ನವದೆಹಲಿ: ಲಡ್ಡು ತಿನ್ನಬೇಕು ಎಂದು ಮನಸ್ಸಾದರೆ ಸೀದಾ ಸ್ವೀಟ್ ಅಂಗಡಿಗೆ ತೆರಳಿ ಲಡ್ಡು ಖರೀದಿಸುತ್ತೇವೆ. ಅಲ್ಲಿ ಲಡ್ಡು ಸೇರಿದಂತೆ ಸಿಹಿ ತಿಂಡಿಗಳನ್ನು ಆಕರ್ಷಕವಾಗಿ ಜೋಡಿಸಿ ಇಟ್ಟಿರುತ್ತಾರೆ. ಆದರೆ ಆ ಸಿಹಿ ತಿಂಡಿಗಳು ಯಾವಾಗ ಸಿದ್ದಪಡಿಸಿದ್ದಾರೆ ಎಂಬ ಮಾಹಿತಿ ಇರುವುದಿಲ್ಲ.
ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳಲಿದೆ. ಚಿಲ್ಲರೆಯಾಗಿ ಮಾರಾಟ ಮಾಡುವ ಎಲ್ಲ ಸಿಹಿತಿಂಡಿಗಳು ಯಾವಾಗ ತಿಂದರೆ ಅತ್ಯುತ್ತಮ.. ಅಂದರೆ ಬಳಕೆಗೆ ಅತೀ ಉತ್ತಮ ಎಂಬುದನ್ನು ಅವುಗಳ ಮೇಲೆ ಸೂಚಿಸಬೇಕಾಗಿದೆ. ಭಾರತ ಆಹಾರ ಗುಣಮಟ್ಟ ನಿಯಂತ್ರಣ ಮಾನದಂಡ ಸಂಸ್ಥೆ ಎಫ್ ಎಸ್ ಎಸ್ ಎ ಐ ಈ ಆದೇಶ ಹೊರಡಿಸಿದೆ.
ಅಕ್ಟೋಬರ್ ಒಂದರಿಂದ ಇದು ಜಾರಿಗೆ ಬರಲಿದೆ. ಬಳಕೆದಾರರಿಗೆ ಅತ್ಯುತ್ತಮ ಗುಣಮಟ್ಟದ ಉತ್ಪನ್ನ ಖಾತರಿಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ವಾರ ಸಾಸಿವೆ ಎಣ್ಣೆಯ ಜತೆಗೆ ಇತರ ಎಣ್ಣೆ ಬೆರಸಿ ಮಾರಾಟ ಮಾಡದಂತೆ ಕೂಡ ಎಫ್ ಎಸ್ ಎಸ್ ಎ ಐ ಕಟ್ಟು ನಿಟ್ಟಿನ ಆದೇಶ ಹೊರಡಿಸಿತ್ತು.