ನವದೆಹಲಿ: ಭಾನುವಾರ ರಾಜ್ಯಸಭೆಯಲ್ಲಿ ನಡೆದ ಗದ್ದಲ ಮತ್ತು ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಎಂಟು ಸದಸ್ಯರನ್ನು ಒಂದು ವಾರ ಅಮಾನತು ಮಾಡಲಾಗಿದೆ. ರಾಜ್ಯ ಸಭೆಯ ಸಭಾಪತಿ ಕೂಡ ಆಗಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಇದನ್ನು ಪ್ರಕಟಿಸಿದ್ದಾರೆ.
ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ವೆಂಕಯ್ಯ ನಾಯ್ಡು ಅವರು ತಮ್ಮ ನಿರ್ಧಾರ ಪ್ರಕಟಿಸಿದರು. ಸರ್ಕಾರ ಕೃಷಿ ಮಸೂದೆ ಮಂಡಿಸುತ್ತಿರುವುದನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್, ಎಡಪಕ್ಷ , ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಡೆರೇಕ್ ಒಬ್ರೇನ್ ಸಭಾಧ್ಯಕ್ಷರ ಪೀಠದ ಮುಂದೆ ನಿಯಾಮಾವಳಿ ಪುಸಕ್ತ ಹರಿದು ಹಾಕಿದ್ದರು. ಮೈಕ್ ಕಿತ್ತು ಎಸೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ವೆಂಕಯ್ಯ ನಾಯ್ಡು ಅವರು ಸದನದೊಳಗೆ ಅನಾಗರಿಕರಂತೆ ವರ್ತಿಸಿದ್ದ ಎಂಟು ಸದಸ್ಯರನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿದ್ದಾರೆ