♦ ಐವರು ಚೀನಾ ಸೈನಿಕರ ಸಾವು
ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯೇ ಪ್ರಚೋದನಕಾರಿ ವರ್ತನೆ ತೋರಿದೆ ಎಂದು ಚೀನಾ ಆರೋಪಿಸಿದೆ.
ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳದಂತೆ ಅಥವಾ ತೊಂದರೆ ಕೊಡದಂತೆ ಚೀನಾ ವಿದೇಶಾಂಗ ಸಚಿವಾಲಯ ಭಾರತಕ್ಕೆ ಎಚ್ಚರಿಕೆ ನೀಡಿದೆ.
ಗಡಿಯಲ್ಲಿ ಭಾರತೀಯ ಸೈನಿಕರು ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ನಡೆದ ದಾಳಿಯಲ್ಲಿ ಮೂವರು ಭಾರತೀಯ ಸೈನಿಕರು ಹತ್ಯೆಗೀಡಾಗಿದ್ದಾರೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಡೆದ ಘರ್ಷಣೆಯಲ್ಲಿ ಓರ್ವ ಸೇನಾಧಿಕಾರಿ ಸೇರಿದಂತೆ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ, ಐವರು ಚೀನಾ ಸೈನಿಕರು ಸಾವನ್ನಪ್ಪಿದ್ದಾರೆ. 11 ಸೈನಿಕರು ಗಂಭೀರ ಗಾಯಗೊಂಡಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ಭಾರತ ಹಾಗೂ ಚೀನಾದ ಹಿರಿಯ ಮಿಲಿಟರಿ ಅಧಿಕಾರಿಗಳು ಸಭೆ ನಡೆಸುತ್ತಿರುವುದಾಗಿ ಸೇನಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಐದು ವಾರದಿಂದಲೂ ಗಾಲ್ವಾನ್ ಕಣಿವೆಯಲ್ಲಿ ಉಭಯ ರಾಷ್ಟ್ರಗಳು ಹೆಚ್ಚಿನ ಸಂಖ್ಯೆಯ ಸೇನಾ ಜಮಾವಣೆ ಮಾಡುವ ಮೂಲಕ ಪರಿಸ್ಥಿತಿ ಬಿಗಡಾಯಿಸಿದೆ. ಗಾಲ್ವಾನ್ ಕಣಿವೆಯಿಂದ ಎರಡೂ ಕಡೆಯ ಯೋಧರು ಹೊರಹೋಗಲು ನಿರ್ಧರಿಸಿದ್ದಾರೆಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರಾವಣೆ ಹೇಳಿದ ಬೆನ್ನಲ್ಲೇ ಘರ್ಷಣೆ ನಡೆದು ಮೂವರು ಹುತಾತ್ಮರಾಗಿದ್ದಾರೆ.
http://134.209.153.225/face-off-with-chinese-troops-in-ladakh/