Saturday, November 26, 2022

ಕೋವ್ಯಾಕ್ಸೀನ್‌ ಲಸಿಕೆಯಲ್ಲಿ ಹಸುವಿನ ಅಂಶ?

Follow Us

ಎಲ್ಲ ಲಸಿಕೆ ಸೃಷ್ಟಿಯಲ್ಲೂ ಇದೇ ಪದ್ಧತಿ

ಭಾರತ್‌ ಬಯೋಟೆಕ್‌ ನಿರ್ಮಿತ ಕೋವ್ಯಾಕ್ಸೀನ್‌ ಲಸಿಕೆಯಲ್ಲಿ ಹಸುವಿನ ಅಂಶವನ್ನು ಬಳಕೆ ಮಾಡಲಾಗುತ್ತದೆ ಎನ್ನುವ ಹೊಸ ಅಪಪ್ರಚಾರ ಶುರುವಾಗಿದೆ. ಕೋವಿಡ್‌ ಲಸಿಕೆಯೊಂದಲ್ಲ, ಜಗತ್ತಿನ ಬಹುಪಾಲು ಎಲ್ಲ ಲಸಿಕೆ ನಿರ್ಮಾಣದಲ್ಲೂ ದಶಕಗಳಿಂದ ಹಸುವಿನ ಅಂಶವನ್ನು ಬಳಕೆ ಮಾಡಲಾಗುತ್ತಿದೆ. ಅಷ್ಟಕ್ಕೂ ಲಸಿಕೆಯಲ್ಲಿ ಅದರ ಅಂಶವಿರುವುದಿಲ್ಲ. ಈ ಬಗ್ಗೆ ಗಮನ ನೀಡದೆ ಎಲ್ಲರೂ ಲಸಿಕೆ ಪಡೆಯುವುದು ಸದ್ಯದ ಗುರಿಯಾಗಲಿ.

