ಅವನು ಕೂರುತ್ತಿದ್ದ ಕುರ್ಚಿ, ಅವನನ್ನು ನೆನೆಯುವ ಗಿಡಮರಬಳ್ಳಿಗಳು, ದನಕರುಗಳು, ಬೆಕ್ಕು, ಅವನು ನಿತ್ಯ ಧರಿಸುತ್ತಿದ್ದ ಜೋಡು ಇತ್ಯಾದಿ) ಎಲ್ಲವೂ [ಅವನು ಸ್ವತಃ ಒಂದು ಕುಟುಂಬದ ಸದಸ್ಯನಾಗಿದ್ದರಿಂದ, ಮತ್ತು ಕವಿ ಸ್ವತಃ ಅದೇ ಕುಟುಂಬದ ಸದಸ್ಯನಾಗಿರುವುದರಿಂದ] – ಬೇರೆ ಬೇರೆ ಸದಸ್ಯರಲ್ಲಿ ಉಂಟು ಮಾಡಿದ ತಳಮಳಗಳು (ಕವಿ ಕಂಡಂತೆ) ಇಲ್ಲಿ ದಾಖಲಾಗುವುದೇ ಇಲ್ಲ. ಕವಿ ತನ್ನ ಕಣ್ಮರೆಯಾದ ಅಣ್ಣನನ್ನು ಒಂಟಿಯಾಗಿ ಮತ್ತು ಆ ಕಣ್ಮರೆಯೇ ಮೂಲವಾಗಿ ಹುಟ್ಟಿದ ಉಳಿದೆಲ್ಲಾ ಚಿತ್ರಗಳಿಂದ ಐಸೊಲೇಟ್ ಆದ ಒಂದು ನೆಲೆಯ ಅನುಭವದಲ್ಲಿ ಕಟ್ಟಿಕೊಳ್ಳುವುದು ಸಾಧ್ಯವೇ?
ಆದರೆ, ಇವು ಒಂದು ನೆಲೆಯಿಂದ ಅಟೊಬಯಾಗ್ರಫಿಕಲ್ ಕವಿತೆಗಳು. ಆತ್ಮಕತೆಯ ನೋವು, ಸಂಕಟ, ಸಾವು-ನೋವು ಮತ್ತಿತರ ಗೋಳನ್ನು ಓದಿ ಸುಂದರ ಕೃತಿ ಎಂದು ಬರೆಯುವುದು ಎಷ್ಟು ಆಭಾಸಕರವೋ ಹಾಗೆಯೇ ಇದೂ. ಇನ್ನೊಂದು ನೆಲೆಯಿಂದ, ಸೃಜನಶೀಲ ಅಭಿವ್ಯಕ್ತಿ ಎಂಬುದು ಯಾವತ್ತೂ ಪ್ರಿಪ್ಲ್ಯಾನ್ಡ್ ಅಲ್ಲ, ಅದು ಅಭಿಜಾತ ಮತ್ತು ಸ್ವಯಂಸ್ಫೂರ್ತ, ಅದನ್ನು ಕವಿ/ಲೇಖಕ ಪ್ರಜ್ಞಾಪೂರ್ವಕ ನಿಯಂತ್ರಿಸಲು ಸ್ವತಂತ್ರನೂ ಅಲ್ಲ, ಅವನ ಪ್ರಜ್ಞೆಯ ನೆಲೆಯಲ್ಲಿ ಅದು ಹುಟ್ಟುವುದೂ ಅಲ್ಲ; ಹಾಗಾಗಿ ಅದು ಯಾಕೆ ಹಾಗಿದೆ, ಯಾಕೆ ಹೀಗಿಲ್ಲ ಎನ್ನುವುದೆಲ್ಲಾ ಕವಿಗೆ ಸಂಬಂಧಿಸಿದ್ದಲ್ಲ ಎನ್ನುವ ವಾದ. ಈ ಬಗ್ಗೆ ಬೇರೆಡೆ ನಾನು ಈಗಾಗಲೇ ಸಾಕಷ್ಟು ಬರೆದಿದ್ದೇನೆ. ನಯಾ ಮರಿಯ ಐತ್ ಕೃತಿಯಲ್ಲಿ ಕೂಡ ಈ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ, ಆಸಕ್ತರು ಗಮನಿಸಿಕೊಳ್ಳಬಹುದು.
