ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗಿದೆ. ಇದರೊಂದಿಗೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ನೇರ ಪೈಪೋಟಿಗೆ ವೇದಿಕೆ ಸಿದ್ದವಾಗಿದೆ. ದೇಶದ ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಬಿಜೆಪಿಯ ಪ್ರತಿಸ್ಪರ್ಧಿಗಳಾಗಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕ್ರೇಜಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಎದುರಾಳಿ. ಭಾರತೀಯ ರೆವೆನ್ಯೂ ಸರ್ವಿಸ್ ಅಧಿಕಾರಿಯಾಗಿದ್ದ ಅರವಿಂದ ಕ್ರೇಜಿವಾಲ್, ಆರಂಭದಲ್ಲಿ ಅಣ್ಣಾ ಹಜಾರೆ ನೇತೃತ್ವದ ಗರಡಿಯಲ್ಲಿ ಪಳಗಿದವರು. ಆರಂಭದಲ್ಲಿ ಅಣ್ಣಾ ಹಜಾರೆಯೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದರೂ ಬಳಿಕ ಅಂತರ ಕಾಯ್ದುಕೊಂಡಿದ್ದರು. ಇನ್ನು ಆಡಳಿತ ವಿಷಯಕ್ಕೆ ಬರುವುದಾದರೆ ಅರವಿಂದ್ ಕ್ರೇಜಿವಾಲ್ ಸರ್ಕಾರ ಶೈಕ್ಷಣಿಕ ರಂಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದೆ. ದೆಹಲಿಯ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲ. ಅತ್ಯಂತ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯ ಹೀಗೆ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಿ ಹೆಸರು ವಾಸಿಯಾಗಿವೆ. ಆರೋಗ್ಯ ಕ್ಷೇತ್ರದಲ್ಲಿಯೂ ಕ್ರೇಜಿವಾಲ್ ಸರ್ಕಾರದ ಸಾಧನೆ ಅತ್ಯುತ್ತಮವಾಗಿದೆ. ಮೊಹಲ್ಲ ಕ್ಲಿನಿಕ್ ಎಂಬ ವೈದ್ಯಕೀಯ ಸೇವೆ ಪರಿಚಯಿಸಿ ತಳಮಟ್ಟದಲ್ಲಿ ವೈದ್ಯಕೀಯ ಸೇವೆ ಒದಗಿಸಿದ ಕೀರ್ತಿ ಕ್ರೇಜಿವಾಲ್ ಸರ್ಕಾರಕ್ಕಿದೆ.
ಇನ್ನು ಬಿಜೆಪಿಗೆ ಕೇಂದ್ರ ಸರ್ಕಾರದ ಸಾಧನೆಯೇ ಶ್ರೀ ರಕ್ಷೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೇ ಬಿಜೆಪಿಯ ಸಂಘಟನೆಯ ಶಕ್ತಿ. ಪೌರತ್ವ ಕಾನೂನು ತಿದ್ದುಪಡಿ, ಸಂವಿಧಾನದ 370ನೇ ವಿಧಿ ರದ್ದತಿ ಹೀಗೆ ರಾಷ್ಟ್ರೀಯ ವಿಚಾರ ಧಾರೆಗಳೇ ಬಿಜೆಪಿಯ ಚುನಾವಣಾ ಅಸ್ತ್ರ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಇದು ರಾಜಕೀಯ ಸವಾಲು. ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಅದಕ್ಕೂ ಮೊದಲು ಮಹಾರಾಷ್ಟ್ರದಲ್ಲಿ ಕೂಡ ಬಿಜೆಪಿ ಅಧಿಕಾರದಿಂದ ವಂಚಿತವಾಗಿತ್ತು. ಹೀಗೆ ಸಾಲು ಸಾಲು ಸೋಲುಗಳ ಮಧ್ಯೆ ಬಿಜೆಪಿಗೆ ಇದು ಪ್ರಮುಖ ರಾಜಕೀಯ ಸವಾಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂಗಿನಡಿ ದೆಹಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯನ್ನು ಬಿಜೆಪಿ ಅತ್ಯಂತ ಪ್ರತಿಷ್ಟೆಯಾಗಿ ಪರಿಗಣಿಸಿದೆ. ಫೆಬ್ರವರಿ 11ರಂದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