ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಿಂದ ಎಚ್ಚೆತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುಳ್ಳು ವದಂತಿಗಳನ್ನು ಹಬ್ಬಿಸುವವರಿಂದ ದೂರವಿರುವಂತೆ ಮತ್ತು ಪಟ್ಟಬದ್ಧ ಹಿತಾಸಕ್ತಿಗಳಿಗೆ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡದಂತೆ ಮನವಿ ಮಾಡಿದ್ಧಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಪಟ್ಟಬದ್ಧ ಹಿತಾಸಕ್ತಿಗಳು ನಮ್ಮನ್ನು ವಿಭಜಿಸಿ ಅಶಾಂತಿ ಉಂಟುಮಾಡಲು ನಾವು ಅವಕಾಶ ಕೊಡಬಾರದು. ಇದು ಶಾಂತಿ, ಒಗ್ಗಟ್ಟು ಮತ್ತು ಸಹೋದರತೆಯನ್ನು ಕಾಪಾಡುವ ಸಮಯ. ನಾನು ಪ್ರತಿಯೊಬ್ಬರಿಗೂ ಸುಳ್ಳು ಸುದ್ದಿ ಹಬ್ಬಿಸುತ್ತಿರವವರಿಂದ ದೂರವಿರುವಂತೆ ಮನವಿ ಮಾಡುತ್ತೇನೆ” ಎಂದು ಕೋರಿದ್ದಾರೆ.