ಜ ನಾ ತೇಜಶ್ರೀ ನುರಿತ ಕವಿ. ಭಾಷೆಯ ಬಗ್ಗೆ ತುಂಬ ಸೂಕ್ಷ್ಮ ಗ್ರಹಿಕೆಗಳಿರುವ ಪ್ರಬುದ್ಧೆ. ಭಾಷೆಯನ್ನು ಎಚ್ಚರಿಕೆಯಿಂದ ಬಳಸುವ ಮತ್ತು ತನ್ನ ಸಂವೇದನೆಗೆಳ ಬಗ್ಗೆ ವಿಮರ್ಶಾತ್ಮಕ ಎಚ್ಚರವೂ, ಸೃಜನಶೀಲ ಅಭಿರುಚಿಯೂ ಜಂಟಿಯಾಗಿಯೇ ಕೆಲಸ ಮಾಡುವ ಲೇಖಕಿ. ಕವಿ ಭಾವ ಪ್ರತಿಮಾ ಪುನರ್‌ಸೃಷ್ಟಿ ಅವರ ಕವಿತೆಗಳ ಮೂಲಕ ಸಿದ್ಧಿಸುವುದನ್ನು ಮತ್ತೆಮತ್ತೆ ಕಂಡಾಗ ಇವರ ಬಗ್ಗೆ ಮೂಡುವ ಅಭಿಮಾನ, ಹೆಮ್ಮೆ ಸಣ್ಣದಲ್ಲ. ಹಾಗೆಯೇ ಇಲ್ಲಿನ ಯಾವ ಕವಿತೆಯೂ ಸಹೃದಯಿ ಓದುಗನನ್ನು ನಿರಾಶೆಗೊಡ್ಡುವುದಿಲ್ಲ. ಪ್ರತಿಯೊಂದು ಕವಿತೆಯೂ ಆಪ್ತವಾಗುತ್ತದೆ, ಇಷ್ಟವಾಗುತ್ತದೆ. ಬಹಳಷ್ಟು ಕವಿತೆಗಳು ಹೊಸ ಹೊಳಹು, ಹೊಸ ದರ್ಶನದ ತೇಜಸ್ಸು ಪಡೆದಿವೆ. ಕೆಲವನ್ನು ಸುಮ್ಮನೇ ಓದಿ ಮೆಚ್ಚಬಹುದು. ಈ ಕವಿತೆಗಳು ನಮ್ಮನ್ನು ಯಾವುದೇ ಬಗೆಯ ವಿಷಣ್ಣತೆಯಲ್ಲಿ ಅದ್ದುವುದಿಲ್ಲ. ಹಾಗೆಯೇ ಮೋಕ್ಷದ ಹುಸಿ ಭರವಸೆಯನ್ನೂ ಕೊಡುವುದಿಲ್ಲ. ಅವರೇ ಕವಿತೆಯೊಂದರಲ್ಲಿ ಹೇಳಿರುವಂತೆ ಈ ಅಪ್ಪ ಎಂಬ ಫ್ರೇಮಿನಲ್ಲಿ ಬೇರೆಯವರ ಅಪ್ಪನ ಚಿತ್ರವೂ ಅದಕ್ಕಾಗೇ ಮಾಡಿಸಿದ ಹಾಗೆ ಹೊಂದಿಕೊಂಡು ಕೂರಬಹುದು. ಅದೇ ರೀತಿ ಎಲ್ಲರೊಳಗಿನ ಅಪ್ಪನೂ ಇಲ್ಲಿ ಕಾಣಿಸಬಹುದು.
