ಹೈದರಬಾದ್: ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಮತ್ತೆ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಹಿಂದೆ ಬಿಜೆಪಿಯನ್ನು ಅದರಲ್ಲೂ ಮುಖ್ಯವಾಗಿ ಅಮಿತ್ ಶಾ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದ ನಾಯ್ಡು ಸದ್ಯಕೆ ಮೌನಿಯಾಗಿದ್ದಾರೆ. ಇದಕ್ಕೆ ಮುನ್ನುಡಿ ಎಂಬಂತೆ ವಿವಾದೀತ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ರಾಜ್ಯಸಭೆಯಲ್ಲಿ ಮಸೂದೆಯ ಪರ ಮತ ಚಲಾಯಿಸುವಂತೆ ಪಕ್ಷದ ಸದಸ್ಯರಿಗೆ ಸೂಚನೆ ನೀಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ವೈ ಎಸ್ ಆರ್ ಕಾಂಗ್ರೆಸ್ ಕೂಡ ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಎದುರು ಹಾಕಿಕೊಳ್ಳುವುದು ಸದ್ಯಕ್ಕೆ ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ನಾಯ್ಡು ಬಂದಿದ್ದಾರೆ.