ನವದೆಹಲಿ: ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ತೋರಿದೆ. ಇದೇ ವೇಳೆ ಪಕ್ಷದ ಒಂದು ಬಣಕ್ಕೆ ಈ ಫಲಿತಾಂಶ ನಿರೀಕ್ಷಿಸದೇ ಬಂದ ಭಾಗ್ಯವಾಗಿದೆ. ಬಹಿರಂಗವಾಗಿ ಸಂತಸ ಹಂಚಿಕೊಳ್ಳಲು ಸಾಧ್ಯವಾಗದಿದ್ದರೂ ಒಳಗೊಳಗೆ ಒಂದು ತರದ ನೆಮ್ಮದಿ , ಸಮಾಧಾನ ಮನೆ ಮಾಡಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ವಿರೋಧಿ ಬಣದ ಮಾನಸಿಕ ಸ್ಥಿತಿ.
ಕಾಂಗ್ರೆಸ್ ರಾಜ್ಯ ಘಟಕಕ್ಕೆ ವಸ್ತುಶ: ಹೈಕಮಾಂಡ್ ನಂತೇ ವರ್ತಿಸುತ್ತಿದ್ದ ಸಿದ್ಧರಾಮಯ್ಯ ಅವರಿಗೆ ಸಹಜವಾಗಿ ಈ ಫಲಿತಾಂಶ ಆಘಾತ ತಂದೊಡ್ಡಿದೆ. ಕೈ ಗೆ ಗುಡ್ ಬೈ ಹೇಳಿ ಕಮಲದ ಕಡೆ ಹಾರಿದವರಲ್ಲಿ ಸಿದ್ಧರಾಮಯ್ಯ ಆಪ್ತ ಶಾಸಕರ ಸಂಖ್ಯೆಯೇ ಹೆಚ್ಚಾಗಿತ್ತು. ಇದು ಅಪವಾದಕ್ಕೆ ಕೂಡ ಕಾರಣವಾಗಿತ್ತು. ಸಿದ್ಧರಾಮಯ್ಯ ಅವರ ಒತ್ತಾಸೆಯಿಂದಲೇ ಶಾಸಕರ ಪಕ್ಷಾಂತರ ನಡೆದಿದೆ ಎಂದು ಹೈಕಮಾಂಡ್ ಗೆ ಕೂಡ ದೂರು ನೀಡಲಾಗಿತ್ತು. ಈ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದ ಸಿದ್ಧರಾಮಯ್ಯ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುವುದಾಗಿ ಘರ್ಜಿಸಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದೆ. ಸಿದ್ಧರಾಮಯ್ಯ ಅವರ ಮ್ಯಾಜಿಕ್ ನಡೆದಿಲ್ಲ. ಇದು ಸಹಜವಾಗಿಯೇ ಸಿದ್ದರಾಮಯ್ಯ ಬಣಕ್ಕೆ ಒಂದು ಸೂಕ್ತ ವೇದಿಕೆ ಕಲ್ಪಿಸಿದೆ. ತಲೆ ದಂಡಕ್ಕೆ ಕೂಗು ಕೇಳಿ ಬರುತ್ತಿದೆ.
ಸಿದ್ಧರಾಮಯ್ಯ ಮುಂದಿನ ನಡೆ ಏನು?