ಎಲ್ಲರೊಳಗೊಬ್ಬ ‘ಕ್ಯಾಪ್ಟನ್’ನ ಗುರುತಿಸುತ್ತ
ತಾನೇ ‘ಕ್ಯಾಪ್ಟನ್’ ಆಗಿದ್ದ ನೀನು
ಎಲ್ಲರೊಳಗಿನ ಅಪ್ಪನಿಗೂ ರೂಪಕ.
ಹಾಗಾಗಿ ಇವುಗಳೊಂದಿಗೆ ಅಂಥ ಒಂದು ಅನುಸಂಧಾನ ಸಹಜವಾಗಿ ಸಾಧ್ಯವಾಗುತ್ತದೆ. ಇಲ್ಲಿ ಒಟ್ಟು ನಲವತ್ತೊಂದು ಪ್ಲಸ್ ಎರಡು ಕವಿತೆಗಳಿವೆ. ನನಗಿಷ್ಟವಾದ ಎರಡು ಕವಿತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಉಳಿದೆಲ್ಲಾ ಕವಿತೆಗಳನ್ನು ಓದುವ ಹಸಿವು, ರುಚಿ ನಿಮಗೆ ಹತ್ತಲಿ ಎನ್ನುವ ಉದ್ದೇಶದಿಂದ, ಅಷ್ಟೆ.
ಇಷ್ಟು ಕಾಲದ ಸಿಟ್ಟು ಮಾಸಿ
ಮೆಲುನಗೆ ಮನೆಮಾಡಿತ್ತು ಅವನ ಕಣ್ಣಲ್ಲಿ
ಆ ಬೆಳಗ್ಗೆ.
ಚೂರು ಮಾತು,
ತೇಲುಗಣ್ಣು,
ಬೊಕ್ಕತಲೆಯ ತಡವರಿಸುವ ಮೊಂಡುಬೆರಳು.
ಅಚ್ಚಬಿಳಿ ದುಂಡುಚಂದಿರ ಎರಡಾಗಿ ಮುರಿದು
ಅರ್ಧ ಅವನ ಈ ಕಣ್ಣಲ್ಲಿ, ಇನ್ನರ್ಧ ಆ ಕಣ್ಣಲ್ಲಿ.
ನೋವಿಗೆ ಮೋಹಗೊಂಡಂತೆ ಅವನ ಒಡಲು
ಹೂರಳುತ್ತಿತ್ತು ಅತ್ತಿಂದತ್ತ
ತಣಿವಿಗೆ ತಾವನರಸಿ.
ಆಯಸ್ಸಿನ ಬಿಡುನುಡಿಯು ತುಟಿಯಂಚಿಗೆ ಬಂದು
ಅದುರುತ್ತಿತ್ತು ಸರಿಯಾದ ನುಡಿಗಟ್ಟಿಗೆ ಕಾದು.
