newsics.com
ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಹಿಳಾ ವರದಿಗಾರರೊಬ್ಬರ ಮೇಲೆ ಸಿಟ್ಟಾಗುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
ವರದಿಗಾರ್ತಿ ಜೊತೆ ಅಣ್ಣಾಮಲೈ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಮಾಧ್ಯಮ ಗೋಷ್ಠಿಯ ವೇಳೆ ಮಹಿಳಾ ರಿಪೋರ್ಟರ್ ಒಬ್ಬರು, ಒಂದು ವೇಳೆ ನಿಮ್ಮನ್ನು ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಸಿದರೆ ನೀವು ಬಿಜೆಪಿಯಲ್ಲೇ ಇರುತ್ತೀರಾ ಎಂದು ಪ್ರಶ್ನಿಸುತ್ತಾರೆ. ಪ್ರಶ್ನೆ ಕೇಳುತ್ತಿದ್ದಂತೆ ಸಿಡಿಮಿಡಿಗೊಂಡ ಅಣ್ಣಾಮಲೈ ದಯವಿಟ್ಟು ಬಂದು ನೀವು ನನ್ನ ಪಕ್ಕದಲ್ಲಿ ನಿಲ್ಲಿ. ಈ ಪ್ರಶ್ನೆ ಕೇಳಿದವರು ಯಾರು ಎಂದು ಜನತೆ ನೋಡಲಿ. ಇಂತಹ ಅದ್ಭುತ ಪ್ರಶ್ನೆ ಕೇಳಿದವರನ್ನು ಜನತೆ ಒಮ್ಮೆ ನೋಡಿ ಕಣ್ತುಂಬಿಕೊಳ್ಳಲಿ ಎಂದು ಹೇಳಿದ್ದಾರೆ.
ಕ್ಯಾಮರಾಗಳ ಮುಂದೆ ಬಂದು ನಿಲ್ಲುವಂತೆ ಅಣ್ಣಾಮಲೈ ಮಹಿಳಾ ರಿಪೋರ್ಟರ್ಗೆ ಪದೇ ಪದೇ ಹೇಳುತ್ತಿರುವುದು ಕಂಡು ಬರುತ್ತದೆ. ಅಣ್ಣಾಮಲೈ ನಡವಳಿಕೆಗೆ ಸಿಡಿಮಿಡಿಗೊಂಡ ಪತ್ರಕರ್ತರು ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಇದಕ್ಕೆ ಸಮರ್ಥನೆ ನೀಡಿದ ಅಣ್ಣಾಮಲೈ ಸರಿಯಾದ ರೀತಿಯಲ್ಲಿ ಪ್ರಶ್ನೆ ಕೇಳಲು ಹೇಳುತ್ತಿದ್ದೇನೆ ಇದರಲ್ಲಿ ತಪ್ಪೇನಿದೆ ಎಂದು ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.
ಅಣ್ಣಾಮಲೈ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೊಯಂಬತ್ತೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್. ಬಾಬು ಅಣ್ಣಾಮಲೈ ಅವರು ಪತ್ರಕರ್ತರನ್ನು ಪ್ರಶ್ನಿಸುವ ಮೊದಲು ತಾವು ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಎಂದು ತಿಳಿದುಕೊಳ್ಳಲಿ. ನಿಮ್ಮಿಂದ ಪತ್ರಿಕೋದ್ಯಮದ ತತ್ವ-ನೀತಿಗಳನ್ನು ಹೇಳಿಕೊಳ್ಳುವ ಅಗತ್ಯ ನಮ್ಮಗಿಲ್ಲ ಮೊದಲು ಸರಿಯಾಗಿ ಮಾತನಾಡುವುದನ್ನು ಕಲಿತುಕೊಳ್ಳಿ ಎಂದು ಚಾಟಿ ಬೀಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಅಣ್ಣಾಮಲೈ ನಡೆಗೆ ಟೀಕೆ ವ್ಯಕ್ತವಾಗಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.