ಚೆನ್ನೈ: ಅವಿವಾಹಿತ ಪುರುಷ ಹಾಗೂ ಮಹಿಳೆ ಲೀವ್ ಇನ್ ರಿಲೇಷನ್ಶಿಪ್ ನಲ್ಲಿರುವುದು ಇಲ್ಲವೇ ಹೋಟೆಲ್ ಕೊಠಡಿಯಲ್ಲಿ ಒಟ್ಟಾಗಿ ತಂಗುವುದು ಅಪರಾಧ ಎಂದು ಸೂಚಿಸುವ ಯಾವುದೇ ಕಾನೂನು ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಅವಿವಾಹಿತ ಪುರಷ ಹಾಗೂ ಮಹಿಳೆ ಒಟ್ಟಾಗಿ ಇರುವುದು ಅಪರಾಧ ಅಲ್ಲ. ಅಲ್ಲದೆ ಅವರು ಕೊಠಡಿ ಬಾಡಿಗೆ ಪಡೆಯುವುದು ಕೂಡ ಕಾನೂನು ಬಾಹಿರ ಅಲ್ಲ. ಇದೇ ಕಾರಣ ನೀಡಿ ಕೊಠಡಿಗೆ ಬೀಗ ಜಡಿಯುವಂತಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ಕೊಯಮತ್ತೂರಿನ ಅಪಾರ್ಟ್ಮೆಂಟ್ನಲ್ಲಿ ಅವಿವಾಹಿತ ಪುರಷ ಹಾಗೂ ಮಹಿಳೆ ತಂಗಿದ್ದು, ಅದಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಸ್ಥಳೀಯರು ಕಳೆದ ಜೂನ್ ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣವನ್ನು ಕಂದಾಯ ಇಲಾಖೆಗೆ ವರ್ಗಾಯಿಸಿ ತನಿಖೆಗೆ ನಡೆಸುವಂತೆ ಸೂಚಿಸಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಕೊಠಡಿ ಪರಿಶೀಲನೆ ನಡೆಸಿದಾಗ ಅಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದ್ದರಿಂದ ಕೊಠಡಿಯನ್ನು ಜಪ್ತಿ ಮಾಡಲು ಮುಂದಾಗಿದ್ದರು.