ಸಿದ್ದರಾಮಯ್ಯ ಅನಿರೀಕ್ಷಿತ ಫಲಿತಾಂಶದಿಂದ ಕಂಗೆಟ್ಟಿದ್ದಾರೆ. ನೈತಿಕತೆಯ ಪ್ರಶ್ನೆ ಮುಂದಿಟ್ಟು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ತಕ್ಷಣ ಅದನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕರಿಸುವ ಸಾಧ್ಯತೆ ತೀರಾ ಕಡಿಮೆ. ಸಿದ್ದರಾಮಯ್ಯ ವಿರೋಧಿ ಬಣ ಸದ್ಯಕ್ಕೆ ಗುರಿ ನೆಟ್ಟಿರುವುದು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹುದ್ದೆ. ಮೊದಲಿಗೆ ಪಕ್ಷದ ಆಯಕಟ್ಟಿವ ಹುದ್ದೆಯ ಮೇಲೆ ನಿಯಂತ್ರಣ ಸಾಧಿಸಬೇಕು. ಬಳಿಕ ದಾಳಗಳನ್ನು ಒಂದೊಂದಾಗಿ ಉರುಳಿಸಬೇಕು. ಇದು ವಿರೋಧಿ ಬಣದ ಲೆಕ್ಕಾಚಾರ. ಉಪ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ಸೇರಿದಂತೆ ಸಿದ್ದರಾಮಯ್ಯ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೀನಾಯ ಸೋಲಿನ ಹೊಣೆಯನ್ನು ಅವರೇ ಹೊತ್ತುಕೊಳ್ಳಬೇಕು. ಇಲ್ಲಿ ಸಾಮೂಹಿಕ ನಾಯಕತ್ವದ ಪರಿಕಲ್ಪನೆಯಲ್ಲಿ ಪ್ರಚಾರ ನಡೆದಿಲ್ಲ. ಇದು ಸಿದ್ದರಾಮಯ್ಯ ವಿರೋಧಿ ಬಣದ ಗಂಭೀರ ಆರೋಪ
ಅಹಿಂದದ ಮರು ಹುಟ್ಟು ಚಿಂತನೆ:
ಸಿದ್ದರಾಮಯ್ಯ ಅವರ ಯಶಸ್ಸಿನ ಹಿಂದೆ ಕೆಲಸ ಮಾಡಿದ್ದು ಅಹಿಂದ ಚಳುವಳಿ. ಕಾಂಗ್ರೆಸ್ ನಿಂದ ದೂರ ಸರಿದಿದ್ದ ಹಿಂದುಳಿದವರನ್ನು ಮತ್ತೆ ಕರೆ ತಂದು ಅವರಿಗೆ ರಾಜಕೀಯ ಧ್ವನಿ ನೀಡುವ ಕೆಲಸಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಇದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಕೂಡ ಗಳಿಸಿದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದುಳಿದ ಮತಗಳು ಹರಿದು ಹಂಚಿ ಹೋಗಿವೆ. ಬಹುಪಾಲು ಮತ ಬಿಜೆಪಿ ಕಡೆ ಹೊರಳಿದೆ.ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಅಹಿಂದದ ಮೊರೆ ಹೋಗುವರೆ ಎಂಬ ಪ್ರಶ್ನೆ ಇದರೊಂದಿಗೆ ತಳಕು ಹಾಕಿಕೊಂಡಿದೆ.
ಕತ್ತಿ ಗುರಾಣಿ ಹಿಡಿದು ಯುದ್ದಕ್ಕೆ ಸಿದ್ಧವಾಗಿರುವ ಮೂಲ ಕಾಂಗ್ರೆಸ್ ನಾಯಕರ ರಾಜಕೀಯ ಪಟ್ಟುಗಳನ್ನು ಸಿದ್ದರಾಮಯ್ಯ ಮೊದಲಿಗೆ ಎದುರಿಸಬೇಕಾಗಿದೆ. ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಇದಕ್ಕೆ ಬಳಸಬೇಕಾಗುತ್ತದೆ. ಇಲ್ಲಿ ಹೈಕಮಾಂಡ್ ವರ ಕೂಡ ನಿರ್ಣಾಯಕ. ದೆಹಲಿ ವರಿಷ್ಟರ ಕೃಪೆ ಇರುವ ತನಕ ಸಿದ್ದರಾಮಯ್ಯ ಸೇಫ್.. ಈ ರಕ್ಷಾಕವಚ ಮುರಿದು ಬಿದ್ದರೆ ಸಿದ್ಧರಾಮಯ್ಯ ಏಕಾಂಗಿ..ಯುದ್ಧಭೂಮಿಯಲ್ಲಿ ರಾಜಕೀಯ ಅಭಿಮನ್ಯುವಿನ ಪಾತ್ರ ಖಚಿತ.