ಕಾಸರಗೋಡು: ಕಾಸರಗೋಡಿನಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಕಲ್ಯೋಟ್ನಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. 717 ವರ್ಷಗಳ ಬಳಿಕ ಕಲ್ಯೋಟ್ ಶ್ರೀ ಭಗವತಿ ಕ್ಷೇತ್ರ ಕಳಗಂನಲ್ಲಿ ಪೆರುಂಕಳಿಯಾಟ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಡಿಸೆಂಬರ್ 23ರಿಂದ 29ರ ತನಕ ಪೆರುಂಕಳಿಯಾಟ ನೆರವೇರಲಿದೆ..
ಪೆರುಂಕಳಿಯಾಟ ಹಲವು ಸಂಕೀರ್ಣ ಹಾಗೂ ವಿಶಿಷ್ಟವಾದ ವೈದಿಕ ವಿಧಿ ವಿಧಾನಗಳ ಆಗರವೂ ಆಗಿದೆ. ಬ್ರಹ್ಮ ಶ್ರೀ ಕೇಶವ ತಂತ್ರಿ ಮತ್ತು ಕೃಷ್ಣದಾಸ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿತು.
ದೈವಸ್ಥಾನದ ಪ್ರತಿರೂಪ- ಪೆರುಂಕಳಿಯಾಟ ಮಹೋತ್ಸವಕ್ಕೆ ಈಗಿರುವ ದೈವಸ್ಥಾನದ ಪ್ರತಿರೂಪವನ್ನು ಬಿದಿರಿನಿಂದ ನಿರ್ಮಿಸಲಾಗಿದೆ. ಇದು ಈ ಕಳಿಯಾಟದ ಪ್ರಮುಖ ಆಕರ್ಷಣೆಯಾಗಿದೆ. ಪೊಟ್ಟನ್ ದೈವ, ಗುರು ದೈವ, ರಕ್ತ ಚಾಮುಂಡಿ, ಭೈರವನ್, ರಕ್ತೇಶ್ವರಿ ಹೀಗೆ ಸುಮಾರು 52 ದೈವಗಳ ದರ್ಶನ ಭಾಗ್ಯ ಭಕ್ತರಿಗೆ ದೊರೆಯಲಿದೆ.
ಅಮ್ಮನಿಗೆ ಮಾಂಗಲ್ಯ ಸೂತ್ರ ಧಾರಣೆ ಈ ಪೆರುಂಕಳಿಯಾಟದ ಪ್ರಮುಖ ಕಾರ್ಯಕ್ರಮವಾಗಿದೆ. ಡಿಸೆಂಬರ್ 29ರಂದು ಬೆಳಿಗ್ಗೆ ಸಂಗ್ರಹಿಸಲಾದ 101 ಕಟ್ಟಿಗೆ ತುಂಡುಗಳಿಗೆ ಅಗ್ನಿ ಸ್ಪರ್ಶ ಬಳಿಕ ವಿಷ್ಣುಮೂರ್ತಿ ದೈವದ ಕೋಲ ನಡೆಯಲಿದೆ.