ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಧ್ಯ ಏಷ್ಯಾ ಮತ್ತು ಭಾರತದಲ್ಲೇ ಅತ್ಯಂತ ಶ್ರೇಷ್ಠ ವಿಮಾನ ನಿಲ್ದಾಣ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿಗೆ ಈ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ. 11 ವರ್ಷ ಹಳೆಯದಾದ ಬೆಂಗಳೂರಿನ ಈ ವಿಮಾನ ನಿಲ್ದಾಣಕ್ಕೆ ಇದು ಬಹುದೊಡ್ಡ ಸಾಧನೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಸಿಇಒ ಹರಿ ಕೆ. ಮರಾರ್ ಪ್ರತಿಕ್ರಿಯಿಸಿದ್ದಾರೆ.
ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವ ನೀಡಲು ಬೇಕಾದ ಅಗತ್ಯ ತಂತ್ರಜ್ಞಾನವನ್ನು ನಾವು ಹೊಂದಿದ್ದೇವೆ ಎಂದು ಹರಿ ಹೇಳಿದ್ದಾರೆ. 6 ತಿಂಗಳಲ್ಲಿ ವಿಶ್ವ ವಿಮಾನ ನಿಲ್ದಾಣ ಸಮೀಕ್ಷೆ ಪ್ರಶ್ನಾವಳಿಗಳನ್ನು ದೇಶದ ನೂರಾರು ಪ್ರಯಾಣಿಕರ ಮುಂದಿಟ್ಟು ಬಂದಿರುವ ಉತ್ತರಗಳನ್ನು ಸಂಗ್ರಹಿಸಿ ವರದಿ ತಯಾರಿಸಲಾಗಿದೆ. 2019ರ ಸಾಲಿನಲ್ಲಿ 3.36 ಕೋಟಿ ಜನರು ಪ್ರಯಾಣಿಸಿರುವ ಬಗ್ಗೆ ದಾಖಲಾಗಿದ್ದು, ಕಳೆದ 2018ರಲ್ಲಿ 3 ಕೋಟಿ 23 ಲಕ್ಷ 30 ಸಾವಿರ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದ್ದರು ಎಂದು ಹರಿ ಮಾಹಿತಿ ನೀಡಿದ್ದಾರೆ.