
ನವದೆಹಲಿ: ಗಾಂಧಿ ಕುಟುಂಬಕ್ಕೆ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ)ಯ ಭದ್ರತೆ ಹಿಂತೆಗೆದುಕೊಂಡಿರುವ ಕುರಿತು ಮಂಗಳವಾರ ಲೋಕಸಭೆಯಲ್ಲಿ ಶೂನ್ಯವೇಳೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿದರು.
ಶೂನ್ಯವೇಳೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸಭಾ ನಾಯಕ ಅಧಿರ್ ರಂಜನ್ ಚೌಧರಿ ಅವರು, ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆ ವಾಪಸ್ ಪಡೆಯುವ ವಿಷಯ ಪ್ರಸ್ತಾಪಿಸಿ ‘ಎಸ್‌ಪಿಜಿ ರಕ್ಷಣೆ, ಸಾಮಾನ್ಯ ರಕ್ಷಣೆಯಲ್ಲ.’ ಎಂದು ಹೇಳಿದರು.
ಡಿಎಂಕೆ ಸದಸ್ಯ ಟಿ ಆರ್ ಬಾಲು ಸಹ ಶೂನ್ಯವೇಳೆಯಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದರು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್, ಡಿಎಂಕೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು ಸದನದ ಬಾವಿಗೆ ಇಳಿದು ‘ಪ್ರತಿಪಕ್ಷಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ’, ‘ಸರ್ವಾಧಿಕಾರಕ್ಕೆ ಅಂತ್ಯ ಹಾಡಿ’ ಎಂಬ ಘೋಷಣೆಗಳನ್ನು ಕೂಗಿದರು.