newsics.com
ರಾಯಚೂರು: ಕಲುಷಿತ ನೀರು ಸೇವಿಸಿ ಬಾಲಕ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ. 30ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೀರು ಸರಬರಾಜು ಮಾಡುವ ಪೈಪ್ ಲೈನ್‌ಗೆ ಚರಂಡಿ ನೀರು ಸೇರುತ್ತಿದ್ದು ಕಳೆದ 2-3 ದಿನಗಳಿಂದ ಜನರು ಅಸ್ವಸ್ಥರಾಗುತ್ತಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ 5 ವರ್ಷದ ಬಾಲಕ ಹನುಮೇಶ್ ಸಾವನ್ನಪ್ಪಿದ್ದಾನೆ. ಮಕ್ಕಳು, ಮಹಿಳೆಯರು ಸೇರಿ 30 ಕ್ಕೂ ಹೆಚ್ಚು ಜನ ವಾಂತಿ ಭೇದಿಯಿಂದ ರಾಯಚೂರಿನ ರಿಮ್ಸ್, ಅರಕೇರಾ, ದೇವದುರ್ಗದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುರೇಂದ್ರ ಬಾಬು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿ ವೈದ್ಯರ ತಂಡ ಬೀಡು ಬಿಟ್ಟಿದ್ದು ಅಗತ್ಯ ವೈದ್ಯಕೀಯ ಸಲಕರಣೆ, ಔಷಧಿ ವ್ಯವಸ್ಥೆ ಮಾಡಲಾಗಿದೆ.
ಸದ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.