ನವದೆಹಲಿ: ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಚರ್ಚೆ ಹಾಗೂ ಕಾನೂನು ತಿದ್ದುಪಡಿಗೆ ಸಿದ್ಧವಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ.
ಇಂತಹ ಹೇಯ ಕೃತ್ಯ ಖಂಡಿಸಲು ಯಾವುದೇ ಪದಗಳಿಲ್ಲ. ಇಂತಹ ಅಮಾನವೀಯ ಘಟನೆ ನಾಚಿಕೆಗೇಡಿನ ಸಂಗತಿ ಎಂದು ಶೂನ್ಯವೇಳೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದೆಹಲಿಯ ನಿರ್ಭಯಾ ಪ್ರಕರಣದ ನಂತರ ಹೊಸ ಕಾನೂನು ಜಾರಿಯಾಗಿದ್ದರೂ ಇಂತಹ ಪ್ರಕರಣಗಳು ನಿಂತಿಲ್ಲ. ಈ ವಿಷಯದ ಚರ್ಚೆಗೆ ಯಾವುದೇ ವಿರೋಧವಿಲ್ಲ. ಕಾನೂನು ತಿದ್ದುಪಡಿಗೆ ಸರ್ಕಾರ ಸಿದ್ಧವಿದ್ದು ಚರ್ಚೆ ಸಂಬಂಧ ನಿರ್ಧಾರವನ್ನು ಸ್ಪೀಕರ್ ಓಂ ಬಿರ್ಲಾ ಕೈಗೊಳ್ಳಲಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇಂತಹ ಹೇಯ ಕೃತ್ಯಗಳು ನೋವುಂಟು ಮಾಡುತ್ತವೆ ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು. ವ್ಯಾಪಾರ ಸಲಹಾ ಸಮಿತಿ ಈ ಸಂಬಂಧ ಚರ್ಚೆ ನಡೆಸಲಿದೆ ಎಂದ ಅವರು, ಅಗತ್ಯವಿದ್ದಲ್ಲಿ ಕಾನೂನಿಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದರು.
ಮಹಿಳೆಯರ ವಿರುದ್ಧದ ಅಪರಾಧ ತಗ್ಗಿಸಲು ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧವಿದೆ. ಸಂತ್ರಸ್ತರ ನೆರವಿಗಾಗಿ ಈಗಾಗಲೇ ಅನೇಕ ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳಿವೆ ಎಂದು ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಹೇಳಿದರು.