Tuesday, January 26, 2021

ನಾಳೆಯೇ ಕಂಕಣ ಸೂರ್ಯಗ್ರಹಣ; ಬೆಂಗಳೂರಲ್ಲಿ ಕಾಣೋದು ಅನುಮಾನ

  • ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭ
  • 11 ಗಂಟೆ 3 ನಿಮಿಷಕ್ಕೆ ಮುಕ್ತಾಯ

ಬೆಂಗಳೂರು: ನಾಳೆ ಸಂಭವಿಸಲಿರುವ ಸೂರ್ಯಗ್ರಹಣ ಬಲು ಅಪರೂಪದ್ದು. ಇದು ಕಂಕಣ ಸೂರ್ಯಗ್ರಹಣ.
ದಕ್ಷಿಣ ಭಾರತದವರಿಗೆ ಶತಮಾನಕ್ಕೊಮ್ಮೆ ಒದಗುವ ಸುವರ್ಣಾವಕಾಶವಿದು. ಈ ಅವಕಾಶ ಕಳೆದುಕೊಂಡರೆ, ಈ ರೀತಿಯ ಸಂಪೂರ್ಣ ಸೂರ್ಯಗ್ರಹಣ ನೋಡಬೇಕಾದರೆ 2064 ಫೆಬ್ರವರಿ 17ರವರೆಗೆ ಕಾಯಬೇಕು.
ನಾಳೆ (ಡಿ.26) ಬೆಳಗ್ಗೆ 8 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭ. 11 ಗಂಟೆ 3 ನಿಮಿಷಕ್ಕೆ ಮುಕ್ತಾಯ. 9 ಗಂಟೆ 24 ನಿಮಿಷದ ಸುಮಾರಿಗೆ ಬರೇ ಒಂದು ನಿಮಿಷ ಮಾತ್ರ ಕಂಕಣ ಸೂರ್ಯಗ್ರಹಣ. 8 ಗಂಟೆ 4 ನಿಮಿಷದಿಂದ ಗ್ರಹಣ ಆರಂಭವಾಗಿ ಸೂರ್ಯನನ್ನು ಕತ್ತಲೆ ಆವರಿಸುತ್ತ 9 ಗಂಟೆ 24 ನಿಮಿಷಕ್ಕೆ ಸಂಪೂರ್ಣ ಕಪ್ಪಾಗುತ್ತದೆ. ಆದರೆ, ಚಂದ್ರ ಸೂರ್ಯನನ್ನು ಪೂರ್ತಿ ಮರೆಮಾಚಲಾರ. ಸೂರ್ಯನನ್ನು ಚಂದ್ರ ಶೇ.93 ಆವರಿಸಿದ್ದರೂ, ಸೂರ್ಯನ ಹೊರವಲಯ ತೆಳ್ಳಗಿನ ಬಿಳಿ ಬಳೆಯಂತೆ ಉಳಿಯುತ್ತದೆ. ಇದೇ ಕಂಕಣ ಸೂರ್ಯಗ್ರಹಣ (Annular solar eclipse). ಈ ಬಾರಿ ಸೂರ್ಯನಿಗೂ ಭೂಮಿಗೂ ಅಂತರ ಕಡಿಮೆ. ಆದ್ದರಿಂದ ಸೂರ್ಯ ದೊಡ್ಡದಾಗಿರುತ್ತಾನೆ.
ಒಂದು ಕ್ಷಣ ಹಗಲಲ್ಲೇ ಕತ್ತಲು. ಈ ದಿನ ಸೂರ್ಯನ ಸಮೀಪವಿರುವ ಗುರು, ಶುಕ್ರ ಹಾಗೂ ಶನಿ ಗ್ರಹಗಳು ಕೂಡ ಹಗಲಿನಲ್ಲಿ ಕಾಣಬಹುದು. ನಕ್ಷತ್ರಗಳೂ ಕಾಣಬಹುದು. ಆದರೆ ಇವೆಲ್ಲ ಸಾಧ್ಯವಾಗುವುದು ಹವಾಮಾನ ವೈಪರೀತ್ಯ ಇಲ್ಲದಿದ್ದಾಗ ಮಾತ್ರ. ಮೋಡ ಕವಿದರೆ ಆಕಾಶದಲ್ಲಿ ನಡೆಯುವ ವಿಸ್ಮಯ ನಮ್ಮ ಕಣ್ತಪ್ಪಲಿದೆ.
ಗ್ರಹಣಾರಂಭ ಎಲ್ಲಿ?
ಈ ಗ್ರಹಣ ಸೌದಿ ಅರೇಬಿಯಾದಲ್ಲಿ ಆರಂಭವಾಗುತ್ತದೆ. ಓಮನ್‌ನಿಂದ ದಕ್ಷಿಣಭಾರತದ ಮೂಲಕ ಶ್ರೀಲಂಕಾದ ಮೇಲಿನಿಂದ ಇಂಡೋನೇಷ್ಯಾ, ಸಿಂಗಾಪುರ, ಮರೀನಾ ಐಲ್ಯಾಂಡ್‌ ತಲುಪಿ, ಮುಂದೆ ಅಂತ್ಯವಾಗಲಿದೆ. ಸುಮಾರು ಬರೇ 118 ಕಿ. ಮೀ. ಅಗಲದ ಆಕಾಶ ಹಾದಿಯಲ್ಲಿ ಕಂಕಣ ಸೂರ್ಯಗ್ರಹಣ. ದೆಹಲಿಯಲ್ಲೂ ಪಾರ್ಶ್ವ ಸೂರ್ಯಗ್ರಹಣವೇ. ಮೋಡದ ವಾತಾವರಣವಿರುವುದರಿಂದ ಬೆಂಗಳೂರಲ್ಲೂ ಪಾರ್ಶ್ವ ಸೂರ್ಯಗ್ರಹಣ ಸಾಧ್ಯತೆಯಿದೆ.
1900ರಿಂದ 2000 ರವರೆಗೆ ಸುಮಾರು 31 ಸೂರ್ಯಗ್ರಹಣಗಳು ಕರ್ನಾಟಕಕ್ಕೆ ಸಂಬಂಧಿಸಿ ಸಂಭವಿಸಿವೆ. ಅವುಗಳಲ್ಲಿ 1980ರ ಒಂದು ಗ್ರಹಣ ಮಾತ್ರ ಖಗ್ರಾಸ ಸೂರ್ಯಗ್ರಹಣ. ಉಳಿದೆಲ್ಲವೂ ಪಾರ್ಶ್ವ ಸೂರ್ಯಗ್ರಹಣಗಳು. ಇಡೀ ಶತಮಾನಕ್ಕೊಂದು ಖಗ್ರಾಸ. ಇದೇ ರೀತಿ ಈ ಶತಮಾನದಲ್ಲಿ ಸುಮಾರು 32 ಸೂರ್ಯಗ್ರಹಣಗಳು ಕರ್ನಾಟಕದವರಿಗೆ ಗೋಚರಿಸುವುದಾದರೂ ಇದರಲ್ಲಿ ಎರಡು ಮಾತ್ರ ಕಂಕಣ ಸೂರ್ಯಗ್ರಹಣ. 2019 ಡಿ. 26 ಮತ್ತು 2064 ಫೆಬ್ರವರಿ 17 ಮಾತ್ರ. 2010ರಲ್ಲಿ ಕಂಕಣ ಗ್ರಹಣ ಗೋಚರವಾಗಿತ್ತು.
ಮೋಡಗಳು ದಟ್ಟವಾಗಿ ಆವರಿಸಿಕೊಂಡರೆ, ಮೋಡ ಮುಸುಕಿದ ವಾತಾವರಣವಿದ್ದರೆ ಸೂರ್ಯಗ್ರಹಣ ಗೋಚರವಾಗುವುದಿಲ್ಲ. ಇಂದು ಸಹ ಸಿಲಿಕಾನ್ ಸಿಟಿಯಲ್ಲಿ ಮೋಡ ಮುಸುಕಿದ ವಾತಾವರಣ ಇದೆ. ಈ ವಾತಾವರಣ ಇನ್ನೂ ಎರಡು ದಿನಗಳ ಕಾಲ ಮುಂದುವರೆಯಲಿದೆ. ಹೀಗಾಗಿ‌ ನಾಳೆ ಗ್ರಹಣ ಗೋಚರವಾಗೋದು ಅನುಮಾನ ಎಂದು ಬೆಂಗಳೂರು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದ್ದಾರೆ.
ಮಡಿಕೇರಿ, ಚಾಮರಾಜನಗರ, ಊಟಿ, ಕಣ್ಣೂರು, ಕೊಯಮತ್ತೂರು, ಮಧುರೈನಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗುತ್ತದೆ.
ಬರಿಗಣ್ಣಿಂದ ನೋಡಲೇಬಾರದು
ನಾಳೆ ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಪ್ರಮೋದ್ ಗಲಗಲಿ ಎಚ್ಚರಿಕೆ ನೀಡಿದ್ದಾರೆ. ಸುರಕ್ಷಿತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು.

