ಬೆಂಗಳೂರು: ಕೊರೋನಾ ಅಬ್ಬರ ತಡೆಯಲಾರದೆ ಕಂಗೆಟ್ಟಿರುವ ಸರ್ಕಾರ ಶನಿವಾರ, ಭಾನುವಾರ ಕಂಪ್ಲೀಟ್ ಲಾಕ್’ಡೌನ್ ಮಾಡಲು ಚಿಂತನೆ ನಡೆಸಿದೆ.
ಕೊರೋನಾ ಅಟ್ಟಹಾಸ ಬಗ್ಗೆ ಚರ್ಚಿಸಲು ನಾಳೆ (ಜುಲೈ 9) ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದ್ದು, ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ತಡೆಗೆ 4 ಭಾನುವಾರ ಲಾಕ್’ಡೌನ್ ಘೋಷಣೆ ಮಾಡಿದ್ದು, ಶನಿವಾರವೂ ಲಾಕ್ ಡೌನ್ ಜಾರಿ ಮಾಡುವ ಕುರಿತಾಗಿ ಕ್ಯಾಬಿನೆಟ್’ನಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಬಿಬಿಎಂಪಿ ಸದಸ್ಯರು ಶನಿವಾರವೂ ಲಾಕ್ ಡೌನ್ ಜಾರಿಗೆ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸಚಿವರೊಂದಿಗಿನ ಸಭೆಯಲ್ಲಿ ಶನಿವಾರವೂ ಲಾಕ್ ಡೌನ್ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಇದರೊಂದಿಗೆ ಗುತ್ತಿಗೆ ವೈದ್ಯರ ಸೇವೆ ಕಾಯಂಗೊಳಿಸುವ ಬಗ್ಗೆಯೂ ಕ್ಯಾಬಿನೆಟ್’ನಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.