ನವದೆಹಲಿ: ನಿರೀಕ್ಷೆಯಂತೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ದೆಹಲಿಯ ಮೇಲೆ ಹತೋಟಿ ಸಾಧಿಸುವ ಬಿಜೆಪಿಯ ಮಹಾದಾಸೆಗೆ ಎಳ್ಳು ನೀರು ಬಿಟ್ಟಂತಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ರಾಷ್ಟ್ರ ರಾಜಧಾನಿಯ ಮೇಲೆ ಹತೋಟಿ ಸಾಧಿಸಲು ಮುಂದಾದ ಬಿಜೆಪಿ ಮೊದಲ ಹಂತದಲ್ಲಿ ಎಡವಿತು. ಪ್ರಬಲ ನಾಯಕತ್ವದ ಕೊರತೆ ಪಕ್ಷಕ್ಕೆ ಮುಳುವಾಗಿ ಪರಿಣಮಿಸಿತು. ಜೊತೆಗೆ, ದೆಹಲಿ ಅಭಿವೃದ್ಧಿಯ ಚಕಾರವೆತ್ತದೆ ಕೇವಲ ಸಂವಿಧಾನದ 370 ವಿಧಿ ರದ್ದತೆ, ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ತ್ರಿವಳಿ ತಲಾಖ್ ನಂತಹ ಯೋಜನೆಗಳಿಗೆ ಪ್ರಚಾರವನ್ನು ಸೀಮಿತಗೊಳಿಸಿದ್ದು, ಬಿಜೆಪಿಗೆ ಹೀನಾಯ ಸೋಲು ಅನುಭವಿಸುವಂತೆ ಮಾಡಿತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
ದೆಹಲಿಯ ಜನತೆ ಉತ್ತಮ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳು, ಉಚಿತ ವಿದ್ಯುತ್ ಮತ್ತು ನೀರು ಪೂರೈಕೆಗೆ ಮತ ಚಲಾಯಿಸಿದ್ದಾರೆ. ದೆಹಲಿಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಹಠ ತೊಟ್ಟಿದ್ದ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧದ ಪ್ರತಿಭಟನೆಯನ್ನು ಭಾವನಾತ್ಮಕ ವಿಷಯವನ್ನಾಗಿ ಬಳಸಿಕೊಳ್ಳಲು ಬಿಜೆಪಿ ವಿಫಲವಾಗಿದೆ. ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವಧಿಯ ಸಾಧನೆಯನ್ನೇ ಮುಂದಿಟ್ಟು ಪ್ರಚಾರ ನಡೆಸಿತಾದರೂ, ಅದು ಜನತೆಯನ್ನು ತಲುಪಲಿಲ್ಲ.
ಈಗ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಚುನಾವಣಾ ಪ್ರಚಾರದ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳುವು ತುರ್ತು ಅನಿವಾರ್ಯತೆ ಎದುರಾಗಿದೆ.