ಮುಂಬೈ: ವಿಶ್ವಕ್ಕೆ ಅಪ್ಪಳಿಸಿದ ಕೊರೋನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆ ಮಾಡಿದೆ. ಇದೇ ಕೊರೋನಾ ಎಫೆಕ್ಟ್ ನಿಂದ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕಿಕ್ ಮಾಡೋದನ್ನು ಹೇಳಿಕೊಡ್ತಿದ್ದ ಕೋಚ್ ಒಬ್ಬರು ತರಕಾರಿ ತಗೊಂಡು ಮನೆ ಮನೆಗೆ ತಿರುಗುವಂತೆ ಮಾಡಿದೆ.
ಮುಂಬೈನ ಫುಟ್ಬಾಲ್ ತರಬೇತಿದಾರ ಪ್ರಸಾದ್ ಬೋಸಲೆ ಜೀವನ ನಿರ್ವಹಣೆಗಾಗಿ ಕಾಂಡಿವಿಲಿ ಪ್ರದೇಶದಲ್ಲಿ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಆರಂಭಿಸಿದ್ದಾರೆ.
ಫುಟ್ಬಾಲ್ ಕೋಚ್ ಆಗಿದ್ದಾಗ ಪ್ರತಿ ತಿಂಗಳು 25 ಸಾವಿರ ರೂಪಾಯಿ ಸಂಪಾದಿಸುತ್ತಿದ್ದ ಪ್ರಸಾದ್ ಈಗ ಕೊರೋನಾದಿಂದ ಮತ್ತೆ ಫುಟ್ಬಾಲ್ ಅಂಗಳಕ್ಕೆ ಇಳಿಯುವ ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ ಸ್ನೇಹಿತರಿಂದ ಸಾಲ ಪಡೆದು ತರಕಾರಿ ಅಂಗಡಿ ಇಟ್ಟು ಪ್ರತಿನಿತ್ಯ 300-400 ರೂಪಾಯಿ ಸಂಪಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಂಪಾದನೆ ಹೆಚ್ಚಿಸುವುದಕ್ಕಾಗಿ ಹೋಂ ಡೆಲಿವರಿ ಆರಂಭಿಸಲು ಚಿಂತನೆ ನಡೆಸಿ ಅದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲೂ ಅವರು ಪ್ರಚಾರ ಆರಂಭಿಸಿದ್ದಾರಂತೆ.
ಈ ಬಗ್ಗೆ ಮಾತನಾಡಿರುವ ಪ್ರಸಾದ್, ಮೊದಲು ತರಕಾರಿ ಚೀಲಗಳನ್ನು ಹೊರಲು ನನಗೆ ಮುಜುಗರವಾಯಿತು. ಏಕೆಂದರೆ, ನಾನು ದೈಹಿಕ ಶಿಕ್ಷಣ ಸ್ನಾತಕೋತ್ತರ ಪದವೀಧರ. ಆದರೆ ಬದುಕಲು ಆಯ್ಕೆಗಳೇ ಇಲ್ಲದಿದ್ದಾಗ ಅನಿವಾರ್ಯವಾಯಿತು. ನಾನು ಮನೆಯಲ್ಲಿ ತಂದೆ-ತಾಯಿ ಹಾಗೂ ಸಹೋದರಿಯೊಂದಿಗೆ ವಾಸವಾಗಿದ್ದೇನೆ. ಅವರ ನಿರ್ವಹಣೆ ಹೊಣೆ ನನ್ನ ಮೇಲಿದೆ ಎಂದಿದ್ದಾರೆ.