ಗೋರಖ್ಪುರ: ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ದೇಶದ ಮೊದಲ ತೃತೀಯಲಿಂಗಿಗಳ ವಿಶ್ವವಿದ್ಯಾಲಯ ಆರಂಭವಾಗಲಿದೆ.
ತೃತೀಯಲಿಂಗಿ ಸಮುದಾಯದವರನ್ನು ಬಲಪಡಿಸುವ ನಿಟ್ಟಿನಲ್ಲಿ ನಿರ್ಮಾಣವಾಗುವ ವಿಶ್ವವಿದ್ಯಾಲಯದಲ್ಲಿ ಒಂದನೇ ತರಗತಿಯಿಂದ ಪದವಿ ಮತ್ತು ಉನ್ನತ ಪದವಿವರೆಗೂ ತಡೆರಹಿತ ಶಿಕ್ಷಣ ಪಡೆಯಬಹುದಾಗಿದೆ.
ಇತ್ತೀಚೆಗೆ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ್ದು, ಖುಷಿನಗರದ ಫಾಜಿಲ್ನಗರ ಬ್ಲಾಕ್ನಲ್ಲಿ ವಿಶ್ವವಿದ್ಯಾಲಯ ಆರಂಭಗೊಳ್ಳಲಿದೆ. ಅಖಿಲ ಭಾರತೀಯ ಕಿನ್ನಾರ್ ಶಿಕ್ಷಾ ಸೇವಾ ಟ್ರಸ್ಟ್(ಆಲ್ ಇಂಡಿಯಾ ಟ್ರ್ಯಾನ್ಸ್ಜೆಂಡರ್ ಎಜಿಕೇಷನ್ ಟ್ರಸ್ಟ್) ವಿವಿ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.
ಜನವರಿಯಿಂದಲೇ ವಿಶ್ವವಿದ್ಯಾಲಯವು ಔಪಚಾರಿಕವಾಗಿ ಆರಂಭಗೊಳ್ಳಲಿದೆ. ಜನವರಿ ಅಥವಾ ಫೆಬ್ರವರಿಯಿಂದ ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣ ಮೋಹನ್ ಮಿಶ್ರಾ ತಿಳಿಸಿದ್ದಾರೆ.