ಶಿಮ್ಲಾ: ಕೊರೋನಾ ಎಲ್ಲೆಡೆಯೂ ಶಾಲೆ ಬಾಗಿಲುಗಳನ್ನು ಮುಚ್ಚಿಸಿದ್ದರೆ, ಆನ್ಲೈನ್ ಶಿಕ್ಷಣದ ಭರಾಟೆ ಜೋರಾಗಿದೆ. ಇದು ಹಲವು ಪಾಲಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು, ಬಡ ಪಾಲಕರು ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಶಿಮ್ಲಾದಲ್ಲೂ ಇಂತಹುದೇ ಘಟನೆಯೊಂದು ವರದಿಯಾಗಿದೆ. ಇಬ್ಬರು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ತಂದೆಯೊಬ್ಬ ಇದ್ದೊಂದು ಹಸುವನ್ನೇ ಮಾರುವ ಮೂಲಕ ಸುದ್ದಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ತಹಸಿಲ್ ಗುಮ್ಮರ್ ಗ್ರಾಮದ ನಿವಾಸಿ ಕುಲದೀಪ್ ಕುಮಾರ್ ಹೀಗೆ ಹಸುವನ್ನು ಮಾರಿದ ವ್ಯಕ್ತಿ.
ಈತನ ಕುಟುಂಬಕ್ಕೆ ಹಸುವೇ ಆಧಾರವಾಗಿತ್ತು. ಆದರೆ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ಸ್ಮಾರ್ಟ ಫೋನ್ ಅಗತ್ಯವಿತ್ತು. ಸ್ಮಾರ್ಟ ಪೋನ್ ಖರೀದಿಸಲು ಹಣವಿಲ್ಲದ ಕಾರಣ ಕುಲದೀಪ್ ಕುಮಾರ್ ಇದ್ದೊಂದು ಹಸುವನ್ನು ಮಾರಿದ್ದಾರೆ. 6 ಸಾವಿರ ರೂಪಾಯಿ ಹಸು ಮಾರಿ ಪೋನ್ ತರಿಸಿಕೊಟ್ಟಿದ್ದಾರೆ.
ಸರ್ಕಾರಿ ಶಾಲೆ ಶಿಕ್ಷಕರು ಮಕ್ಕಳಿಗೆ ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸುವಂತೆ ಒತ್ತಡ ಹೇರಿದ್ದರು. ಹೀಗಾಗಿ ಅನಿವಾರ್ಯವಾಗಿ ಫೋನ್ ಖರೀದಿಸಲು ನಾನು ಹಸುವನ್ನು ಮಾರಿದೆ ಎಂದು ಕುಲದೀಪ್ ಕುಮಾರ್ ವಿವರಣೆ ನೀಡಿದ್ದಾರೆ. ಆದರೆ ಈಗಲೂ ಸಮಸ್ಯೆ ಪೂರ್ತಿಯಾಗಿ ಬಗೆಹರಿದಿಲ್ಲ. ಇಬ್ಬರು ಮಕ್ಕಳಿಗೆ ಒಂದೆ ಮೊಬೈಲ್ ಫೋನ್ ಇದ್ದು, ಒಬ್ಬರು ಕ್ಲಾಸ್ ಅಟೆಂಡ್ ಮಾಡಿದರೆ ಇನ್ನೊಬ್ಬರಿಗೆ ಕ್ಲಾಸ್ ತಪ್ಪುವ ಭೀತಿಯಿಂದ ಕಂಗಾಲಾಗಿ ಅಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಕುಲದೀಪ್ ಮಕ್ಕಳ ಶಿಕ್ಷಣಕ್ಕಾಗಿ ಹಸು ಮಾರಿದ ಸಂಗತಿ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಶಾಸಕರು ಇವರ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ್ದಾರೆ.
ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಾಟ!
Follow Us