ಮತ್ತಷ್ಟು ಸುದ್ದಿಗಳು

Latest News

ಹಣಕ್ಕೆ ಬೇಡಿಕೆ ಆರೋಪ: ಸಚಿವ ಅಶೋಕ್ ಪಿ ಎ ವಿರುದ್ಧ ದೂರು ದಾಖಲು

Newsics.com ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಂಗಾಧರ್ ಅವರು ಹಣಕ್ಕೆ ಬೇಡಿಕೆ...

ಒಂದೇ ದಿನ 9102 ಜನರಿಗೆ ಕೊರೋನಾ ಸೋಂಕು,117 ಮಂದಿ ಸಾವು

Newsics com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಇಳಿಮುಖವಾಗುತ್ತಿದೆ.ಕಳೆದ  24 ಗಂಟೆಯಲ್ಲಿ  9,102 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.76,838 ಕ್ಕೆ ತಲುಪಿದೆ.    ಕಳೆದ 24 ಗಂಟೆಯಲ್ಲಿ ಕೊರೋನಾ...

2022ರ ದೀಪಾವಳಿ ವೇಳೆಗೆ ದುಬೈನಲ್ಲಿ ಹೊಸ ಹಿಂದೂ ದೇಗುಲ ಲೋಕಾರ್ಪಣೆ

newsics.comದುಬೈ (ಯುಎಇ): ಮುಂದಿನ ವರ್ಷದ (2022) ದೀಪಾವಳಿ ಹೊತ್ತಿಗೆ ದುಬೈನಲ್ಲಿ ಹೊಸ ಹಿಂದೂ ದೇವಾಲಯವೊಂದು ಲೋಕಾರ್ಪಣೆಗೊಳ್ಳಲಿದೆ.ಅರೇಬಿಯನ್ ವಾಸ್ತುಶಿಲ್ಪ ಸೌಂದರ್ಯವನ್ನು ದೇವಾಲಯ ಹೊಂದಿರುತ್ತದೆ. 11 ಹಿಂದೂ ದೇವತೆಗಳನ್ನು ಈ ದೇಗುಲದಲ್ಲಿ ದರ್ಶಿಸಬಹುದಾಗಿದೆ...
- Advertisement -
error: Content is protected !!