newsics.com
ವಿಶಾಖಪಟ್ಟಣ: 100 ಟನ್ ದೈತ್ಯನ ಪ್ರಾಚೀನ ಪೆಟ್ಟಿಗೆಯೊಂದು ಕಡಲತೀರಕ್ಕೆ ತೇಲಿಬಂದ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಸೆಪ್ಟೆಂಬರ್ 29 ರಂದು ದೊಡ್ಡ ಪುರಾತನ ಪೆಟ್ಟಿಗೆಯೊಂದು ದಡಕ್ಕೆ ಕೊಚ್ಚಿ ಬಂದಿದೆ ಎಂಬ ಸುದ್ದಿ ಸ್ಥಳೀಯವಾಗಿ ವೈರಲ್ ಆಗಿದೆ.
ಇದನ್ನು ನೋಡಲು ನೂರಾರು ಜನರು ನೆರೆದಿದ್ದರು. ಆ ಪೆಟ್ಟಿಗೆಯಲ್ಲಿ ಏನಾದರೂ ಬೆಲೆಬಾಳುವ ನಿಧಿ ಇರಬಹುದೇ ಎಂಬ ಚರ್ಚೆಯೂ ಪ್ರಬಲವಾಗಿ ಕೇಳಿಬಂದಿದೆ. ಮತ್ತೊಂದೆಡೆ, ಹಡಗುಗಳನ್ನು ಆಂಕರ್ ಮಾಡುವಾಗ, ಅವು ಜೆಟ್ಟಿಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಳಸುವ ಮರದ ದಿಮ್ಮಿ ತರಹದ್ದೇನಾದರೂ ಆಗಿರಬಹುದಾ? ಎಂದೂ ಕೆಲವರು ಹೇಳಿದ್ದಾರೆ.
ದೊಡ್ಡ ಪೆಟ್ಟಿಗೆಯೊಂದು ದಡದಲ್ಲಿ ಬಿದ್ದಿರುವ ಮಾಹಿತಿ ಮೇರೆಗೆ ಪೊಲೀಸರು ವೈಎಂಸಿಎ ಬೀಚ್ ಗೆ ಬಂದು ಕಾವಲು ಕಾಯುತ್ತಿದ್ದಾರೆ. ಯಾರೂ ಬಾಕ್ಸ್ ಮುಟ್ಟದಂತೆ ಎಚ್ಚರಿಕೆ ವಹಿಸಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಬಂದು ಬಾಕ್ಸ್ ತೆರೆಯುವ ಸಾಧ್ಯತೆ ಇದ್ದು, ಈಗಾಗಲೇ ಅವರಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಇಷ್ಟೊಂದು ಬೃಹತ್ ಪೆಟ್ಟಿಗೆ ದಡಕ್ಕೆ ಕೊಚ್ಚಿ ಬಂದಿರುವುದು ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲದೆ, ಆ ಪೆಟ್ಟಿಗೆಯ ಬಳಿ ಶ್ವಾನದಳ ಮತ್ತು ಬಾಂಬ್ ಸ್ಕ್ವಾಡ್ ಕೂಡ ಬಂದಿವೆ. ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಆದರೆ, ಇದು ಎಲ್ಲಿಂದ ಬಂತು ಎಂಬುದು ಅಧಿಕಾರಿಗಳಿಗೆ ಯಕ್ಷಪ್ರಶ್ನೆಯಾಗಿದೆ.