• ಬಹುಮತ ಸಾಬೀತಿಗೆ ಮುನ್ನವೇ ಸರ್ಕಾರ ಪತನ
ಮುಂಬೈ: ಮಹಾರಾಷ್ಟ್ರ ರಾಜಕೀಯ ಕ್ಷಣಕ್ಕೊಂದು ತಿರುವು ಪಡಯುತ್ತಿದ್ದು, ಡಿಸಿಎಂ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ರಾಜೀನಾಮೆ ನೀಡಿದ್ದಾರೆ.
ಅಜಿತ್ ಪವಾರ್ ನೀಡಿದ ಬೆಂಬಲ ಪತ್ರ ನಂಬಿದ್ದಕ್ಕೆ ಇಂದು ರಾಜೀನಾಮೆ ನೀಡುವ ಸ್ಥಿತಿ ಉದ್ಭವವಾಯಿತು ಎಂದು ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಳಿಕ ದೇವೇಂದ್ರ ಫಡ್ನವೀಸ್ ಹೇಳಿದರು.
ಬಿಜೆಪಿಯೇ ಬಹುದೊಡ್ಡ ಪಕ್ಷವಾಗಿದ್ದು, ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ಶಿವಸೇನೆಯ ಅಸಹಕಾರದಿಂದಾಗಿ ಆಡಳಿತ ನೀಡಲು ಸಾಧ್ಯವಾಗುತ್ತಿಲ್ಲ. ಅಪವಿತ್ರ ಮೈತ್ರಿಯಿಂದಾಗಿ ಇಂದು ಬಿಜೆಪಿ ಆಡಳಿತ ನಡೆಸಲಾಗುತ್ತಿಲ್ಲ. ಆದರೆ ವಿರೋಧ ಪಕ್ಷದಲ್ಲಿದ್ದು ರಚನಾತ್ಮಕ ಕೆಲಸದಲ್ಲಿ ತೊಡಗುವುದಾಗಿ ಹೇಳಿದರು.
ಮಂಗಳವಾರ ಬೆಳಗ್ಗೆ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಬುಧವಾರ ಸಂಜೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಬಹುಮತ ಸಾಬೀತಿಗೆ ಮುನ್ನವೇ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜೀನಾಮೆ ನೀಡುವುದರೊಂದಿಗೆ ದೇವೇಂದ್ರ ಫಡ್ನವೀಸ್ ಸರ್ಕಾರ ಪತನವಾದಂತಾಗಿದೆ.
ಈ ಮದ್ಯೆ, ಮಂಗಳವಾರ ಸಂಜೆ ಮುಂಬೈನ ಟ್ರೈಡೆಂಟ್ ಹೋಟೆಲ್‍ನಲ್ಲಿ ಮೈತ್ರಿ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ನಡೆಯಲಿದೆ. ಉದ್ಧವ್ ಠಾಕ್ರೆ ಮೈತ್ರಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದ್ದು, ಎನ್ಸೀಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಂಭವವಿದೆ.