newsics.com
ಬಲರಾಮ್‍ಪುರ್(ಉತ್ತರ ಪ್ರದೇಶ): ಹತ್ರಾಸ್ ಪ್ರಕರಣದ ಬೆನ್ನಲ್ಲೇ ಇಲ್ಲಿನ ಬಲರಾಮ್‍ಪುರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದ್ದು, ಸಂತ್ರಸ್ತ ಮಹಿಳೆ ಮೃತಪಟ್ಟಿದ್ದಾಳೆ.
ನಾಲ್ವರು ನೀಚರಿಂದ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆಯಿಂದ ದೇಶಾದ್ಯಂತ ವ್ಯಾಪಕ ಆಕ್ರೋಶ ಭುಗಿಲೆದ್ದಿರುವಾಗಲೇ ಈ ಘಟನೆ ನಡೆದಿದೆ.
ಹತ್ರಾಸ್‍ನಿಂದ ಸುಮಾರು 500 ಕಿ.ಮೀ. ದೂರದಲ್ಲಿರುವ ಬಲರಾಮ್‍ಪುರ್ ಗ್ರಾಮದಲ್ಲಿ ಕಾಮುಕರು 22 ವರ್ಷದ ದಲಿತ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಲೈಂಗಿಕ ಹಿಂಸೆ ಮತ್ತು ತೀವ್ರ ಹಲ್ಲೆಯಿಂದ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಮಾರ್ಗಮಧ್ಯದಲ್ಲೇ ಆಕೆ ಕೊನೆಯುಸಿರೆಳೆದರು. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಮೂವರನ್ನು ಬಂಧಿಸಲಾಗಿದೆ.
ಹತ್ರಾಸ್‍ನಲ್ಲಿ ಸೆ.24ರಂದು ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಮರಣಾಂತಿಕ ಹಲ್ಲೆ ನಡೆದಿತ್ತು. ನಂತರ ಆಕೆಯನ್ನು ಅಲಿಗಢದ ಎಎಂಯುನ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಸೇರಿಸಲಾಗಿತ್ತು. ಸಾಮೂಹಿಕ ಅತ್ಯಾಚಾರ ವೇಳೆ ದುಷ್ಕರ್ಮಿಗಳು ಆಕೆಯ ಉಸಿರುಗಟ್ಟಿಸಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಯುವತಿಯು ನಾಲಿಗೆ ತುಂಡಾಗಿತ್ತು. ಹತ್ರಾಸ್ ಪ್ರಕರಣ ಸಂಬಂಧ ಎಲ್ಲ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.