ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯುತ್ತಿದ್ದಂತೆ ಅಸ್ಸಾಂನಲ್ಲಿ ಬುಗಿಲೆದ್ದಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಹಿಂಸಾಚಾರದಲ್ಲಿ ಮೂವರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
ಬುಧವಾರ ಸಂಜೆ ಬಿಲ್ ಅಂಗೀಕಾರವಾದ ನಂತರ ಗುವಾಹಟಿ ಸೇರಿ ಹಲವು ಕಡೆಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಆದರೆ ಗುರುವಾರ ಅದನ್ನು ಧಿಕ್ಕರಿಸಿ ಸಾವಿರಾರು ಜನ ಪ್ರತಿಭಟನಾಕಾರರು ರಸ್ತೆಗಿಳಿದು ಹೋರಾಟ ಶುರು ಮಾಡಿದ್ದರು. ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು ಸಂಜೆ ಫೈರಿಂಗ್ ಮಾಡಿದಾಗ ಗುಂಡು ತಗುಲಿಸ ಮೂವರು ಸಾವನ್ನಪ್ಪಿದ್ದಾರೆ.
ಆಸ್ಸಾಂನ 10 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೌಕರ್ಯವನ್ನು ಮುಂದಿನ 48 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ನಾಲ್ಕು ಪ್ರದೇಶಗಳಲ್ಲಿ ಯೋಧರನ್ನು ನಿಯೋಜಿಸಲಾಗಿದೆ.