ಕೊಚ್ಚಿ: ಆರೋಪಗಳಿಗೆ ಗುರಿಯಾಗಿರುವ ಕೇರಳ ಉನ್ನತ ಶಿಕ್ಷಣ ಸಚಿವ ಕೆ . ಟಿ . ಜಲೀಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದಾರೆ. ಈ ಬೆಳವಣಿಗೆ ಕೇರಳ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಸೌದಿ ಅರೇಬಿಯಾದಿಂದ ಭಾರತಕ್ಕೆ ರಾಜತಾಂತ್ರಿಕ ಮಾರ್ಗದ ಮೂಲಕ ಬಂದ ಪಾರ್ಸೆಲ್ ಗಳಿಗೆ ಸಂಬಂಧಿಸಿದಂತೆ ಸಚಿವ ಜಲೀಲ್ ಅವರನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ಚಿನ್ನ ಕಳ್ಳ ಸಾಗಾಟದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜತೆ ಕೂಡ ಸಚಿವ ಜಲೀಲ್ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.
ಸ್ವಪ್ನಾ ಸುರೇಶ್ , ಸಚಿವ ಜಲೀಲ್ ಅವರಿಗೆ ದೂರವಾಣಿ ಕರೆ ಮಾಡಿ ಅವರ ಸಹಾಯ ಪಡೆಯಲು ಯತ್ನಿಸಿದ್ದರು ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಅವರಿಬ್ಬರ ನಡುವೆ ನಡೆದ ವಾಟ್ಸಾಫ್ ಸಂದೇಶ ಕೂಡ ಬಹಿರಂಗವಾಗಿತ್ತು.
ಆದರೆ ಸಚಿವ ಜಲೀಲ್ , ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ.