ನವದೆಹಲಿ: ರಾಜ್ಯಸಭೆಯಲ್ಲಿ ನಡೆದ ಕೋಲಾಹಲದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಎಂಟು ಸಂಸತ್ ಸದಸ್ಯರು ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿದ್ದಾರೆ. ಇಂದು ಮುಂಜಾನೆ ಅವರಿಗೆ ಅಚ್ಚರಿ ಕಾದಿತ್ತು. ಉಪಸಭಾಪತಿ ಹರಿವಂಶ್ ಅವರು ತಮ್ಮ ಮನೆಯಿಂದಲೇ ಅವರಿಗೆ ಚಹಾ ತಂದಿದ್ದರು. ಉಪಸಭಾಪತಿ ಅವರ ಕಾಳಜಿಗೆ ಸಂಸದರು ಸ್ಪಂದಿಸಿದರು.
ರಾಜ್ಯಸಭೆಯಲ್ಲಿ ಸರ್ಕಾರ ಕೃಷಿ ಸಂಬಂಧಿತ ಮಸೂದೆ ಮಂಡಿಸಿದಾಗ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಉಪಸಭಾಪತಿ ಹರಿವಂಶ್ ಅವರು ಸದನದ ಅಧ್ಯಕ್ಷತೆ ವಹಿಸಿದ್ದರು. ಅವರ ಮೇಲೆ ಕೂಡ ಕಾಗದ ಪತ್ರಗಳನ್ನು ಎಸೆಯಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಎಂಟು ಸಂಸತ್ ಸದಸ್ಯರನ್ನು ಒಂದು ವಾರ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.
ಇದನ್ನು ಪ್ರತಿಭಟಿಸಿ ಈ ಸಂಸತ್ ಸದಸ್ಯರು ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಿದ್ದಾರೆ.