newsics.com
ಅಮೃತಸರ: ಪಾಕಿಸ್ತಾನ ದೇಶಕ್ಕೆ ಪಾಠ ಕಲಿಸಬೇಕಾದರೆ ಒಂದೆರಡು ಸರ್ಜಿಕಲ್ ಸ್ಟ್ರೈಕ್ ಆದರೂ ಆಗಬೇಕೆಂದು ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಗಂಭೀರ ಸಲಹೆ ನೀಡಿದ್ದಾರೆ.
ಪಾಕಿಸ್ತಾನದಿಂದ ಮಿತಿ ಮೀರಿ ಬರುತ್ತಿರುವ ಮಾದಕ ವಸ್ತುಗಳ ಹಿನ್ನೆಲೆಯಲ್ಲಿ ಅವರು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪಾಕಿಸ್ತಾನ ದೇಶದಲ್ಲಿ ಬೆಳೆಯುವ ಮಾದಕ ವಸ್ತುಗಳನ್ನು ಭಾರತಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ನಮ್ಮವರಿಗೆ ತೊಂದರೆಯಾಗುತ್ತಿದೆ. ಈ ವಿಚಾರದಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕೆಂದರೆ ಒಂದೆರಡು ಸರ್ಜಿಕಲ್ ಸ್ಟ್ರೈಕ್ ಅನ್ನು ಮಾಡಲೇಬೇಕಾಗಿದೆ ಎಂದು ಪಂಜಾಬ್‌ನ ಗಡಿ ಭಾಗದಲ್ಲಿ ಕೈಗೊಂಡಿರುವ ಎರಡು ದಿನದ ಪ್ರವಾಸದ ವೇಳೆ ಪುರೋಹಿತ್ ಹೇಳಿದರು.
ಮುಂದಿನ ಪೀಳಿಗೆ ಮಾದಕ ವಸ್ತುಗಳ ಚಟದಿಂದ ದೂರವಿರಬೇಕು. ಪಾಕಿಸ್ತಾನವು ಈ ವಿಚಾರದಲ್ಲಿ ಭಾರತದೊಂದಿಗೆ ಆಟವಾಡುತ್ತಿದೆ. ಇದನ್ನು ಸಹಿಸಲಾಗದು. ಭಾರತದ ವಿರುದ್ದ ಪಾಕಿಸ್ತಾನಕ್ಕೆ ನೇರ ಯುದ್ದ ಮಾಡಲು ಶಕ್ತಿಯಿಲ್ಲ. ಮಾದಕ ವಸ್ತುಗಳ ಸಾಗಣೆಯನ್ನೇ ಅಘೋಷಿತ ಯುದ್ದದಂತೆ ಮಾಡಲಾಗುತ್ತಿದೆ. ದ್ರೋಣ್‌ಗಳನ್ನೂ ಬಳಸುತ್ತಿದೆ. ಇದಕ್ಕಾಗಿಯೇ ಸರ್ಜಿಕಲ್ ಸ್ಟ್ರೈಕ್‌ಗಳು ಬೇಕಾಗಿದೆ ಎನ್ನುವುದು ನನ್ನ ನಿಲುವು ಎಂದರು ಪುರೋಹಿತ್.