ನವದೆಹಲಿ: ಆರ್ಥಿಕ ಕ್ಷೇತ್ರದಲ್ಲಿ ಹೊಸ ಬೆಳಕು ಮೂಡುವ ಭರವಸೆಯನ್ನು ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆ ವ್ಯಕ್ತಪಡಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದರು. 2019- 20 ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಮುಂದಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಪ್ರಗತಿ ಶೇಕಡ 6ರಿಂದ 6.5 ಬೆಳವಣಿಗೆ ದರ ದಾಖಲಿಸುವ ವಿಶ್ವಾಸವನ್ನು ಸಮೀಕ್ಷೆ ವ್ಯಕ್ತಪಡಿಸಿದೆ. ಜಾಗತಿಕ ಆರ್ಥಿಕ ಹಿನ್ನಡೆ ದೇಶದ ಅರ್ಥ ವ್ಯವಸ್ಥೆ ಮೇಲೆ ಕೂಡ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯವನ್ನು ಸಮೀಕ್ಷೆ ಪ್ರತಿಪಾದಿಸಿದೆ. ಬೆಳವಣಿಗೆಗೆ ಪೂರಕ ನಿಟ್ಟಿನಲ್ಲಿ 10 ಹೊಸ ಐಡಿಯಾ ಗಳನ್ನು ಸಮೀಕ್ಷೆ ಸೂಚಿಸಿದೆ. ಈರುಳ್ಳಿ ದರ ಹೆಚ್ಚಳ ಸಂದರ್ಭದಲ್ಲಿ ಕೇಂದ್ರದ ಮಾರುಕಟ್ಟೆ ಹಸ್ತಕ್ಷೇಪ ಕ್ರಮ ಪರಿಣಾಮಕಾರಿಯಾಗಿರಲಿಲ್ಲ ಎಂದು ಸಮೀಕ್ಷೆ ಸ್ಪಷ್ಟ ಶಬ್ದಗಳಲ್ಲಿ ತಿಳಿಸಿದೆ.