ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ಹಾಗೂ ಸಮಯ ಪರಿಪಾಲನೆ ಹಿನ್ನೆಲೆಯಲ್ಲಿ ದೇಶದ ಎಲ್ಲ ರೈಲುಗಳಿಗೆ RTIS (‘ರಿಯಲ್ ಟೈಂ ಇನ್ಪರ್ಮೇಷನ್ ಸಿಸ್ಟಂ’) ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.ಈಗಾಗಲೇ ದೇಶದ 2600 ರೈಲುಗಳಿಗೆ ಈ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ರೈಲ್ವೆ ಸಹಾಯಕ ಸಚಿವ ಸುರೇಶ್ ಅಂಗಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಆರ್ಟಿಐಎಸ್ ತಂತ್ರಜ್ಞಾನ ಅಳವಡಿಕೆಯಿಂದ ರೈಲು ಸಂಚಾರ ಹಾಗೂ ಸಂಚರಿಸುತ್ತಿರುವ ಮಾರ್ಗದ ಮೇಲೆ ನಿಗಾ ಇಡಬಹುದು. ಲೋಕೋ ಪೈಲಟ್ಗಳ ನಡುವೆ ದ್ವಿಮಾರ್ಗ ಸಂವಹನಕ್ಕೂ ಅವಕಾಶವಿದ್ದು, ಸಂಭಾವ್ಯ ಅಪಘಾತ, ಅನಾಹುತಗಳನ್ನು ತಪ್ಪಿಸಬಹುದು ಎಂದು ಸಾಂಖ್ಯ ಲ್ಯಾಬ್ಸ್ನ ಸಿಇಒ ಪರಾಗ್ ನಾಯಕ್ ತಿಳಿಸಿದರು.
ರೈಲು ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸೇವೆ: ಬೆಂಗಳೂರಿನ ವಿವಿಧೆಡೆಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ.ಕಾಡುಗುಡಿ, ಹೊಸಕೋಟೆ, ಅತ್ತಿಬೆಲೆ, ಸರ್ಜಾಪುರ, ಯಲಹಂಕ ಮತ್ತು ನಾಗವಾರಕ್ಕೆ ಪ್ರತಿನಿತ್ಯ ತಲಾ 9ರಂತೆ 54 ಟ್ರಿಪ್ ಬಸ್ ಸಂಚಾರವಿರಲಿದೆ. ಬಸ್ಗಳು ಬೆಳಗ್ಗೆ 6ರಿಂದ ರಾತ್ರಿ 10.30ರ ವರೆಗೆ ಕಾರ್ಯಾಚರಿಸಲಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ತಿಳಿಸಿದ್ದಾರೆ.