newsics.com Features Desk

ದೇಶೀಯ ಕೋವ್ಯಾಕ್ಸಿನ್‌ ಲಸಿಕೆಯನ್ನು ಹೆಚ್ಚು ಪ್ರಚಾರಪಡಿಸುವಲ್ಲಿ ಕೇಂದ್ರ ಸರ್ಕಾರ ನಿರತವಾಗಿರುವಾಗಲೇ ಈ ಲಸಿಕೆ ಕುರಿತಾದ ಒಂದು ಮಾಹಿತಿ ಭಾರತೀಯರ ನಿದ್ದೆಗೆಡಿಸಿದೆ. “ಇದು ಹೌದೇ?ʼ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದಕ್ಕೆ ಕಾರಣ, ಕಾಂಗ್ರೆಸ್‌ ಮುಖಂಡರೊಬ್ಬರು ಮಾಡಿದ ಟ್ವೀಟ್. “ಕೋವ್ಯಾಕ್ಸಿನ್‌ ಲಸಿಕೆಯನ್ನು ಗೋವಿನ ಕರುವಿನ ರಕ್ತಸಾರ ಬಳಸಿ ಮಾಡಲಾಗುತ್ತದೆʼ ಎನ್ನುವ ಟ್ವೀಟ್‌ ಈಗ ಎಲ್ಲರ ನಿದ್ದೆಗೆಡಿಸಿದೆ.
ಬಹುತೇಕ ಭಾರತೀಯರು ಗೋವಿನ ಆರಾಧಕರು. ಹೀಗಿರುವಾಗ, ದೇಶೀಯ ನಿರ್ಮಿತ ಲಸಿಕೆಗೆ ಗೋವಿನ ಅಂಶ ಬಳಸುವುದಕ್ಕೆ ಅವರ ಮನಸ್ಸು ಒಪ್ಪಲಾರದು. ಆದರೆ, ವೈಜ್ಞಾನಿಕ ಸತ್ಯಗಳು ಬೇರೆಯೇ ಇರುತ್ತವೆ. ಕಾಂಗ್ರೆಸ್‌ ಮುಖಂಡರು ಮಾಡಿರುವ ಟ್ವೀಟ್ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕಾಗಿ ಬಂತು. ಜತೆಗೆ, ಈ ಲಸಿಕೆ ತಯಾರಿಸುತ್ತಿರುವ ಭಾರತ್‌ ಬಯೋಟೆಕ್‌ ಕೂಡ ಇದೀಗ ಸ್ಪಷ್ಟನೆ ನೀಡಿದೆ.
ಯಾವುದೇ ಲಸಿಕೆಯನ್ನು ತಯಾರಿಸುವಾಗ ಬಹಳಷ್ಟು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಪ್ರಾಥಮಿಕ ಕೋಶಗಳನ್ನು ಸೃಷ್ಟಿಸುವ ಹಂತದಿಂದ ಹಿಡಿದು ಅಂತಿಮ ಹಂತದ ಲಸಿಕೆ ನಿರ್ಮಾಣವಾಗುವವರೆಗಿನ ಹಾದಿ ಬಹು ಸಂಕೀರ್ಣವಾಗಿರುತ್ತದೆ. ವೆರೊ ಕೋಶಗಳನ್ನು ಸೃಷ್ಟಿಸುವ ಹಂತದಲ್ಲಿ ಆಗ ತಾನೇ ಜನಿಸಿದ ಕರುವಿನ ರಕ್ತಸಾರ ಅಥವಾ ಹಾಲೊಡಕು ಎಂದು ಕರೆಯಲ್ಪಡುವ ಅಂಶವನ್ನು ಬಳಕೆ ಮಾಡಲಾಗುತ್ತದೆ. ಜೀವಂತ ಕೋಶಗಳ ಸೃಷ್ಟಿಗೆ ವೆರೋ ಕೋಶಗಳ ಅಗತ್ಯವಿರುತ್ತದೆ. ಇದು ದಶಕದಿಂದಲೂ ಎಲ್ಲ ಲಸಿಕೆಯಲ್ಲೂ ಬಳಕೆಯಾಗುತ್ತಿರುವ ಪದ್ಧತಿ. ಪೋಲಿಯೋ, ರೇಬೀಸ್‌, ಇನ್‌ ಫ್ಲುಯೆಂಜಾ ದಂತಹ ಯಾವುದೇ ಲಸಿಕೆಗೆ ಇದೇ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.
ಕೋಶಗಳು ವೃದ್ಧಿಯಾದ ಬಳಿಕ, ವೆರೋ ಕೋಶಗಳನ್ನು ನೀರು ಮತ್ತು ರಾಸಾಯನಿಕ ಬಳಸಿ ನಾಶಪಡಿಸಲಾಗುತ್ತದೆ. ಇಲ್ಲಿಯೂ ಹಲವಾರು ಹಂತಗಳಿರುತ್ತವೆ. ಇದನ್ನು ಬಫರ್‌ ಎಂದು ಕರೆಯಲಾಗುತ್ತದೆ. ಇದನ್ನು ಹಲವಾರು ಬಾರಿ ಮಾಡಿದ ಬಳಿಕವೇ ಲಸಿಕೆಯ ಮುಂದಿನ ಹಂತಕ್ಕೆ ಸಾಗಬಹುದು. ಪ್ರಸಕ್ತ ಲಸಿಕೆಯಲ್ಲಿ, ಕೊರೋನಾ ವೈರಸ್‌ ಗಳು ವೃದ್ಧಿಯಾಗಲಷ್ಟೆ ವೆರೋ ಕೋಶಗಳ ಬಳಕೆಯಾಗಿರುತ್ತದೆ. ನಂತರ, ವೆರೋ ಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಬಳಿಕ, ಕೊರೋನಾ ವೈರಸ್‌ ಗಳನ್ನು ಸಹ ಸಕ್ರಿಯವಾಗಿರದಂತೆ ಮಾಡಲಾಗುತ್ತದೆ, ಶುದ್ಧೀಕರಿಸಲಾಗುತ್ತದೆ. ಹೀಗೆ, ಕ್ರಿಯಾರಹಿತವಾದ ಕೊರೋನಾ ವೈರಸ್‌ ಗಳನ್ನೇ ಅಂತಿಮವಾಗಿ ಲಸಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಅದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕೊರೋನಾ ವೈರಸ್‌ ವಿರುದ್ಧ ರೋಗನಿರೋಧಕತೆ ಸಾಧ್ಯವಾಗುವಂತೆ ಮಾಡುತ್ತದೆ.
ಕೊರೋನಾ ಸೇರಿದಂತೆ ಯಾವುದೇ ಲಸಿಕೆಯಲ್ಲಿ ನೇರವಾಗಿ ಕರುವಿನ ರಕ್ತಸಾರವಾಗಲೀ, ವೆರೋ ಕೋಶಗಳಾಗಲೀ ಇರುವುದಕ್ಕೆ ಸಾಧ್ಯವೇ ಇಲ್ಲ.
ಇದನ್ನೇ ಕೇಂದ್ರ ಸರ್ಕಾರ ಹಾಗೂ ಭಾರತ್‌ ಬಯೋಟೆಕ್‌ ಗಳು ಸ್ಪಷ್ಟನೆ ನೀಡಿವೆ. ಅಪೂರ್ಣ ಹಾಗೂ ಅಸಾಂದರ್ಭಿಕ ಮಾಹಿತಿಗಳು ಕೆಲವೊಮ್ಮೆ ಅನಗತ್ಯ. ದೇಶಕ್ಕೆ ದೇಶವೇ ಕೊರೋನಾ ವೈರಸ್‌ ನ ಎರಡನೇ ಅಲೆಯಲ್ಲಿ ಮಲಗಿರುವಾಗ ಇಂಥದ್ದೊಂದು ಅಪಪ್ರಚಾರ ಬೇಕಾಗಿರಲಿಲ್ಲ. ಭಾರತದಂತಹ ದೇಶದಲ್ಲಂತೂ ಇಂಥ ವಿಚಾರಗಳಲ್ಲಿ ಜಾಗರೂಕರಾಗಿರಬೇಕಾದುದು ಅಗತ್ಯ. ಯಾವುದೇ ಊಹಾಪೋಹಗಳಿಗೆ, ಅಪೂರ್ಣ ಮಾಹಿತಿಗೆ, ಗಾಸಿಪ್ಪುಗಳಿಗೆ ಬೆಲೆ ನೀಡದೆ ಲಸಿಕೆ ಹಾಕಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕಿದೆ.

 

 

ಮತ್ತಷ್ಟು ಸುದ್ದಿಗಳು

vertical

Latest News

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು...

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...

ನಟಿ ರಿಚಾ ಚಡ್ಡಾಗೆ ಬೆಂಬಲ ಸೂಚಿಸಿದ ಸ್ವರ ಭಾಸ್ಕರ್

newsics.com ಮುಂಬೈ: ದೇಶದ ಸೇನೆಯನ್ನು ಅವಮಾನ ಮಾಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿರುವ ನಟಿ ರಿಚಾ ಚಡ್ಡಾಗೆ  ನಟಿ ಸ್ವರ ಭಾಸ್ಕರ್ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ರಿಚಾ...
- Advertisement -
error: Content is protected !!