ಮಂತ್ರಾಲಯ: ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಹೆಸರುವಾಸಿಯಾಗಿರುವ ಮಂತ್ರಾಲಯದಲ್ಲಿ ಅರ್ಚಕರೊಬ್ಬರಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ. ಇದು ಭಕ್ತರಲ್ಲಿ ಸಹಜವಾಗಿಯೇ ಆತಂಕ ಸೃಷ್ಟಿಸಿದೆ. ಆರಾಧನ ಮಹೋತ್ಸವದ ಮೇಲೆ ಇದು ಕರಿನೆರಳು ಬೀರುವುದೇ ಎಂಬ ಭಯ ಭಕ್ತರನ್ನು ಕಾಡುತ್ತಿದೆ. ಮಂತ್ರಾಲಯ ಗ್ರಾಮದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ವ್ಯಾಪಾರಿಯೊಬ್ಬರು ಮಂತ್ರಾಲಯದಲ್ಲಿ ಈಗಾಗಲೇ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅವರ ಕುಟುಂಬದ ಮೂವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಿದೆ.
ಇನ್ನೊಂದೆಡೆ ರಾಜ್ಯದಲ್ಲಿ ಪೊಲೀಸರ ಮೇಲೆ ಕೊರೋನಾದ ದಾಳಿ ಮುಂದುವರಿದಿದೆ. ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯನ್ನು ಎರಡನೇ ಬಾರಿ ಸೀಲ್ ಡೌನ್ ಮಾಡಲಾಗಿದೆ. ಮೂವರು ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ಸೋಂಕಿನ ಲಕ್ಷಣ ಕಂಡು ಬಂದಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ನಾಲ್ಕು ಪೊಲೀಸ್ ಠಾಣೆಗಳನ್ನು ಮತ್ತೆ ಸೀಲ್ ಡೌನ್ ಮಾಡಲಾಗಿದೆ. ಇಳಕಳ್, ತೇರದಾಳ, ಬನಹಟ್ಟಿ ಮತ್ತು ಬಾಗಲಕೋಟೆ ನಗರ ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ನಾಲ್ವರು ಪೊಲೀಸರಲ್ಲಿ ಸೋಂಕಿನ ಲಕ್ಷಣ ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.