ತಿರುವನಂತಪುರಂ: ಕೇರಳದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ 30 ಕಿಲೋ ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೂಡ ಪ್ರಕರಣ ದಾಖಲಿಸಿದೆ. ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿರುವ ನಾಲ್ವರು ಆರೋಪಿಗಳ ವಿರುದ್ದ ಜಾರಿ ನಿರ್ದೇಶನಾಲಯ ಎಫ್ ಐ ಆರ್ ದಾಖಲಿಸಿದೆ.
ಸ್ವಪ್ನಾ ಸುರೇಶ್, ಸರಿತ್, ಸಂದೀಪ್ ನಾಯರ್ ಮತ್ತು ರಮೀಸ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಚಿನ್ನ ಮಾರಾಟದಿಂದ ಬಂದ ಹಣವನ್ನು ಆಸ್ತಿ ಖರೀದಿಗೆ ಬಳಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ.
ಈ ಮಧ್ಯೆ ಇಂದು ಕಸ್ಟ್ಂಮ್ಸ್ ಅಧಿಕಾರಿಗಳು ಚಿನ್ನಾಭರಣ ಮಳಿಗೆಯೊಂದರ ಮಾಲೀಕನನ್ನು ವಿಚಾರಣೆ ಸಂಬಂಧ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಈ ಬಂಧನವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಇದೇ ವೇಳೆ ಮಾಜಿ ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಶಿವಶಂಕರ್ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡಿದ್ದಾರೆ. ಅವರ ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮಖ್ಯ ಕಾರ್ಯದರ್ಶಿ ಮತ್ತು ಹೆಚ್ಚು ವರಿ ಮುಖ್ಯ ಕಾರ್ಯದರ್ಶಿ ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ಪ್ರಕರಣದಲ್ಲಿ ಸಚಿವ ಜಲೀಲ್ ಹೆಸರು ಕೂಡ ಕೇಳಿ ಬರುತ್ತಿದೆ. ಆರೋಪಿಗಳ ಜತೆ ಸಚಿವ ಜಲೀಲ್ ಗಂಟೆಗಟ್ಟಲೆ ದೂರವಾಣಿ ಸಂಭಾಷಣೆ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಜಲೀಲ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಬಿಜೆಪಿ ಆಗ್ರಹಿಸಿದೆ.