ಮುಂಬೈ: ಕೊರೋನಾ ಅಟ್ಟಹಾಸಕ್ಕೆ ಮಹಾರಾಷ್ಟ್ರ ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಆಗಸ್ಟ್ 31ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಗುರುವಾರ ಮಹಾರಾಷ್ಟ್ರದಲ್ಲಿ ಒಂದೇ ದಿನ ಬರೋಬ್ಬರಿ 11147 ಮಂದಿಗೆ ಕೊರೋನಾ ವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 411798ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 266 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ರಾಜ್ಯದಲ್ಲಿ ಮಹಾಮಾರಿಯಿಂದಾಗಿ 14,729 ಮಂದಿ ಅಸುನೀಗಿದ್ದಾರೆ.
ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಕೊರೋನಾ ವಾರಿಯರ್ಸ್’ಗಳನ್ನೂ ಕೊರೋನಾ ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 138 ಪೊಲೀಸರಿಗೆ ಕೊರೋನಾ ಸೋಂಕು ತಗಲಿದೆ. ಮಹಾಮಾರಿಗೆ ಒಂದೇ ದಿನ ಇಬ್ಬರು ಪೊಲೀಸರು ಕೊನೆಯುಸಿರೆಳೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಇದುವರೆಗೂ ಒಟ್ಟು 9096 ಪೊಲೀಸರಿಗೆ ಸೋಂಕು ತಗಲಿದ್ದು, 7084 ಪೊಲೀಸರು ಗುಣಮುಖರಾಗಿದ್ದಾರೆ. 1912 ಸೋಂಕಿತ ಪೊಲೀಸರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಾಮಾರಿಗೆ ರಾಜ್ಯದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಮೃತಪಟ್ಟಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ.
ಬೆಂಗಳೂರಲ್ಲಿ 2233, ರಾಜ್ಯದಲ್ಲಿ 6,128 ಮಂದಿಗೆ ಸೋಂಕು, 83 ಜನ ಬಲಿ
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಈಗಾಗಲೇ 4 ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟು 4,11,798 ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 2,39,755 ಸೋಂಕಿತರು ಗುಣಮುಖರಾಗಿದ್ದಾರೆ. 1,46,129 ಕೊರೋನಾ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ ಕೊರೋನಾಗೆ 14,729 ಮಂದಿ ಅಸುನೀಗಿದ್ದಾರೆ.