ನವದೆಹಲಿ: ಚೀನಾದ ವುಹಾನ್ ನಗರದಲ್ಲಿರುವ ಸುಮಾರು 350 ಭಾರತೀಯ ನಾಗರಿಕರನ್ನು ಕರೆತರಲು ಭಾರತದ ಏರ್ ಇಂಡಿಯಾ ವಿಮಾನ ದೆಹಲಿಯಿಂದ ಪ್ರಯಾಣ ಆರಂಭಿಸಿದೆ.
ಏರ್ ಇಂಡಿಯಾ ಬೋಯಿಂಗ್ 747 ವಿಮಾನ ‘ಅಜಂತಾ’, ಮಧ್ಯಾಹ್ನ 1.18 ಗಂಟೆ ಸುಮಾರಿಗೆ ವುಹಾನ್ ನತ್ತ ಹಾರಾಟ ಆರಂಭಿಸಿದ್ದು, ರಾತ್ರಿ 9 ಗಂಟೆಗೆ ಅಲ್ಲಿಂದ ಮರಳಿ ದೆಹಲಿಯತ್ತ ಪ್ರಯಾಣ ಬೆಳೆಸಲಿದೆ. ವಿಮಾನದಲ್ಲಿ ಸೋಂಕಿನ ಲಕ್ಷಣಗಳನ್ನು ಹೊಂದಿರದ ಭಾರತೀಯರನ್ನು ಮಾತ್ರ ಮರಳಿ ಕರೆತರಲಾಗುವುದು. ವಿಮಾನದಲ್ಲಿ ತುರ್ತು ವೈದ್ಯಕೀಯ ಸೌಲಭ್ಯ, ಮಾಸ್ಕ್ ಹಾಗೂ ಆಹಾರದ ಪೊಟ್ಟಣಗಳನ್ನು ಸಾಗಿಸಲಾಗುವುದು. ವಿಮಾನದಲ್ಲಿರುವ 16 ಸಿಬ್ಬಂದಿ, ಪ್ರಯಾಣಿಕರ ಸಂಪರ್ಕಕ್ಕೆ ಬರದಂತೆ ಎಚ್ಚರವಹಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.