newsics.com
ನವದೆಹಲಿ: ಗಣರಾಜ್ಯೋತ್ಸವ ಪರೇಡ್ ಪಾಲ್ಗೊಳ್ಳಲು ದೆಹಲಿಯಲ್ಲಿ ಸಿದ್ಧತೆ ನಡೆಸಿದ್ದ ಸೈನಿಕರ ಪೈಕಿ 150 ಸೈನಿಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.
ಗಣರಾಜ್ಯೋತ್ಸವ ಮತ್ತು ಸೇನಾ ದಿನದ ಮೆರವಣಿಗೆಯಲ್ಲಿ ಭಾಗವಹಿಸಲು ದೇಶದ ವಿವಿಧೆಡೆಯಿಂದ ಕಳೆದ ವಾರ ದೆಹಲಿಗೆ ಆಗಮಿಸಿರುವ 2 ಸಾವಿರಕ್ಕೂ ಹೆಚ್ಚು ಸೈನಿಕರ ಪೈಕಿ 150 ಸೇನಾ ಸಿಬ್ಬಂದಿಗೆ ಸೋಕು ತಗುಲಿರುವುದು ಧೃಡಪಟ್ಟಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿದ್ದು, ಕೋವಿಡ್ 19 ಕಡ್ಡಾಯ ಪರೀಕ್ಷೆಯ ಸಮಯದಲ್ಲಿ ಸೋಂಕು ಪತ್ತೆಯಾಗಿದೆ.
ಮೂಲಗಳ ಪ್ರಕಾರ, ಕಂಟೋನ್ಮೆಂಟ್ ಪ್ರದೇಶದಲ್ಲಿ ಸುರಕ್ಷಿತ ಪ್ರದೇಶ(ಸೇಫ್ ಬಬಲ್) ವ್ಯವಸ್ಥೆ ಮಾಡಲಾಗಿದ್ದು, ಈ ವಿಶಾಲ ಕ್ಯಾಂಪಸ್ನಲ್ಲಿ ಉಳಿಯುವ ಸೇನಾ ಸಿಬ್ಬಂದಿ ಗಣರಾಜ್ಯೋತ್ಸವದ ಆಚರಣೆ ಮುಗಿಯುವವರೆಗೂ ಹೊರಜಗತ್ತಿನ ಜತೆ ಸಂಪರ್ಕ ಹೊಂದಿರುವುದಿಲ್ಲ. ಜನವರಿ 15ಕ್ಕೆ ಸೇನಾ ದಿನ ಆಚರಣೆ ಮಾಡಲಾಗುತ್ತಿದ್ದು, ಕೋವಿಡ್ 19 ಪಾಸಿಟಿವ್ ಬಂದಿರುವ ಸೇನಾ ಸಿಬ್ಬಂದಿ ಅಷ್ಟರೊಳಗೆ ಕ್ವಾರಂಟೈನ್ ಮುಗಿಸಿ ಸೇಫ್ ಬಬಲ್ ಸೇರಬಹುದಾಗಿದೆ.