ನವದೆಹಲಿ: ಕೊರೋನಾ ಸೋಂಕು ನಿಯಂತ್ರಣಕ್ಕೆ ದೆಹಲಿ ಸಿಎಂ ಗಡಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದ್ದರೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದೀಗ ದೆಹಲಿ ಮೆಟ್ರೋದ 20 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರೋದು ಧೃಡಪಟ್ಟಿದೆ.
ದೆಹಲಿ ಡಿಎಂಆರ್ ಸಿ ವ್ಯವಸ್ಥಾಪಕ ಮಂಗು ಸಿಂಗ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರೋದನ್ನು ದೃಢಪಡಿಸಿದ್ದಾರೆ.
ಎನ್ ಸಿಆರ್ ನಲ್ಲಿ ವಾಸ್ತವ್ಯ ಹೂಡಿದ್ದ 20 ಸಿಬ್ಬಂದಿಗೆ ಕೊರೋನಾ ವೈರಸ್ ತಗುಲಿದೆ. ಅವರು ಕೂಡ ದೇಶದ ಜನತೆಯಂತೆ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದಲ್ಲಿ ವಿಜಯಶಾಲಿಯಾಗಿ ಅವರು ಸದ್ಯದಲ್ಲೇ ಸೇವೆಗೆ ಮರಳಲಿದ್ದಾರೆ ಎಂದು ಮಂಗು ಸಿಂಗ್ ಹೇಳಿದ್ದಾರೆ.
ಸಧ್ಯದಲ್ಲೇ ದೆಹಲಿ ಮೆಟ್ರೋ ಸಂಚಾರ ಆರಂಭಿಸುವ ಸಿದ್ಧತೆಯಲ್ಲಿದ್ದು ಇದಕ್ಕಾಗಿ ಆರೋಗ್ಯ ಕಾಪಾಡಿಕೊಳ್ಳುವಂತೆಯೂ ಸಿಂಗ್ ಹೇಳಿದ್ದಾರೆ.
ಮೆಟ್ರೋ ಸಿಬ್ಬಂದಿ ಕೋವಿಡ್ ಸೋಂಕಿಗೆ ತುತ್ತಾಗುವ ಮೂಲಕ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 25,004 ಕ್ಕೆ ಏರಿಕೆಯಾಗಿದೆ.