ಮುಂಬೈ: ಭಾರಿ ಮಳೆಯಿಂದ ತತ್ತರಿಸಿದ್ದ ಮುಂಬೈನಲ್ಲಿ ಕಟ್ಟಡವೊಂದು ಕುಸಿದು ಬಿದ್ದಿದ್ದು ಅವಶೇಷಗಳಡಿ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ದಕ್ಷಿಣ ಮುಂಬೈನ ವಸತಿ ಪ್ರದೇಶದಲ್ಲಿ ಘಟನೆ ನಡೆದಿದ್ದು ಐದು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಟ್ಟಡದೊಳಗಿದ್ದ ಐವರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯ ಚುರುಕುಗೊಂಡಿದೆ.
ಸ್ಥಳಕ್ಕೆ ಶಿವಸೇನಾ ಸಂಸದ ಅರವಿಂದ್ ಸಾವಂತ್ ಭೇಟಿ ನೀಡಿದ್ದು ರಕ್ಷಣಾ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕಟ್ಟಡದಲ್ಲಿ ವಾಸವಾಗಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಆದೇಶಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಮುಂಬೈನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಭಾರಿ ಮಳೆಗೆ ಕಟ್ಟಡ ಕುಸಿದಿರಬಹುದೆಂದು ಶಂಕಿಸಲಾಗಿದೆ. ಇದುವರೆಗೂ ಸಾವು ನೋವಿನ ಸಂಖ್ಯೆ ವರದಿಯಾಗಿಲ್ಲ.