ಮಹಾರಾಷ್ಟ್ರದಲ್ಲಿ ರಿಮೋಟ್ ಕಂಟ್ರೋಲ್ ಮೂಲಕವೇ ಆಡಳಿತ ನಡೆಸುತ್ತಿದ್ದ ಠಾಕ್ರೆ ಪರಿವಾರ ಇದೇ ಮೊದಲ ಬಾರಿಗೆ ನೇರವಾಗಿ ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ. ಪರಿವಾರದ ಸದಸ್ಯರು ಅಧಿಕಾರಕ್ಕೆ ಅಂಟಿಕೊಳ್ಳಬಾರದು. ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು. ಇದು ಶಿವಸೇನಾ ದ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಪಷ್ಟ ನುಡಿಯಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಇದೇ ಮೊದಲ ಬಾರಿಗೆ ಶಿವಸೇನೆ ತನ್ನ ಸಂಪ್ರದಾಯವನ್ನು ಮುರಿದಿದೆ. ಹಠಕ್ಕೆ ಬಿದ್ದು ಮಹಾರಾಷ್ಟ್ರದ ಸಿಎಂ ಪಟ್ಟ ದಕ್ಕಿಸಿಕೊಳ್ಳುವಲ್ಲಿ ಉದ್ಧವ್ ಠಾಕ್ರೆ ಯಶಸ್ವಿಯಾಗಿದ್ದಾರೆ. ನಾಳೆ ಸಂಜೆ ಉದ್ದವ್ ಠಾಕ್ರೆ ಪ್ರಮಾಣವಚನ ಸಮಾರಂಭ ನಡೆಯಲಿದೆ.
1960, ಜುಲೈ 27ರಂದು ಜನಿಸಿದ ಉದ್ದವ್ ಠಾಕ್ರೆಗೆ ಬಾಳಾ ಸಾಹೇಬ್ ಠಾಕ್ರೆಯೇ ರಾಜಕೀಯ ಗುರು. ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಠಾಕ್ರೆ, ತಮ್ಮ ತಂದೆಯ ಬಳಿ ಎಲ್ಲ ರಾಜಕೀಯ ಪಟ್ಟುಗಳನ್ನು ಕಲಿತರು. ಮಹಾರಾಷ್ಟ್ರದ ಅಸ್ಮಿತೆಯ ಹೋರಾಟಗಾರನಾಗಿ ತಮ್ಮನ್ನು ಪರಿವರ್ತಿಸಿಕೊಂಡರು.
ಕಟ್ಟಾ ಹಿಂದುತ್ವವಾದಿ ಪಕ್ಷ ಎಂದು ಗುರುತಿಸಿಕೊಂಡಿದ್ದ ಶಿವಸೇನೆ ಪ್ರಸಕ್ತ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷದ ಬದ್ದ ರಾಜಕೀಯ ವೈರಿಯೆಂದೇ ಬಿಂಬಿತವಾಗಿದ್ದ ಶಿವಸೇನಾ ಅಚ್ಚರಿಯ ಬೆಳವಣಿಗೆಯಲ್ಲಿ ಅದರ ಜೊತೆಗೆ ಮೈತ್ರಿ ಮಾಡಿಕೊಂಡಿದೆ.
ರಾಜಕೀಯ ಹೊರತಾಗಿ ಉದ್ದವ್ ಠಾಕ್ರೆಯ ಹವ್ಯಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ ಅವರು ಪೋಟೋಗ್ರಾಫಿಯನ್ನು ಇಷ್ಟಪಡುತ್ತಿದ್ದಾರೆ. ಛಾಯಾಚಿತ್ರಗಾರಿಕೆ ಅವರ ಮೆಚ್ಚಿನ ಹವ್ಯಾಸ. ಪತ್ನಿ ರಶ್ಮಿ ಠಾಕ್ರೆ. ಇಬ್ಬರು ಪುತ್ರರನ್ನೊಳಗೊಂಡ ಚಿಕ್ಕ ಕುಟುಂಬ. ಇದು ಉದ್ಧವ್ ಠಾಕ್ರೆಯ ಕುಟುಂಬ ಪರಿಚಯ
ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಕಾರ ಶಿವಸೇನಾ ನೇತೃತ್ವದ ಸರ್ಕಾರ ಮೂರು ಚಕ್ರದ ಗಾಡಿ. ಇದುವೇ ಶಿವಸೇನಾಕ್ಕೆ ಮುಂದಿರುವ ಭಾರೀ ಸವಾಲು. ಭಿನ್ನ ಭಿನ್ನ ಸಿದ್ದಾಂತಗಳನ್ನು ಅನುಸರಿಸುತ್ತಿರುವ ಮೂರು ಪಕ್ಷಗಳು ಅಧಿಕಾರಕ್ಕಾಗಿ ಕೈ ಜೋಡಿಸಿವೆ. ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಸಿದ್ದಪಡಿಸಿವೆ. ಈ ಸಾಮಾನ್ಯ ಕನಿಷ್ಚ ಕಾರ್ಯಕ್ರಮ ಹಳಿ ತಪ್ಪಿದರೆ, ಮೂರು ಚಕ್ರಗಳು ಮೂರು ದಾರಿಯಲ್ಲಿ ಚಲಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ಎಲ್ಲ ಸವಾಲುಗಳನ್ನು ಉದ್ಧವ್ ಠಾಕ್ರೆ ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರ ಯಶಸ್ಸು ನೆಲೆ ನಿಂತಿದೆ.