ಈ ಕವಿತೆ ಆ ದಿನದ ಕೊನೆಯ ಕ್ಷಣಗಳ ಬಗ್ಗೆ ಹೇಳುತ್ತಿದೆ. ತನ್ನ ಸುತ್ತಲಿನ ಜಗತ್ತಿನ ಬಗ್ಗೆ ಹುಟ್ಟುವ ಅಸಮಾಧಾನ, ಕಿರಿಕಿರಿ, ಅಸಹ್ಯ ಮತ್ತು ಬೇಸರವನ್ನು ಈ ಜಗತ್ತು ಸಿಟ್ಟು ಎಂದು ತಿಪ್ಪೆಸಾರಿಸಿ ಗುರುತಿಸುತ್ತ ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವವರು ಕಡಿಮೆ. ಅಂಥ ಒಂದು ಮಾತಿನ (ಅರಿಯದೇ ಆಡುವ ಮಂದಿಯ ಮಾತಿನ ಬಗ್ಗೆ) ಕವಿತೆ ಕೂಡಾ ಇಲ್ಲಿದೆ. ಅದರ ಹಿನ್ನೆಲೆಯಲ್ಲಿಯೇ ಈ ಸಿಟ್ಟು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈಗ ಈ ಜಗತ್ತಿನಿಂದಲೇ ಹೊರಟು ನಿಂತ ಗಳಿಗೆಯಲ್ಲಿ ಮೆಲುನಗೆ ಮಾತ್ರ ಇದೆ. ಅಲ್ಲಿಂದ ಮುಂದೆ ಆ ದೇಹಸ್ಥಿತಿಯನ್ನು ವಿವರಿಸುತ್ತಾರೆ. ಮೊಂಡು ಬೆರಳಿನ ಕತೆ ಕೂಡ ಇನ್ನೊಂದು ಕವಿತೆಯಲ್ಲಿ ಬರುತ್ತದೆ. ಇಲ್ಲಿ ಈ ದುಂಡು ಚಂದಿರ ಮುರಿದ ಕತೆ ಇದೆ. ಆ ಚಂದ್ರನಾದರೂ ಅರ್ಧ ಒಂದು ಕಣ್ಣಲ್ಲಿಯೂ ಇನ್ನರ್ಧ ಇನ್ನೊಂದು ಕಣ್ಣಲ್ಲಿಯೂ ಇದ್ದಾನೆನ್ನುತ್ತಾರೆ ಕವಿ. ಆದರೆ ನಮಗೆ ಗೊತ್ತು, ಆಗಸದಲ್ಲಿ ಆಗ ಇರುವುದೇ ಅರ್ಧ ಚಂದಿರ ಎಂಬ ಸತ್ಯ. ಅಥವಾ ಆ ಚಂದಿರ ಕೂಡ ಕವಿಯ ಕಲ್ಪನೆಯಾಗಿರುವ ಸಾಧ್ಯತೆಯಿದೆ. ಕವಿ ನಮಗಿಲ್ಲಿ ಕಟ್ಟಿಕೊಡುವ ಈ ರೂಪಕವನ್ನು ಮೇಲೆ ವಿವರಿಸಿದ ವಾಸ್ತವ ಮತ್ತು ವರ್ಚ್ಯುಯಲ್ ವಾಸ್ತವದ ಜೊತೆಗಿಟ್ಟು ನೋಡಬಹುದು.
ಈ ಕವಿತೆಯ ಅತ್ಯಂತ ಸುಂದರ ಸಾಲು ಕೊನೆಯಲ್ಲಿದೆ. ‘ಆಯಸ್ಸಿನ ಬಿಡುನುಡಿಯು ತುಟಿಯಂಚಿಗೆ ಬಂದು ಅದುರುತ್ತಿತ್ತು, ಸರಿಯಾದ ನುಡಿಗಟ್ಟಿಗೆ ಕಾದು’ ಎನ್ನುವ ಮಾತು ಗಮನಿಸಿ. ಬಹುಶಃ ಇಡೀ ಆಯುರ್ಮಾನದಲ್ಲಿ ನಾವೆಲ್ಲ ನುಡಿಯ ಬಹುದಾದ ಒಂದೇ ಒಂದು ಮಾತಿನ ಗತಿ ಇದೇ, ಇಷ್ಟೇ ಇರಬಹುದು ಎನಿಸುವುದಿಲ್ಲವೆ? ಆ ಮಾತನ್ನು ಆಡುವ ಗಳಿಗೆ ಬಂದಾಗ ಬಹುಶಃ ಯಾವ ಭಾಷೆಯೂ, ಯಾವ ಸದ್ದೂ ಮನುಷ್ಯನ ನಾಲಗೆಗೆ, ಲೇಖನಿಗೆ ನಿಲುಕುವುದೇ ಇಲ್ಲವೇನೋ. ಆದರೆ ಅಲ್ಲಿಯವರೆಗೆ ಸುಮ್ಮನೇ ಪಾತ್ರೆ ಸದ್ದು ಮಾಡಿದಂತೆ ಬಡಬಡಿಸುತ್ತಲೇ ಇರುತ್ತೇವೆ.