- ಮುಂಬೈ ದಾಳಿ ಒಂದು ಹಿನ್ನೋಟ
ಅದು 2008 ನವೆಂಬರ್ 26. ದೇಶದ ವಾಣಿಜ್ಯ ರಾಜಧಾನಿ ಮಾಯಾ ನಗರಿ ಮುಂಬೈ ನಾಗರಿಕರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ನಿರತರಾಗಿದ್ದರು. ವಿಲಾಸಿ ಬದುಕಿಗೆ ಹೆಸರಾಗಿದ್ದ ದಕ್ಷಿಣ ಮುಂಬೈ ಸಂಜೆಯ ಸೂರ್ಯಾಸ್ತಮಾನವನ್ನು ಎದುರು ನೋಡುತ್ತಿತ್ತು. ಆದರೆ ಅಂದು ಮುಂಬೈ ಮಹಾನಗರದ ಹಣೆಬರಹ ಚೆನ್ನಾಗಿರಲಿಲ್ಲ. ಇದಕ್ಕಿದ್ದ ಹಾಗೆ ಮುಂಬೈ ಮಹಾ ನಗರಕ್ಕೆ ದಾಳಿ ಇಟ್ಟ ಉಗ್ರರು ತಮ್ಮ ಪೈಶಾಚಿಕ ಕೃತ್ಯ ಆರಂಭಿಸಿದರು.
ಮುಂದಿನ ನಾಲ್ಕು ದಿನಗಳ ಕಾಲ ಮುಂಬೈ ಮಹಾ ನಗರ ಅಕ್ಷರಶ ಉಗ್ರರ ಒತ್ತೆ ಸೆರೆಯಲ್ಲಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ದೇಶದ ಭದ್ರತಾ ವೈಫಲ್ಯಕ್ಕೆ ಇದು ಕೈ ಗನ್ನಡಿಯಾಗಿದ್ದರೇ, ದೇಶದ ಎಲ್ಲ ನಾಗರಿಕರು ಭಯದಿಂದ ತತ್ತರಿಸಿ ಹೋಗಿದ್ದರು. ಭಯೋತ್ಪಾದಕರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದರೇ ಮುಂಬೈ ಪೊಲೀಸರ ಬಳಿ ಇದ್ದದ್ದು ಒಬೀ ರಾಯನ ಕಾಲದ ರೈಫಲ್ಸ್. ಕೇಂದ್ರ ಸರ್ಕಾರ ಎನ್ ಎಸ್ ಜಿ ಕಮಾಂಡೋಗಳನ್ನು ಮುಂಬೈಗೆ ರವಾನಿಸಿದ ಬಳಿಕ ಭಯೋತ್ಪಾದಕರ ವಿರುದ್ಧದ ನೇರ ಕಾರ್ಯಾಚರಣೆ ಆರಂಭವಾಯಿತು
ಛತ್ರಪತಿ ಶಿವಾಜಿ ಟರ್ಮಿನಲ್, ದಿ ಒಬೇರಾಯ್ ಟ್ರಿಡೆಂಟ್, ತಾಜ್ ಪ್ಯಾಲೇಸ್, ಗಾಮಾ ಆಸ್ಪತ್ರೆ, ದಿ ನರೀಮನ್ ಹೌಸ್ ಹೀಗೆ ಎಲ್ಲೆಡೆ ಮೊಳಗಿದ್ದು ಗುಂಡಿನ ಮೊರೆತ.
ಸತತ ನಾಲ್ಕು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಲಷ್ಕರ್ ಎ ತಯ್ಯಾಬ ಸಂಘಟನೆಗೆ ಸೇರಿದ ಎಲ್ಲ ಉಗ್ರರನ್ನು ಯಮಪುರಿಗೆ ಕಳುಹಿಸಲಾಯಿತು. ಹತ್ತು ಮಂದಿ ಉಗ್ರರ ಪೈಕಿ 9 ಮಂದಿ ಹತರಾದರೇ ಒರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು. ಆತನೆ ಕಸಾಬ್. ತಮ್ಮ ಪ್ರಾಣದ ಹಂಗು ತೊರೆದು ಮುಂಬೈ ಪೊಲೀಸ್ ಸಿಬ್ಬಂದಿಯೊಬ್ಬರು ಆತನನ್ನು ಜೀವಂತವಾಗಿ ಸೆರೆ ಹಿಡಿದರು. ಸುದೀರ್ಘ ವಿಚಾರಣೆ ಬಳಿಕ ಕಸಬ್ ನನ್ನು ಗಲ್ಲಿಗೇರಿಸಲಾಯಿತು.
ಮುಂಬೈನಲ್ಲಿ ಭಯೋತ್ಪಾದಕರು ನಡೆಸಿದ ಮಾರಣ ಹೋಮದಲ್ಲಿ 175ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಹಲವು ಮಂದಿಯ ಕನಸು ಶಾಶ್ವತವಾಗಿ ಭಗ್ನವಾಯಿತು. ದೇಶದ ಏಕತೆ ಮತ್ತು ಸಮಗ್ರತೆ ರಕ್ಷಿಸಲು ಎನ್ ಎಸ್ ಜಿ ಕಮಾಂಡೋ ಸದಸ್ಯರು ಸೇರಿದಂತೆ ಹಲವು ಯೋಧರು ತಮ್ಮ ಪ್ರಾಣವನ್ನು ಅರ್ಪಿಸಿದರು.
ಮುಂಬೈ ಭಯೋತ್ಪಾದಕರ ದಾಳಿ ದೇಶಕ್ಕೆ ಎಚ್ಚರಿಕೆಯ ಕರೆ ಗಂಟೆಕೂಡ ಆಗಿತ್ತು. ದೇಶದ ಭದ್ರತಾ ವ್ಯವಸ್ಥೆಯಲ್ಲಿನ ಲೋಪವನ್ನು ಇದು ಜಗಜ್ಜಾಹೀರು ಗೊಳಿಸಿತ್ತು. ಮುಂಬೈ ದಾಳಿ ಮತ್ತೆ ಮರುಕಳಿಸದಿರಲಿ…ಯಾವುದೇ ದೇಶ ಅಥವಾ ವ್ಯಕ್ತಿ ಭಾರತದ ವಿರುದ್ಧ ದುಸ್ಸಾಹಸಕ್ಕೆ ಮುಂದಾದರೆ ಅದನ್ನು ಬೇರು ಸಮೇತ ನಿರ್ಮೂಲನೆಗೊಳಿಸುವ ಶಕ್ತಿ ಈ ಮಹಾನ್ ದೇಶಕ್ಕಿದೆ. ಈ ಸಂದೇಶವನ್ನು ಒಗ್ಗಟ್ಟಿನಿಂದ ದೇಶದ ಜನತೆ ಉದ್ಘೋಷಿಸಬೇಕಿದೆ. ಇದುವೇ ತಮ್ಮ ಪ್ರಾಣ ಬಲಿದಾನ ಮಾಡಿದ ವೀರ ಯೋಧರಿಗೆ ನಾವು ಸಲ್ಲಿಸುವ ನಮನ.